ಒಳಗೆ ಹಾಕಿಸುತ್ತೇನೆಂಬ ಸಚಿವರ ದರ್ಪ ನಡೆಯೋಲ್ಲ

KannadaprabhaNewsNetwork |  
Published : Sep 03, 2025, 01:00 AM IST
2ಕೆಡಿವಿಜಿ4-ದಾವಣಗೆರೆಯಲ್ಲಿ ಮಂಗಳವಾರ ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಮುಸ್ಲಿಮರ ಓಲೈಸುವ ಭರದಲ್ಲಿ ಹಿಂದೂ ಸಂಘಟನೆಗಳ ಮುಖಂಡರು, ಕಾರ್ಯಕರ್ತರಿಗೆ ಒಳಗೆ ಹಾಕಿಸುವುದಾಗಿ ಬೆದರಿಕೆ ಹಾಕಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಮ್ಮ ಅಧಿಕಾರ ಶಾಶ್ವತವಲ್ಲ ಎಂಬುದನ್ನು ಅರಿಯಲಿ ಎಂದು ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ.ಹರೀಶ ಹೇಳಿದ್ದಾರೆ.

- ರೈತರ ಜಮೀನು ಕಬಳಿಕೆ ಬಗ್ಗೆ ನಾನ್ಯಾಕೆ ದಾಖಲೆ ಕೊಡ್ಲಿ, ಸದನದಲ್ಲಿಯೇ ಪ್ರಶ್ನಿಸುವೆ: ಹರಿಹರ ಶಾಸಕ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮುಸ್ಲಿಮರ ಓಲೈಸುವ ಭರದಲ್ಲಿ ಹಿಂದೂ ಸಂಘಟನೆಗಳ ಮುಖಂಡರು, ಕಾರ್ಯಕರ್ತರಿಗೆ ಒಳಗೆ ಹಾಕಿಸುವುದಾಗಿ ಬೆದರಿಕೆ ಹಾಕಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಮ್ಮ ಅಧಿಕಾರ ಶಾಶ್ವತವಲ್ಲ ಎಂಬುದನ್ನು ಅರಿಯಲಿ ಎಂದು ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ.ಹರೀಶ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಹಬ್ಬದ ದಿನವೇ ಗಣೇಶ ವಿಸರ್ಜಿಸಬೇಕಾ, ಮುಸ್ಲಿಮರು ಇರುವಲ್ಲೇ ಫ್ಲೆಕ್ಸ್, ಬ್ಯಾನರ್ ಹಾಕಬೇಕಾ ಅಂತಾ ಹಿಂದೂಗಳಿಗೆ ಬೆದರಿಸುವ, ಹಿಂದೂಗಳನ್ನು ಬದ್ಧವೈರಿಗಳಂತೆ ಒಳಗೆ ಹಾಕಿಸಬೇಕಾಗುತ್ತದೆ ಎಂದಿದ್ದಾರೆ. ಇಂಥ ದರ್ಪದ ಮಾತು ನಡೆಯೋಲ್ಲ ಎಂದು ತೀಕ್ಷ್ಣವಾಗಿ ತಿರುಗೇಟು ನೀಡಿದರು.

ಹಿಂದೂಗಳನ್ನು ಒಳಗೆ ಹಾಕಿಸಲು ಮಲ್ಲಿಕಾರ್ಜುನ ಕೈಯಲ್ಲೇನು ಕೋಲು ಇದೆಯಾ? ಸಚಿವರು ಹೇಳಿದಂತೆ ಪೊಲೀಸರು ಕೇಳುತ್ತಾರಾ? ಜಿಲ್ಲಾ ಉಸ್ತುವಾರಿ ಸಚಿವನಾಗಿ ಶಾಂತಿ ಕಾಪಾಡುವಂತೆ ಹೇಳಲಿ. ಅದನ್ನು ಬಿಟ್ಟು ಬಿಜೆಪಿ ರಾಜಕೀಯ ಅಂತೆಲ್ಲಾ ಹೇಳಿದ್ದು ಸರಿಯಲ್ಲ. ಅಕ್ಕಪಕ್ಕ ಮುಸ್ಲಿಂ ಮುಖಂಡರ ನಿಲ್ಲಿಸಿಕೊಂಡು ಹಿಂದೂಗಳ ವಿರುದ್ಧ ಮಾತನಾಡಿದ್ದು ರಾಜಕೀಯ ಅಲ್ಲವೇ ಎಂದರು.

ನೀವು ಒದ್ದು ಒಳಗೆ ಹಾಕಿಸಲು ನಾವೇನು ಪಾಕಿಸ್ತಾನ, ತಾಲಿಬಾನ್, ಬಾಂಗ್ಲಾ ದೇಶದಲ್ಲಾ ಇದ್ದೇವೆ? ಅಲ್ಲಿನ ಹಿಂದೂಗಳು ಅನುಭವಿಸುವ ನೋವು, ಸಂಕಟ ನೀವೂ ಅಲ್ಲಿಯೇ ಹುಟ್ಟಿದ್ದರೆ ಗೊತ್ತಾಗುತ್ತಿತ್ತು. ನಮ್ಮ ಹಬ್ಬವನ್ನು ಶಾಂತವಾಗಿಯೇ ಮಾಡುತ್ತೇವೆ. ಅಧಿಕಾರ, ಹಣ, ಭ್ರಷ್ಚಾಚಾರದ ಅಮಲಿನಲ್ಲಿ ಸಚಿವರು ತೇಲುತ್ತಿರುವುದು ಒಳ್ಳೆಯದಲ್ಲ. ಮೊದಲು ದುರಂಹಕಾರ ಬಿಡಿ. ಹಗುರ ಮಾತು ಸಲ್ಲದು ಎಂದರು.

- - -

(ಬಾಕ್ಸ್‌) * ಜಮೀನು ದಾಖಲೆ ನಾನೇಕೆ ಎಸ್ಸೆಸ್ಸೆಂಗೆ ತೋರಿಸಲಿ? ವಿಧಾನಸಭೆ ಅಧಿವೇಶನದಲ್ಲಿ ಕಾರ್ಖಾನೆ ಹೆಸರಿನಲ್ಲಿ ರೈತರಿಗೆ ಮೋಸ ಮಾಡಿದ ಬಗ್ಗೆ ನಾನು ಮಾತನಾಡಿದ್ದೆ. ಅದಕ್ಕೆ ಸಚಿವ ಎಂ.ಬಿ.ಪಾಟೀಲ ತಪ್ಪಾಗಿದೆ, ಅಲ್ಲಿನ ರೈತರಿಗೆ ಕೆಐಎಡಿಬಿ ವತಿಯಿಂದ ಜಮೀನು ವಾಪಸ್‌ ಕೊಡಿಸುತ್ತೇವೆ ಎಂದಿದ್ದಾರೆ. ನಾನು ಯಾಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನಗೆ ದಾಖಲೆ ತೋರಿಸಲಿ, ಚರ್ಚೆ ಮಾಡಲಿ ಎಂದು ಶಾಸಕ ಹರೀಶ್ ಪ್ರಶ್ನಿಸಿದರು.

ಈ ಬಗ್ಗೆ ಯಾವಾಗ, ಎಲ್ಲಿ ಪ್ರಶ್ನೆ ಮಾಡಬೇಕೆಂಬುದು ನನಗೆ ಗೊತ್ತು. ಅಲ್ಲಿಯೇ ಧ್ವನಿ ಎತ್ತುತ್ತೇನೆ. ಅಲ್ಲದೇ, ನಾನು ಸದನದಲ್ಲಿ ಚರ್ಚಿಸಿದ್ದೇ ಬೇರೆ ವಿಷಯ. ಸಚಿವ ಮಲ್ಲಿಕಾರ್ಜುನ ಹೇಳಿಕೆ ನೀಡಿದ್ದೇ ಬೇರೆ ವಿಚಾರಕ್ಕೆ ಎಂದು ಕುಟುಕಿದರು.

ದುಗ್ಗಾವತಿ ಕಾರ್ಖಾನೆಗೆ ಹರಪನಹಳ್ಳಿ, ಹರಿಹರ ತಾಲೂಕಿನ ರೈತರ ಜಮೀನಿನ ವಿಚಾರವೂ ಲೋಕಾಯುಕ್ತ ಮೆಟ್ಟಿಲೇರಲಿದೆ. ಅರಣ್ಯ ಜಮೀನು, ಚಿಕ್ಕಬಿದರಿ, ಸಾರಥಿ, ದುಗ್ಗಾವತಿ, ವಟ್ಲಹಳ್ಳಿ ಇತರೆ ಗ್ರಾಮಗಳ 100 ಎಕರೆ, ಅರಣ್ಯ ಇಲಾಖೆಯ 150 ಎಕರೆ, 230 ಎಕರೆ ಇತರೆ ಜಮೀನಿನ ಬಗ್ಗೆ ಸದನದಲ್ಲೇ ಪ್ರಶ್ನಿಸುತ್ತೇನೆ ಎಂದು ಬಿ.ಪಿ.ಹರೀಶ ಎಚ್ಚರಿಸಿದರು.

ಹಳ್ಳಿ, ಗೋಮಾಳ ಅಂತೆಲ್ಲಾ ಅರ್ಥವಿಲ್ಲದ ಮಾತನ್ನು ಜಿಲ್ಲಾ ಸಚಿವರು ಆಡಿದ್ದಾರೆ. ಮಲ್ಲಿಕಾರ್ಜುನ ಬೇಕಿದ್ದರೆ ತಮ್ಮದೇ ಸರ್ಕಾರದ ಸಚಿವ ಎಂ.ಬಿ.ಪಾಟೀಲ ಅವರಿಗೆ ಪ್ರಶ್ನಿಸಲಿ. ರೈತರು ಸುಲಭವಾಗಿ ಜಮೀನು ಬಿಡುವುದಿಲ್ಲ. ಅನ್ಯಾಯಕ್ಕೆ ಒಳಗಾದ ರೈತರಿಗೆ ವಾಪಸ್‌ ಜಮೀನು ಕೊಡಿಸುತ್ತೇನೆ. ಕೋಳಿ ಕೇಳಿ ಸಾಂಬಾರು ಅರೆಯುವ ಕಾಲ ಇದಲ್ಲ ಎಂದರು.

ನಮ್ಮ ಹೋರಾಟ ಇಂದಿಗೂ ಸ್ಮರಿಸುತ್ತಾರೆ:

ನಮ್ಮ ಕುಟುಂಬದ 27 ಎಕರೆ ಸೇರಿದಂತೆ 200 ಎಕರೆ ಶಾಬನೂರು ರಿ.ಸ.ನಂ. ಜಮೀನು ಭೂ ಸ್ವಾಧೀನಕ್ಕೆ ಈ ಹಿಂದೆ ಇದೇ ಮಲ್ಲಿಕಾರ್ಜುನ ಖರ್ಗೆ ಮೂಲಕ ಬಾಪೂಜಿ ವಿದ್ಯಾಸಂಸ್ಥೆಗೆ ಕಬಳಿಸಲು ಹೋದಾಗ ಹೋರಾಟ ಮಾಡಿದ್ದೇ ನಾನು. ನಮ್ಮ ಹೋರಾಟದಿಂದ ಶಾಬನೂರು ಗ್ರಾಮಸ್ಥರಿಂದ ಕೇವಲ ₹1 ಲಕ್ಷ ದರಕ್ಕೆ ಖರೀದಿಸಲು ಹೊರಟಿದ್ದ ಜಮೀನು ಉಳಿದಿದ್ದು, ಇಂದಿಗೂ ಗ್ರಾಮದ ಹಿರಿಯರು ನಮ್ಮ ಹೋರಾಟ ಸ್ಮರಿಸುತ್ತಾರೆ. ಅಂದು ನಮ್ಮ ಜೊತೆಗಿದ್ದವರೇ ಇಂದು ಶಾಮನೂರು ಕುಟುಂಬದೊಂದಿಗೆ ನಿಂತಿದ್ದಾರೆ. ಆವತ್ತು ಎಸ್.ಬಂಗಾರಪ್ಪ, ಜಾಲಪ್ಪ ಬಡರೈತರ ಪರ ನಿಂತಿದ್ದರಿಂದ ಇಂದು ಶಾಬನೂರು ರೈತ ಕುಟುಂಬಗಳು ನಮ್ಮೊಂದಿಗಿದ್ದರು. ಇವತ್ತು ಏನಾದರೂ ಶಾಬನೂರು ರೈತರ ಆಸ್ತಿ, ಜಮೀನು ಉಳಿದಿದ್ದರೆ ಅದು ನನ್ನ ಹೋರಾಟದಿಂದ ಎಂದು ಅವರು ಚಾಟಿ ಬೀಸಿದರು.

ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾ‍ಧವ್‌, ಮುಖಂಡರಾದ ಶಂಕರಗೌಡ ಬಿರಾದಾರ್, ರಾಜು ನೀರ್ಥಡಿ, ಟಿಂಕರ್ ಮಂಜಣ್ಣ ಇತರರು ಇದ್ದರು.

- - -

(ಟಾಪ್‌ ಕೋಟ್‌)

ದಾವಣಗೆರೆ ಮಟ್ಟಿಕಲ್ಲಿನಲ್ಲಿ ಶ್ರೀ ಗಣೇಶ ಪ್ರತಿಷ್ಠಾಪನೆ ಹಿನ್ನೆಲೆ ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್‌ನನ್ನು ವಧೆ ಮಾಡುತ್ತಿರುವ ಇತಿಹಾಸ ಚಿತ್ರದ ಫ್ಲೆಕ್ಸ್ ಹಾಕಲಾಗಿತ್ತು. ಇದರಲ್ಲಿ ಕೋಮು ಭಾವನೆಗೆ ಧಕ್ಕೆ ತರುವ ಮಾತೆಲ್ಲಿದೆ? ಇದು ಭಾರತ, ಬಹುಸಂಖ್ಯಾತರರು ಇರುವ ನೆಲ. ಇಲ್ಲಿ ಶಿವಾಜಿ ಮಹಾರಾಜರ ಫ್ಲೆಕ್ಸ್ ಹಾಕದೇ, ಪಾಕಿಸ್ತಾನ, ಅಪಘಾನಿಸ್ಥಾನಕ್ಕೆ ಹೋಗಿ ಫ್ಲೆಕ್ಸ್‌ ಹಾಕಬೇಕಿತ್ತಾ?

- ಬಿ.ಪಿ.ಹರೀಶ, ಬಿಜೆಪಿ ಶಾಸಕ

- - -

-2ಕೆಡಿವಿಜಿ4.ಜೆಪಿಜಿ:

ದಾವಣಗೆರೆಯಲ್ಲಿ ಮಂಗಳವಾರ ಹರಿಹರ ಕ್ಷೇತ್ರ ಬಿಜೆಪಿ ಶಾಸಕ ಬಿ.ಪಿ.ಹರೀಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV

Recommended Stories

ಜಾಗತಿಕ ಮಟ್ಟದಲ್ಲಿ ಸಾಧನೆ ನಾರಿ ಶಕ್ತಿಗೆ ಸಾಕ್ಷಿ
ಮಕ್ಕಳ ಕಲಿಕೆಯನ್ನು ಸೃಜನಾತ್ಮಕವಾಗಿಸಲು ನಲಿ-ಕಲಿ