ಮಂಗಳೂರು: ಪಿಎಚ್.ಡಿ ವಿದ್ಯಾರ್ಥಿನಿ, ದ.ಕ. ಜಿಲ್ಲೆ ಪುತ್ತೂರು ನಿವಾಸಿ ಚೈತ್ರಾ ಹೆಬ್ಬಾರ್ (27) ನಾಪತ್ತೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಈಕೆ ವಿದೇಶಕ್ಕೆ ತರಳಿರುವ ಶಂಕೆ ವ್ಯಕ್ತವಾಗಿದೆ.
ದೇರಳಕಟ್ಟೆಯ ಖಾಸಗಿ ಕಾಲೇಜಿನಲ್ಲಿ ಪಿಎಚ್.ಡಿ ಅಧ್ಯಯನ ಮಾಡುತ್ತಿದ್ದ ಚೈತ್ರಾ ಫೆ.17ರಂದು ತನ್ನ ಸ್ಕೂಟರ್‌ನೊಂದಿಗೆ ತೆರಳಿದಾಕೆ ವಾಪಸಾಗದೆ ನಾಪತ್ತೆಯಾಗಿದ್ದು, ಈ ಬಗ್ಗೆ ಫೆ.18ರಂದು ಆಕೆಯ ದೊಡ್ಡಪ್ಪ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಈಕೆ ಬಂಟ್ವಾಳ ತಾಲೂಕಿನ ನೇರಳಕಟ್ಟೆ ನಿವಾಸಿಯೊಬ್ಬನ ಜೊತೆ ಬೆಂಗಳೂರಿಗೆ ತೆರಳಿದ್ದು, ಬಳಿಕ ಹಿಮಾಚಲ ಪ್ರದೇಶದ ಮನಾಲಿಗೆ ತೆರಳಿದ್ದಾಳೆ. ಅಲ್ಲಿಂದ ದೆಹಲಿಗೆ ವಾಪಸ್ ಬಂದು ನಂತರ ವಿದೇಶಕ್ಕೆ ತೆರಳಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ.
ಈಕೆಯ ಜೊತೆಗೆ ತೆರಳಿರುವ ಯುವಕನನ್ನು ಪತ್ತೆಹಚ್ಚಿರುವ ಪೊಲೀಸರು ಆತನನ್ನು ವಿಚಾರಣೆಗಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ. ಆದರೆ ವಿಚಾರಣೆ ವೇಳೆ ಆತ ಚೈತ್ರಾ ಜೊತೆ ಇದ್ದ ಎನ್ನುವುದಕ್ಕೆ ಯಾವುದೇ ದಾಖಲೆ ಇಲ್ಲದ ಕಾರಣ ವಾಪಸ್ ಕಳುಹಿಸಲಾಗಿದೆ. ಈ ನಡುವೆ ಚೈತ್ರಾಳಿಗೆ ವಿದೇಶದ ವೀಸಾ ಕಳುಹಿಸಿದವರು ಯಾರು? ವೀಸಾ ಕಳುಹಿಸಿದ ವ್ಯಕ್ತಿಗೂ ಚೈತ್ರಾಳಿಗೂ ಇರುವ ನಂಟೇನು ಎಂಬುದು ಇನ್ನೂ ನಿಗೂಢವಾಗಿದೆ.----
ವೃದ್ಧ ದಂಪತಿಗೆ ಹಲ್ಲೆ ವಿಡಿಯೋ ವೈರಲ್:ಧರ್ಮಗುರು ಸಹಿತ ಇಬ್ಬರ ವಿರುದ್ಧ ಪ್ರಕರಣಕನ್ನಡಪ್ರಭ ವಾರ್ತೆ ಬಂಟ್ವಾಳ
ಪುಣಚ ಗ್ರಾಮದ ಪರಿಯಾಲ್ತಡ್ಕ ಸಮೀಪದ ಮಣಿಲ ಚರ್ಚ್ ವ್ಯಾಪ್ತಿಯಲ್ಲಿ ಸಮುದಾಯದ ವೃದ್ಧ ದಂಪತಿಗೆ ಹಲ್ಲೆ ನಡೆಸುತ್ತಿರುವ ವೀಡಿಯೋ ವೈರಲ್ ಆಗಿದ್ದು, ಈ ಸಂಬಂಧ ಧರ್ಮಗುರು ಮತ್ತು ಮತ್ತೊಬ್ಬ ವ್ಯಕ್ತಿಯ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮನೇಲ ಪರಿಯಾಲ್ತಡ್ಕದ ಕ್ರೈಸ್ಟ್ ಕಿಂಗ್ ಪ್ಯಾರಿಷ್‌ನ ಧರ್ಮಗುರುಗಳು ಹಲ್ಲೆ ನಡೆಸಿದ ಆರೋಪಿ ಎನ್ನಲಾಗಿದೆ. ಪುಣಚ ಗ್ರಾಮದ ಎರ್ಮೆತ್ತಡ್ಕ ನಿವಾಸಿ ಗ್ರೆಗರಿ ಮೊಂತೇರೊ(೭೯) ಹಲ್ಲೆಗೊಳಗಾದವರು.
ಫೆ.೨೯ರಂದು ಈ ಘಟನೆ ನಡೆದಿರುವುದು ವೈರಲ್ ಆಗಿರುವ ಸಿಸಿಟಿವಿ ಕ್ಯಾಮರಾದ ವೀಡಿಯೊದಿಂದ ತಿಳಿದುಬಂದಿದೆ. ಪಾದ್ರಿ ಮನೆ ಆಶೀರ್ವಾದಕ್ಕೆ ತೆರಳಿದ ವೇಳೆ ಗೆಗ್ಗರಿ ಮೊಂತೇರೊ ಅವರ ಮನೆಯ ಹೊರಗೆ ವೃದ್ಧ ದಂಪತಿ ಜೊತೆ ವಾಗ್ವಾದ ನಡೆಸಿದ್ದು, ಬಳಿಕ ಹಲ್ಲೆ ನಡೆಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಪತಿಯ ರಕ್ಷಣೆಗೆ ಮುಂದಾದ ಮಹಿಳೆಗೂ ಹಲ್ಲೆ ನಡೆಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಧರ್ಮಗುರುಗಳು ಮನೆ ಶುದ್ಧ ಭೇಟಿ ನಿಮಿತ್ತ ತೆರಳಿದ್ದು, ಪ್ರಾಯಸ್ಥ ದಂಪತಿ ಚರ್ಚ್‌ಗೆ ಯಾವುದೇ ದೇಣಿಗೆ, ವಂತಿಗೆ ನೀಡಿ ಸಹಕರಿಸುತ್ತಿಲ್ಲ ಎಂದೆಲ್ಲ ಹೇಳಿ ಆ ದಂಪತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ವೃದ್ಧನ ಕಾಲರ್ ಹಿಡಿದು ಮಾರು ದೂರ ಎಳೆದುಕೊಂಡು ಹೋಗಿ ಹೊಡೆದಿದ್ದಾರೆ ಎಂದು ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪಾದ್ರಿ ನೆಲ್ಸನ್ ಒಲಿವೆರಾ ಮತ್ತು ಕಾರು ಚಾಲಕ ಅಲ್ಫಾನ್ಸ್ ಮೊಂತೆರೋ ವಿರುದ್ಧ ಹಲ್ಲೆ, ಮಾನಭಂಗ ಯತ್ನ ಪ್ರಕರಣ ದಾಖಲಾಗಿದೆ.
ಧರ್ಮಗುರುಗಳ ಮೇಲೆ ಶಿಸ್ತು ಕ್ರಮ: ಪರಿಯಾಲ್ತಡ್ಕ ಮಣಿಲ ಚರ್ಚ್ ವ್ಯಾಪ್ತಿಯಲ್ಲಿ ನಡೆದ ಘಟನೆಯನ್ನು ಮಂಗಳೂರು ಧರ್ಮಪ್ರಾಂತ್ಯ ತೀವ್ರವಾಗಿ ಖಂಡಿಸುತ್ತದೆ ಮತ್ತು ಸಮಗ್ರ ತನಿಖೆಯನ್ನು ಕೈಗೊಳ್ಳಲಿದೆ. ದೇಶದ ಕಾನೂನು ಸುವ್ಯವಸ್ಥೆಗೆ ಬರುವ ಕಾರಣದಿಂದ ತನಿಖೆಗೆ ಸಂಪೂರ್ಣ ಸಹಕಾರವನ್ನು ನೀಡುತ್ತದೆ. ತಕ್ಷಣದಿಂದ ಜಾರಿಗೆ ಬರುವಂತೆ ಧರ್ಮಗುರುಗಳನ್ನು ಧಾರ್ಮಿಕ ಸೇವೆಯಿಂದ ತೆಗೆದುಹಾಕಲಾಗುತ್ತದೆ. ಜನರ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಬೇರೆಯವರನ್ನು ನಿಯೋಜಿಸಲಾಗುವುದು ಎಂದು ಮಂಗಳೂರು ಧರ್ಮಪ್ರಾಂತ್ಯ ಪ್ರಕಟಣೆ ಹೊರಡಿಸಿದೆ.