ಬೈಕ್‌ ಏರಿ ಬೆಳೆ ವೀಕ್ಷಿಸಿದ ಕೃಷಿ ಸಚಿವ

KannadaprabhaNewsNetwork | Published : Jun 28, 2024 12:48 AM

ಸಾರಾಂಶ

ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌, ಸಿಲಿಂಡರ್‌ ದರ ಏರಿಕೆ ಮಾಡಿದಾಗ ಸುಮ್ಮನೆ ಕುಳಿತ ವಿಪಕ್ಷ ನಾಯಕ ಆರ್‌. ಅಶೋಕ ಹಾಲಿನ ದರ ಏರಿಕೆ ಮಾಡಿದಾಗ ಏತಕ್ಕೆ ಪ್ರಶ್ನಿಸುತ್ತಿದ್ದಾರೆ.

ಧಾರವಾಡ:

ರೈತರು ಬೆಳೆದ ಬೆಳೆಗಳನ್ನು ವೀಕ್ಷಿಸಲು ಧಾರವಾಡಕ್ಕೆ ಆಗಮಿಸಿದ್ದ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ರೈತರೊಬ್ಬರ ಬೈಕ್‌ ಮೇಲೆ ಕುಳಿತು ಹೊಲಗಳನ್ನು ವೀಕ್ಷಿಸಿ ಗಮನ ಸೆಳೆದರು.

ಹೆಬ್ಬಳ್ಳಿ ಹಾಗೂ ಸುತ್ತಲಿನ ಹೊಲಗಳಲ್ಲಿ ಕಪ್ಪು ಭೂಮಿ ಇದ್ದು ಹೊಲಗಳ ರಸ್ತೆಯಲ್ಲಿ ಕಾರು ಸಂಚರಿಸುವುದಿಲ್ಲ. ಹೀಗಾಗಿ ಒಂದು ಹೊಲದಿಂದ ಮತ್ತೊಂದು ಹೊಲಕ್ಕೆ ಸಚಿವರು ಬೈಕ್‌ ಮೇಲೆಯೇ ಸಂಚರಿಸಿ ರೈತರು ಬಿತ್ತಿರುವ ಹೆಸರು, ಶೇಂಗಾ, ಉದ್ದು ಬೆಳೆಗಳನ್ನು ವೀಕ್ಷಿಸಿದರು.

ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದಾಗ ಎಲ್ಲಿದ್ದೀರಿ?

ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌, ಸಿಲಿಂಡರ್‌ ದರ ಏರಿಕೆ ಮಾಡಿದಾಗ ಸುಮ್ಮನೆ ಕುಳಿತ ವಿಪಕ್ಷ ನಾಯಕ ಆರ್‌. ಅಶೋಕ ಹಾಲಿನ ದರ ಏರಿಕೆ ಮಾಡಿದಾಗ ಏತಕ್ಕೆ ಪ್ರಶ್ನಿಸುತ್ತಿದ್ದಾರೆ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿರುಗೇಟು ನೀಡಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷ‌ ನಾಯಕ ಸ್ಥಾನಕ್ಕೆ ಅರ್ಹರಾರು ಸಿಗಲಿಲ್ಲ ಎಂಬ ಕಾರಣಕ್ಕೆ ಅಶೋಕ ಅವರನ್ನು ಮಾಡಿದ್ದಾರೆ. ಅವರು ನನಗೆ ಒಳ್ಳೆ ಗೆಳೆಯ ಕೂಡ ಹೌದು. ಆದರೆ, ಯಾವ ಸಂದರ್ಭದಲ್ಲಿ ಯಾವ ಹೇಳಿಕೆ ನೀಡಬೇಕು ಎಂಬುದು ಅಷ್ಟಾಗಿ ಅವರಿಗೆ ಗೊತ್ತಿಲ್ಲ. ಕೇಂದ್ರ ಸರ್ಕಾರ ತೈಲ, ಸಿಲಿಂಡರ್‌ ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದಾಗ, ಇದೇ ರೀತಿ ಟೀಕೆ ಮಾಡಿದ್ದಾರಾ? ಯಾವುದೇ ಸರ್ಕಾರ ಇರಲಿ, ಸಮಯಕ್ಕೆ ತಕ್ಕಂತೆ ಬೆಲೆ ಏರಿಕೆ ಮಾಡಬೇಕಾಗುತ್ತದೆ. ರಾಜ್ಯದಲ್ಲಿ ನಾವು ಒಂದು ನಿಯಂತ್ರಣ ಹಾಗೂ ವೈಜ್ಞಾನಿಕವಾಗಿ ಏರಿಕೆ ಮಾಡಿದ್ದೇವೆ. ಆದರೆ, ಕೇಂದ್ರ ಸರ್ಕಾರ ಅವೈಜ್ಞಾನಿಕವಾಗಿ ಬೆಲೆ ಏರಿಕೆ ಮಾಡಿತ್ತು. ಪಕ್ಕದ ರಾಜ್ಯದಲ್ಲಿ ಹಾಲಿನ ದರ ಕರ್ನಾಟಕಕ್ಕಿಂತ ಹೆಚ್ಚಿದೆ ಎಂಬುದನ್ನು ಬಿಜೆಪಿ ಮುಖಂಡರು ತಿಳಿಯಲಿ ಎಂದರು.ಮುಖ್ಯಮಂತ್ರಿಗಳ ದೆಹಲಿ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತನಾಡಲು ದೆಹಲಿಗೆ ಹೋಗಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನದ ಬಗ್ಗೆ ಚರ್ಚೆ ಸಹ ಮಾಡಲಿದ್ದಾರೆ. ಈ ಕುರಿತು ರಾಜ್ಯದ ಸಂಸದರಿಗೆ ಮಾಹಿತಿ ಕೊಡಲು ಹೋಗಿದ್ದಾರೆ. ಈ ಸಮಯದಲ್ಲಿ ಹೈಕಮಾಂಡ್ ಭೇಟಿ ಮಾಡಿದರೆ ಏನು ತಪ್ಪು? ಎಂದರು.

ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ವಿಚಾರವಾಗಿ ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆದವರು. ಎತ್ತರಕ್ಕೆ ಬೆಳೆದವರು. ಆಸ್ಥಾನ ಗೆಲ್ಲಬೇಕಾದರೆ ಅವರಿಗಿಂತ ನಾವು ಹೆಚ್ಚು ಕಷ್ಟ ಪಡಬೇಕಿದೆ. ಜನರು ಈ ಕ್ಷೇತ್ರದಲ್ಲಿ ಏನು ತೀರ್ಮಾನ ಮಾಡುತ್ತಾರೆ ಕಾದು ನೋಡೋಣ ಎಂದರು.

Share this article