ಕನ್ನಡಪ್ರಭ ವಾರ್ತೆ ಹೊನ್ನಾವರ
ತಮ್ಮ ಕಚೇರಿಯಿಂದ ಆರಂಭವಾದ ಜಾಥಾಕ್ಕೆ ತಹಸೀಲ್ದಾರ್ ಚಾಲನೆ ನೀಡಿದರು. ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಶರಾವತಿ ವೃತ್ತಕ್ಕೆ ತಲುಪಿ ಜಾಥಾ ಸಮಾಪ್ತಿಗೊಳಿಸಲಾಯಿತು. ನಂತರ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಹಿರಿಯ ಸಿವಿಲ್ ನ್ಯಾಯಾಧೀಶ, ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಬಿ.ಸಿ. ಚಂದ್ರಶೇಖರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕಾನೂನಿನ ತಾಯಿಯ ಸ್ಥಾನದಲ್ಲಿ ಸಂವಿಧಾನವಿದೆ. ಸಂವಿಧಾನದ ಉದ್ದೇಶವನ್ನು ಪೀಠಿಕೆಯಲ್ಲಿ ತಿಳಿಸಲಾಗಿದೆ. ದೇಶದ ನಾಗರಿಕರಿಗೆ ಸಂವಿಧಾನ ಬದುಕುವ ರೀತಿಯನ್ನು ತೋರಿಸಿದೆ. ಸರ್ಕಾರ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ನೀಡುವುದು ಅಲ್ಲದೆ ಧರ್ಮಾಚರಣೆಯ ಹಕ್ಕನ್ನು ನೀಡಲು ಸಂವಿಧಾನ ಅಗತ್ಯ. ಸಂವಿಧಾನವನ್ನು ಕಾನೂನಾಗಿ ಮಾಡಿದ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತದೆ. ಸಂವಿಧಾನದ ಬಗ್ಗೆ ಗೌರವವನ್ನು ಹೊಂದಿರಬೇಕು ಹಾಗೂ ಅದರ ಬಗ್ಗೆ ತಿಳಿದಿರಬೇಕು. ಅನ್ಯಾಯವನ್ನು ಎದುರಿಸಲು, ನಮ್ಮನ್ನು ರಕ್ಷಿಸಿಕೊಳ್ಳಲು ಸಂವಿಧಾನ ಅಗತ್ಯ. ಮನುಷ್ಯ ಸ್ವಾರ್ಥವನ್ನು ಬಿಟ್ಟರೆ ಕಾನೂನು ಬಳಕೆಯ ಅಗತ್ಯತೆ ಕಡಿಮೆ ಆಗುತ್ತದೆ ಎಂದು ನುಡಿದರು.ಸಂವಿಧಾನದ ಕುರಿತು ಎಸ್.ಡಿ.ಎಂ. ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ವಿಶಾಲ್ ಎಸ್, ಸರ್ಕಾರಿ ಸಹಾಯಕ ಅಭಿಯೋಜಕಿ ಸಂಪದಾ ಗುನಗಾ ಉಪನ್ಯಾಸ ನೀಡಿದರು. ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಪಪಂ ಮುಖ್ಯಾಧಿಕಾರಿ ಏಸು ಸುಬ್ಬಣ್ಣ ಬೆಂಗಳೂರು ಅಂಬೇಡ್ಕರ್ ಅವರ ಬಗೆಗಿನ ಹಾಡನ್ನು ಹಾಡಿದರು. ತಹಸೀಲ್ದಾರ್ ಪ್ರವೀಣ್ ಕರಾಂಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಸತಿ ನಿಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಮಾಜ ಕಲ್ಯಾಣ ಇಲಾಖೆಯ ಗ್ರೇಡ್ -1 ಅಧಿಕಾರಿ ಜಿ.ಸತೀಶ್ ಸ್ವಾಗತಿಸಿದರು.