;Resize=(412,232))
ಬೆಂಗಳೂರು : ಮೂರು ದಿನಗಳ ಹಿಂದೆ ಗುಟ್ಕಾ ವ್ಯಾಪಾರಿ ಮುಕೇಶ್ ಬಾಯ್ ಹಾಗೂ ಅವರ ಸಂಬಂಧಿಯನ್ನು ಅಪಹರಿಸಿ 2 ಲಕ್ಷ ರು. ಹಣ ಸುಲಿಗೆ ಮಾಡಿದ್ದ ಕಿಡಿಗೇಡಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚನ್ನೇನಹಳ್ಳಿ ನಿವಾಸಿ ಮಂಜುನಾಥ್ ಅಲಿಯಾಸ್ ಮಾಗಡಿ ಮಂಜ ಹಾಗೂ ಚಂದನಾ ಬಂಧಿತರಾಗಿದ್ದು, ಮೂರು ದಿನಗಳ ಹಿಂದೆ ಬಿಇಎಲ್ ಲೇಔಟ್‌ನಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ಮರಳುತ್ತಿದ್ದ ಗುಟ್ಕಾ ವ್ಯಾಪಾರಿ ಮುಕೇಶ್ ಬಾಯ್ ಹಾಗೂ ಆತನ ಜಮಾಬಾಯ್ ಅವರನ್ನು ಅಪಹರಿಸಿ ಆರೋಪಿಗಳು ಹಣ ಸುಲಿಗೆ ಮಾಡಿದ್ದರು. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಿಯದರ್ಶಿನಿ ಲೇಔಟ್‌ನಲ್ಲಿ ನೆಲೆಸಿರುವ ರಾಜಸ್ಥಾನ ಮೂಲದ ಮುಕೇಶ್, ಹಲವು ವರ್ಷಗಳಲ್ಲಿ ಪಾನಾ ಮಸಾಲಾ ಸೇರಿದಂತೆ ಗುಟ್ಕಾ ಉತ್ಪನ್ನಗಳ ಮಾರಾಟಗಾರರಾಗಿದ್ದಾರೆ. ಡಿ.15 ರಂದು ರಾತ್ರಿ ಜೀಪಿನಲ್ಲಿ ತನ್ನ ಸಂಬಂಧಿ ಜತೆ ಮುಕೇಶ್ ತೆರಳುತ್ತಿದ್ದರು. ಆಗ ಬಿಇಎಲ್ ಲೇಔಟ್‌ನ ಪಾವನಿ ಚಾಟ್ಸ್ ಬಳಿ ಅವರನ್ನು ಮಾಗಡಿ ಮಂಜ ತಂಡ ಅಡ್ಡಗಟ್ಟಿದೆ. ಬಳಿಕ ತಮ್ಮ ಕಾರಿಗೆ ಮುಕೇಶ್‌ನನ್ನು ಹತ್ತಿಸಿಕೊಂಡ ಆರೋಪಿಗಳು, ಮುಕೇಶ್ ಮೂಲಕ ಅವರ ಮನೆ ಮಾಲಿಕ ಸುರೇಶ್ ರವರಿಗೆ ಕರೆ ಮಾಡಿ ಮುಕೇಶ್‌ನ್ನು ಅಪಹರಿಸಲಾಗಿದೆ. ಇವರ ಬಿಡುಗಡೆಗೆ 10 ಲಕ್ಷ ರು. ಕೊಡುವಂತೆ ಬೇಡಿಕೆ ಇಟ್ಟಿದ್ದ. ಆಗ ತಮ್ಮ ಬಳಿ ಗುಟ್ಕಾ ಉತ್ಪನ್ನಗಳ ಖರೀದಿಗೆ ತೆಗೆದುಕೊಂಡು ಹೋಗಿದ್ದ 2 ಲಕ್ಷ ರು. ಹಣವನ್ನು ಮಂಜನಿಗೆ ಮುಕೇಶ್ ನೀಡಿದ್ದರು. ಈ ಹಣ ಪಡೆದ ಬಳಿಕ ಕೃತ್ಯದ ಬಗ್ಗೆ ಯಾರಿಗಾದರೂ ಬಾಯಿ ಬಿಟ್ಟರೆ ಜೀವ ತೆಗೆಯುವುದಾಗಿ ಬೆದರಿಸಿ ಮುಕೇಶ್‌ಗೆ ಬೆದರಿಸಿ ಆರೋಪಿಗಳು ಕಳುಹಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮಾಗಡಿ ಮಂಜ ಕ್ರಿಮಿನಲ್ ಹಿನ್ನೆಲೆಯವನಾಗಿದ್ದು, ಈ ಹಿಂದೆ ಆತನ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. ಕೆಲ ತಿಂಗಳ ಹಿಂದೆ ಆತನ ಹೆಸರನ್ನು ರೌಡಿಪಟ್ಟಿಯಿಂದ ಕೈ ಬಿಡಲಾಗಿತ್ತು. ಈಗ ಮತ್ತೆ ಅಪರಾಧ ಕೃತ್ಯ ಎಸಗಿ ಮಂಜ ಪೊಲೀಸರ ಅತಿಥಿ ಆಗಿದ್ದಾನೆ ಎಂದು ತಿಳಿದು ಬಂದಿದೆ.
ಹಲವು ದಿನಗಳಿಂದ ಮಂಜನಿಗೆ ವ್ಯಾಪಾರಿ ಮುಕೇಶ್ ಪರಿಚಯವಿತ್ತು. ಈ ಹಿನ್ನೆಲೆಯಲ್ಲಿ ಆತನ ಬಳಿ ಹಣವಿದೆ ಎಂದು ಭಾವಿಸಿ ಸುಲಿಗೆ ಕೃತ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.