ಜನರ ಕೈಗೆ ಮೋದಿ ಸರ್ಕಾರ ಚೊಂಬು

KannadaprabhaNewsNetwork |  
Published : May 05, 2024, 02:01 AM IST
ಪ್ರಚಾರ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾತನಾಡಿದರು. | Kannada Prabha

ಸಾರಾಂಶ

ವಿದೇಶದಿಂದ ಎಲ್ಲ ಕಪ್ಪು ಹಣವನ್ನು ಕಾಂಗ್ರೆಸ್‌ನವರು ನುಂಗಿದ್ದಾರೆ, ನಮಗೆ ಅಧಿಕಾರ ನೀಡಿದ್ದೇ ಆದಲ್ಲಿ ಎಲ್ಲ ಕಪ್ಪುಹಣ ಹೊರತಂದು ಪ್ರತಿಯೊಬ್ಬರ ಖಾತೆಗೂ ₹15ಲಕ್ಷ ಹಣ ಹಾಕುವುದಾಗಿ ನರೇಂದ್ರ ಮೋದಿ ಪ್ರಚಾರ ಕೈಗೊಂಡಿದ್ದರು.

ಕುಂದಗೋಳ:

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹತ್ತು ವರ್ಷಗಳ ಆಡಳಿತದಲ್ಲಿ ಒಂದೇ ಒಂದು ಜನಪರ ಯೋಜನೆ ನೀಡದೇ ದೇಶದ ಜನರ ಕೈಗೆ ಖಾಲಿ ಚೊಂಬು ನೀಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹರಿಹಾಯ್ದರು.

ಅವರು ಪಟ್ಟಣದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ವಿದೇಶದಿಂದ ಎಲ್ಲ ಕಪ್ಪು ಹಣವನ್ನು ಕಾಂಗ್ರೆಸ್‌ನವರು ನುಂಗಿದ್ದಾರೆ, ನಮಗೆ ಅಧಿಕಾರ ನೀಡಿದ್ದೇ ಆದಲ್ಲಿ ಎಲ್ಲ ಕಪ್ಪುಹಣ ಹೊರತಂದು ಪ್ರತಿಯೊಬ್ಬರ ಖಾತೆಗೂ ₹15ಲಕ್ಷ ಹಣ ಹಾಕುವುದಾಗಿ ನರೇಂದ್ರ ಮೋದಿ ಪ್ರಚಾರ ಕೈಗೊಂಡಿದ್ದರು. ಆದರೆ, ಅಧಿಕಾರದ ಚುಕ್ಕಾಣಿ ಹಿಡಿದು 10 ವರ್ಷ ಕಳೆದರೂ ಸಹ ಒಬ್ಬರ ಖಾತೆಗಾದರೂ ನಯಾಪೈಸಾ ಹಣ ಹಾಕಿದ್ದಾರೆಯೇ?. ಇದನ್ನು ಈ ಭಾಗದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಕೇಳಿದ್ದೀರಾ ಎಂದು ಪ್ರಶ್ನಿಸಿದರು.

ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿಯ 27 ಸಂಸದರು ಆಯ್ಕೆಯಾಗಿದ್ದರೂ ಈ ಭಾಗದ ಪ್ರಮುಖ ಕುಡಿಯುವ ನೀರಿನ ಯೋಜನೆಯಾಗಿರುವ ಮಹದಾಯಿ ಹೋರಾಟಕ್ಕೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಕೇವಲ 10 ತಿಂಗಳಲ್ಲಿ ಚುನಾವಣಾ ಪೂರ್ವ ಘೋಷಣೆ ಮಾಡಿದ್ದ 5 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ಪ್ರತಿ ಮನೆಗೂ ಸರ್ಕಾರದ ಸೌಲಭ್ಯ ತಲುಪುವಂತೆ ಮಾಡಿದ್ದೇವೆ. ಇದು ನಮ್ಮ ಸರ್ಕಾರದ ಸಾಧನೆ ಎಂದರು.

ಬಸವಣ್ಣನವರ ನಾಡಿನಲ್ಲಿ ಧರ್ಮದ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಈ ಸಮಾಜದಲ್ಲಿ ಕಾನೂನು ಚೌಕಟ್ಟಿನಲ್ಲಿ ಯಾರೇ ತಪ್ಪು ಮಾಡಿದರೂ ಯಾರ ಮುಲಾಜಿಲ್ಲದೆ ಕಠಿಣ ಕ್ರಮಕೈಗೊಳ್ಳಲಾಗುವುದು. ಈಚೆಗೆ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆ ಪ್ರಕರಣದ ಆರೋಪಿಗೆ ಕಠಿಣವಾದ ಶಿಕ್ಷೆ ಕೊಡಿಸಲು ಸರ್ಕಾರ ಬದ್ಧವಾಗಿದೆ. ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್‌ ಸರ್ಕಾರ ಬೀಳಲಿದೆ ಎಂದು ಸುಳ್ಳು ಹಬ್ಬಿಸುತ್ತಿರುವ ಬಿಜೆಪಿಯವರ ಕುತಂತ್ರವನ್ನು ಜನತೆ ನಂಬುವುದಿಲ್ಲ. 10 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಏನು ಮಾಡಲೂ ಸಾಧ್ಯವಿಲ್ಲ ಎಂದರು.

ಸಣ್ಣ ಟಗರು:

ಧಾರವಾಡ ಲೋಕಸಭಾ ಚುನಾವಣೆ ಅಭ್ಯರ್ಥಿ ವಿನೋದ ಅಸೂಟಿ ಸಣ್ಣ ಟಗರು. ಶಿವಳ್ಳಿಯವರ ಇನ್ನೊಂದು ತದ್ರೂಪಿ ಎನ್ನುತ್ತಾ ದಿ. ಸಿ.ಎಸ್. ಶಿವಳ್ಳಿ ಅವರನ್ನು ಡಿ.ಕೆ. ಶಿವಕುಮಾರ ನೆನಪು ಮಾಡಿಕೊಂಡರು. ನಿಮಗೆ ಕಾಂಗ್ರೆಸ್ ಸರ್ಕಾರ ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಕಾಂಗ್ರೆಸ್‌ಗೆ ಮತಹಾಕುವ ಮೂಲಕ ಕೂಲಿ ಕೊಡಿ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಕೇಂದ್ರದ ಮೋದಿ ಸರ್ಕಾರಕ್ಕೆ ಎರಡು ಅವಧಿ ಅವಕಾಶ ಕೊಟ್ಟರೂ ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಗೊಬ್ಬರ, ಕೀಟನಾಶಕಗಳ ಮೇಲಿನ ಬೆಲೆ ಏರಿಕೆಯಾಗಿದ್ದೇ ದೇಶದ ಜನತೆಗೆ ನೀಡಿದ ಮೋದಿ ಗ್ಯಾರಂಟಿ ಎಂದು ಕಿಡಿಕಾರಿದರು.

ಧಾರವಾಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೋಟಿ, ಶಾಸಕ ಎ.ಸಿ. ಶ್ರೀನಿವಾಸ್, ವಿಪ ಸದಸ್ಯ ನಾರಾಯಣಸ್ವಾಮಿ, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಚಿತ್ರನಟ ಸಾಧು ಕೋಕಿಲ, ತಾಲೂಕು ಅಧ್ಯಕ್ಷ ಶಿವಾನಂದ ಬೆಂತೂರ ಮಾತನಾಡಿದರು.

ಈ ವೇಳೆ ವಿಪ ಮುಖ್ಯ ಸಚೇತಕ ಸಲೀಂ ಅಹ್ಮದ್‌, ಶಾಸಕ ಎನ್‌.ಎಚ್‌. ಕೋನರಡ್ಡಿ, ಮಾಜಿ ಶಾಸಕರಾದ ಕುಸುಮಾವತಿ ಶಿವಳ್ಳಿ, ಎಂ.ಎಸ್. ಅಕ್ಕಿ, ಎ.ಎಂ. ಹಿಂಡಸಗೇರಿ, ಮೋಹನ ಲಿಂಬಿಕಾಯಿ, ಶಾಕೀರ ಸನದಿ, ಅರವಿಂದ ಕಟಗಿ, ಷಣ್ಮುಖ ಶಿವಳ್ಳಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರ, ಅರವಿಂದ ಕಟಗಿ, ಜಗದೀಶ ಉಪ್ಪಿನ, ಬಾಬಾಜಾನ ಮಿಶ್ರಿಕೋಟಿ, ಸಲೀಂ ಕ್ಯಾಲ್ಕೊಂಡ, ಅಪ್ಪಣ್ಣ ಹಿರೇಗೌಡ್ರ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!