ಪರಶಿವಮೂರ್ತಿ ದೋಟಿಹಾಳ
18ನೇ ಶತಮಾನದಿಂದಲೇ ಅವಧೂತ ಶುಖಮುನಿ ಸ್ವಾಮೀಜಿ ಜೀವಂತ ಇರುವಾಗಲೇ ಜಾತ್ರೆ ಹಾಗೂ ಪಲ್ಲಕ್ಕಿ ಉತ್ಸವ ಆರಂಭಿಸಿದ್ದ ಶ್ರೀಗಳು ಅನೇಕ ಪವಾಡಗಳನ್ನು ಮಾಡುವ ಮೂಲಕ ಮನೆ ಮಾತಾಗಿದ್ದರು. ಭಕ್ತರು 18-19ನೇ ಶತಮಾನದಲ್ಲಿಯೇ ಅವಧೂತ ಶುಖಮುನಿ ಸ್ವಾಮೀಜಿ ಜೀವಂತ ಇರುವಾಗಲೇ ಜಾತ್ರೆ ಹಾಗೂ ಪಲ್ಲಕ್ಕಿ ಉತ್ಸವ ಆರಂಭಿಸಿದ್ದರು. ಅವರು ಲಿಂಗೈಕ್ಯರಾದ ನಂತರವೂ ಅವರ ಇಚ್ಛೆಯಂತೆ ಗ್ರಾಮಸ್ಥರು ಶಿವರಾತ್ರಿ ಅಮಾವಾಸ್ಯೆಯಂದು (ಮಾ.10) ಜಾತ್ರೆಯನ್ನು ಮಾಡಲಾಗುತ್ತಿದ್ದು, ಸಹಸ್ರಾರು ಭಕ್ತರ ಜಯ ಘೋಷಗಳ ನಡುವೆ ಮಹಾರಥೋತ್ಸವ ನಡೆಯಲಿದೆ.
ಭಾವೈಕ್ಯತೆಯ ಮಠ: ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಅವಧೂತ ಶುಖಮುನಿ ಸ್ವಾಮೀಜಿ ದೇವಸ್ಥಾನವು ಕೇವಲ ಒಂದೇ ಧರ್ಮ, ಜಾತಿಗೆ ಸೀಮಿತವಾಗಿಲ್ಲ. ಇಲ್ಲಿಗೆ ಸರ್ವ ಧರ್ಮದವರು ಬಂದು ಸ್ವಾಮೀಜಿಯನ್ನು ಆರಾಧಿಸುತ್ತಾರೆ, ಪೂಜಿಸುತ್ತಾರೆ. ಈ ಮಠಕ್ಕೆ ಯಾವುದೇ ಪೀಠಾಧಿಪತಿ ಸಹ ಇಲ್ಲ. ಇದು ಕೊಪ್ಪಳ ಜಿಲ್ಲೆಯಲ್ಲಿಯೇ ಭಾವೈಕ್ಯತೆ ಸಾರುವ ಮಠ ಎಂಬ ಖ್ಯಾತಿಗೆ ಹೆಸರಾಗಿದೆ.ಶ್ರೀಗಳ ಇತಿಹಾಸ: ಈ ಹಿಂದೆ ದೋಟಿಹಾಳದ ದಕ್ಷಿಣ ಭಾಗಕ್ಕೆ ದಟ್ಟವಾಗಿ ಬೆಳೆದಿದ್ದ ಡಬಗಳ್ಳಿ ಗಿಡದ ಮಧ್ಯದಲ್ಲಿ ಪುರಾತನ ಬಯಲು ಬಸವೇಶ್ವರ ದೇವಸ್ಥಾನವಿತ್ತು. ಒಂದು ದಿನ ಕುರಿಮರಿಯೊಂದು ತಪ್ಪಿಸಿಕೊಂಡು ಅಲ್ಲಿಗೆ ಹೋಯಿತು. ಕುರಿಗಾಹಿ ಕುರಿ ಹುಡುಕುತ್ತಾ ಬಸವೇಶ್ವರ ದೇವಾಲಯದ ಹತ್ತಿರ ಹೋಗಿ ನೋಡಿದಾಗ ಕಲ್ಲು ಬಂಡೆಯ ಮೇಲೆ ದಿಗಂಬರ ಸ್ವರೂಪದಲ್ಲಿ ನೆಲದಿಂದ ಸುಮಾರು ನಾಲ್ಕು ಅಡಿ ಎತ್ತರದಲ್ಲಿ ಯೋಗಾಸನದಲ್ಲಿದ್ದ ಯೋಗಿಯನ್ನು ಕಂಡು ಕುರಿಗಾಹಿ ಆಶ್ಚರ್ಯಚಕಿತನಾಗಿ ಗ್ರಾಮಸ್ಥರಿಗೆ ತಿಳಿಸುತ್ತಾನೆ.
ಶುಖಮುನಿ ನಾಮಕರಣ: ಅದೇ ಸಮಯಕ್ಕೆ ಸಿದ್ದಲಿಂಗ ಮಹಾಸಾಧುಗಳು ಚಾವಡಿಗೆ ಬಂದು ಹೊಡೆಯುವುದನ್ನು ನಿಲ್ಲಿಸಲು ತಿಳಿಸಿದರು. ನಂತರ ಇವರಲ್ಲಿನ ಲಕ್ಷಣಗಳನ್ನು ಕಂಡು ಈತ ಕಳ್ಳನಲ್ಲ, ಮಹಾಯೋಗಿ ಪವಾಡ ಪುರುಷರು. ಇವರು ಪುರಾಣದಲ್ಲಿ ಬರುವಂತಹ ವ್ಯಾಸರ ಮಗ ಶುಖಮುನಿಯ ಪುನರ್ ಅವತಾರ ಇರಬಹುದು ಎಂದು ಅರಿತು ಶುಖಮುನಿ ಎಂದು ಪುನರ್‌ನಾಮಕರಣ ಮಾಡಿದರು.
ಶರೀರ ತ್ಯಾಗ: ಅವಧೂತ ಶುಖಮುನಿ ಸ್ವಾಮೀಜಿ ಹೀಗೆ ಹಲವು ಪವಾಡಗಳನ್ನು ಮಾಡುತ್ತಾ ಕೆಲ ದಿನಗಳು ಉರುಳಿದವು 1938ರ ನವೆಂಬರ್ 26 ರಂದು (ಭಾದ್ರಪದ ಶುದ್ಧ ಪ್ರತಿಪದ ಶುಕ್ರವಾರ) ಬೆಳಿಗ್ಗೆ 8 ಗಂಟೆಗೆ ಶುಖಮುನಿ ತಾತನವರು ಶ್ರೀ ರುದ್ರಮುನಿ ಸ್ವಾಮೀಜಿ ಮಠದ ಹತ್ತಿರ ಲಿಂಗೈಕ್ಯರಾದರು. ಗ್ರಾಮದ ಭಕ್ತರು ಒಗ್ಗೂಡಿ ಸಾಧು-ಸಂತರ ಮಠದಲ್ಲಿ ಧಾರ್ಮಿಕ ವಿಧಿವಿಧಾನಗಳಿಂದ ಗದ್ದುಗೆ ಪ್ರತಿಷ್ಠಾಪಿಸಿದರು.
ಈ ಘಟನೆ ನಡೆದ ಕೆಲವು ಕ್ಷಣಗಳಲ್ಲಿ ಸಾವಿರಾರು ಜನರು ಆಗಮಿಸಿದ್ದರು. ಇಂತಹ ಮಹಿಮಾ ಪುರುಷನ ಜಾತ್ರೆ ಮಾಡಬೇಕು ಎಂದು ಅರಿತ ಜನರು ಭಜನೆ ಆರಂಭಿಸಿ ಶಿವರಾತ್ರಿ ಅಮಾವಾಸ್ಯೆ ದಿನ ಜಾತ್ರೆ ಮಾಡಲು ನಿರ್ಧರಿಸಿದರು.
ಸಪ್ತಭಜನೆ ಹಾಗೂ ಅನ್ನದಾಸೋಹ: ರಥೋತ್ಸವಕ್ಕೆ ಎಂಟು ದಿನಗಳ ಮುಂಚಿತವಾಗಿ ಮಠದಲ್ಲಿ ಸಪ್ತಭಜನೆಯನ್ನು ಹಾಗೂ ಅನ್ನದಾಸೋಹವನ್ನು ಆರಂಭಿಸಲಾಗುತ್ತದೆ. ಭಜನೆಯಲ್ಲಿ ದೋಟಿಹಾಳ, ಕೇಸೂರು ಸುತ್ತಮುತ್ತಲಿನ ಗ್ರಾಮಸ್ಥರು, ಮಹಿಳೆಯರು, ಯುವಕರು ಭಾಗವಹಿಸುತ್ತಾರೆ. ಇದು ದಿನದ 24 ತಾಸುಗಳ ಕಾಲ ನಡೆಯುತ್ತದೆ. ಸಪ್ತಭಜನೆ ಮುಕ್ತಾಯದ ನಂತರ ಸಹಸ್ರಾರು ಭಕ್ತರ ಮಧ್ಯೆ ಮಹಾರಥೋತ್ಸವ ನಡೆಯುತ್ತದೆ. ಭಕ್ತರು ಉತ್ತತ್ತಿ, ಬಾಳೆಹಣ್ಣನ್ನು ಸಮರ್ಪಣೆ ಮಾಡುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ.