ದಿಂಡಾವರ ರಸ್ತೆ ಸರಿಪಡಿಸಲು ಸೂಚಿಸಿದ ಸಚಿವರು

KannadaprabhaNewsNetwork | Published : Nov 25, 2024 1:02 AM

ಸಾರಾಂಶ

ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಪಿಎನ್‌ಸಿ ಕಂಪನಿಯವರ ಜೊತೆ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಟಿಪ್ಪರ್ ಲಾರಿಗಳ ಓಡಾಟದಿಂದ ಹಾಳಾದ ರಸ್ತೆಗಳನ್ನು ಕೂಡಲೇ ಸರಿಪಡಿಸಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರು ಪಿಎನ್‌ಸಿ ಕಂಪನಿಯವರಿಗೆ ಖಡಕ್ ಆಗಿ ಆದೇಶಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಕರೆದಿದ್ದ ಬೀದರ್‌ನಿಂದ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಪಿಎನ್‌ಸಿ ಕಂಪನಿ ಹಾಗೂ ಪೊಲೀಸ್ ಇಲಾಖೆಯವರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರಸ್ತೆ ನಿರ್ಮಾಣಕ್ಕಾಗಿ ಮಣ್ಣು ಸಾಗಿಸಲು ತಾಲೂಕಲ್ಲಿ ಪಿಎನ್‌ಸಿ ಕಂಪನಿಯವರು ಬಳಸುತ್ತಿರುವ ಭಾರಿ ವಾಹನಗಳಿಂದ ತಾಲೂಕಿನ ದಿಂಡಾವರ ಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿದ್ದು ಕೂಡಲೇ ಆ ರಸ್ತೆಗಳನ್ನು ದುರಸ್ತಿ ಮಾಡಿಸಿಕೊಡಬೇಕು. ಲಾರಿಗಳ ಓಡಾಟದಿಂದ ಹಾಳಾದ ರಸ್ತೆಗಳಲ್ಲಿ ಗ್ರಾಮಾಂತರ ಪ್ರದೇಶದ ಜನರು ಓಡಾಡಲಿಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ ಎಂಬ ದೂರುಗಳಿವೆ. ತಾವು ನಿರ್ಮಾಣ ಮಾಡಿರುವ ರಸ್ತೆಗಳ ಅಕ್ಕ ಪಕ್ಕದ ಭಾಗದಲ್ಲಿ ನಾಮಫಲಕಗಳನ್ನು ಅಳವಡಿಸಬೇಕಾಗಿದೆ.

ತಿರುವುಗಳಲ್ಲಿ ಶೀಘ್ರವಾಗಿ ಬೋರ್ಡ್‌ಗಳನ್ನು ಅಳವಡಿಸಿ. ರಸ್ತೆ ದುರಸ್ತಿಯನ್ನು ಆದಷ್ಟು ಬೇಗ ಮಾಡಿಕೊಡಬೇಕು. ರಾಷ್ಟ್ರೀಯ ಹೆದ್ದಾರಿ 150 ಎ ಚಳ್ಳಕೆರೆ ಹಿರಿಯೂರು ರಸ್ತೆಯ 103ರ ತಿರುವಿನಿಂದ ಬೆಂಗಳೂರು ರಸ್ತೆಯ ಬೈಪಾಸ್ ವರೆಗೆ ರಸ್ತೆ ಕಾಮಗಾರಿ ನಿಧಾನವಾಗಿ ನಡೆಯುತ್ತಿದ್ದು ಈ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಇದೇ ರಸ್ತೆಯ ಸೋಮೇರಹಳ್ಳಿ 19ನೇ ತೂಬನ್ನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂಬಂಧ ಮುಚ್ಚಲಾಗಿದ್ದು ಈ ಸಂಬಂಧ ಹೊಸ ಪೈಪ್ ಲೈನ್ ಮೂಲಕ ವಿವಿ ಸಾಗರ ನೀರು ಒದಗಿಸಲು ₹60 ಲಕ್ಷಗಳ ಅಂದಾಜನ್ನು ತಯಾರಿಸಲಾಗಿದ್ದು ಈ ಅಂದಾಜು ಮೊತ್ತ ಅನುಮೋದನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕರಿಗೆ ತಿಳಿಸಿದ್ದು ಈ ಕಾಮಗಾರಿಯನ್ನು ಇನ್ನು 2 ವಾರದಲ್ಲಿ ಪೂರ್ಣಗೊಳ್ಳಬೇಕು. ಹುಳಿಯಾರು ರಸ್ತೆಯಿಂದ ಹಿರಿಯೂರು ನಗರದೊಳಗೆ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು ಬೈಪಾಸ್ ಮೂಲಕ ಚಳ್ಳಕೆರೆ ರಸ್ತೆ ತಲುಪಲು ಇರುವ ಸಣ್ಣ ಪುಟ್ಟ ಕೆಲಸಗಳನ್ನು ಸರಿಪಡಿಸಿ ಕೂಡಲೇ ಬೈಪಾಸ್ ಮೂಲಕ ಸಂಚರಿಸಲು ಅನುವು ಮಾಡಿಕೊಡಬೇಕು ಎಂದರು.

ನ.20 ರಂದು ಟಿಪ್ಪರ್‌ಗಳ ಅಬ್ಬರ, ದಿಂಡಾವರ ರಸ್ತೆಗೆ ಗಂಡಾಂತರ ಎಂಬ ವಿಸ್ತ್ರತ ವರದಿಯನ್ನು ಕನ್ನಡಪ್ರಭ ಪ್ರಕಟಿಸಿದ್ದನ್ನು ಈ ವೇಳೆ ಸ್ಮರಿಸಬಹುದು. ಈ ಸಂದರ್ಭದಲ್ಲಿ ತಹಸೀಲ್ದಾರ್ ರಾಜೇಶ್ ಕುಮಾರ್, ಡಿವೈಎಸ್ಪಿ ಶಿವಕುಮಾರ್, ವೃತ್ತ ನಿರೀಕ್ಷಕರಾದ ಕಾಳಿಕೃಷ್ಣ, ಗುಡ್ಡಪ್ಪ, ಎನ್‌ಎಚ್ಎಐ ಅಧಿಕಾರಿ ಗಡ್ಡಿಪತಿ ಗೌರವ್, ಪಿಎನ್‌ಸಿ ಕಂಪನಿಯ ಮ್ಯಾನೇಜರ್ ಸತೀಶ್, ಜಿಲಾನಿ, ಲೋಕೋಪಯೋಗಿ ಇಲಾಖೆ ಎಇಇ ಕೃಷ್ಣಮೂರ್ತಿ,ಇಂಜಿನಿಯರ್ ಸ್ವಾಮಿನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಈರಲಿಂಗೇಗೌಡ ಮುಂತಾದವರು ಉಪಸ್ಥಿತರಿದ್ದರು.

ಓವರ್ ಲೋಡ್ ಮಣ್ಣು

ಸಾಗಣೆ ಕಡಿಮೆ ಮಾಡಲಿ

ದಿಂಡಾವರ ಭೋವಿ ಕಾಲೋನಿ ಪಿ.ಟಿ.ರಾಜಪ್ಪ ಮಾತನಾಡಿ, ದಿಂಡಾವರ ಭೋವಿ ಕಾಲೋನಿ ಸೇರಿದಂತೆ ಸುತ್ತಮುತ್ತಲಿನ ಭಾಗದಲ್ಲಿ ಪಿಎನ್‌ಸಿ ಕಂಪನಿಯವರ ಟಿಪ್ಪರ್ ಲಾರಿಗಳ ಓಡಾಟದಿಂದ ರಸ್ತೆಗಳೆಲ್ಲ ಗುಂಡಿ ಬಿದ್ದು ಓಡಾಟಕ್ಕೆ ತುಂಬಾ ತೊಂದರೆಯಾಗಿತ್ತು. ಹದಗೆಟ್ಟ ರಸ್ತೆಗಳ ಬಗ್ಗೆ ಪತ್ರಿಕೆಯಲ್ಲಿ ವರದಿ ಬಂದ ಮೇಲೆ ಸಚಿವರು ಪಿಎನ್‌ಸಿ ಕಂಪನಿಯವರ ಸಭೆ ಕರೆದು ರಸ್ತೆ ಸರಿಪಡಿಸಲು ಆಗ್ರಹಿಸಿರುವುದು ಒಳ್ಳೆಯ ಬೆಳವಣಿಗೆ. ಇದರಿಂದಾಗಿ ಈ ಭಾಗದ ಹತ್ತಾರು ಹಳ್ಳಿಗಳ ರಸ್ತೆ ಮೊದಲಿನಂತಾಗುತ್ತವೆ ಎಂಬ ಆಶಾಭಾವನೆ ನಮ್ಮದು. ಇನ್ನಾದರೂ ಓವರ್ ಲೋಡ್ ತುಂಬಿ ಮಣ್ಣು ಸಾಗಿಸುವುದನ್ನು ಕಡಿಮೆ ಮಾಡಲಿ. ನಮ್ಮ ಸಮಸ್ಯೆ ಅರಿತು ಪರಿಹಾರ ಸೂಚಿಸಿರುವ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

Share this article