ಪ್ರಾಚೀನ ಭಾರತೀಯ ಮೂಲದ ಆಯುರ್ವೇದ ಪದ್ಧತಿ ಬಗ್ಗೆ ಪಾಶ್ಚಾತ್ಯ ದೇಶಗಳಲ್ಲಿ ವಿಪರೀತ ಆಸಕ್ತಿ ಮೂಡಿದೆ. ವಿದೇಶಗಳಲ್ಲಿ ಅನೇಕ ಭಾರತೀಯ ಮೂಲದ ಆಯುರ್ವೇದ ವೈದ್ಯರು ಕಾರ್ಯನಿರ್ವಹಿಸುವ ಮೂಲಕ ಭಾರತದ ಹಿರಿಮೆಯನ್ನು ಎತ್ತರಕ್ಕೇರಿಸಿದ್ದಾರೆ.
ಗದಗ: ಪ್ರಾಚೀನ ಆಯುರ್ವೇದ ಪದ್ಧತಿಗಳೇ ವಿಶ್ವದ ಎಲ್ಲ ವೈದ್ಯಕೀಯ ಶಾಸ್ತ್ರಗಳ ತಾಯಿ ಬೇರಾಗಿದೆ ಎಂದು ಹೂವಿನಹಡಗಲಿಯ ಗವಿಮಠದ ಡಾ. ಹಿರಿಶಾಂತವೀರ ಸ್ವಾಮೀಜಿ ತಿಳಿಸಿದರು.ನಗರದ ಅಕ್ಷಯ ಆರ್ಯುಧಾಮದ ಹಿರೇಮಠ ಪಂಚಕರ್ಮ ಚಿಕಿತ್ಸಾ ಕೇಂದ್ರದಲ್ಲಿ ಜರುಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಮಾನವನ ಒತ್ತಡದ ಜಂಜಾಟದಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ಕೆಟ್ಟ ಜೀವನಶೈಲಿಯಿಂದಾಗಿ ಕೆಲ ಮಾರಕ ರೋಗಗಳನ್ನು ಅಂಟಿಸಿಕೊಂಡು ತೊಂದರೆ ಅನುಭವಿಸುತ್ತಿದ್ದಾನೆ. ಈ ಕಾಯಿಲೆಗಳಿಗೆ ಪ್ರಾಚೀನ ಆಯುರ್ವೇದ ಪದ್ಧತಿಯಿಂದ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣವಾಗಿ ಗುಣಪಡಿಸಬಹುದು ಎಂದರು.
ಪ್ರಾಚೀನ ಭಾರತೀಯ ಮೂಲದ ಆಯುರ್ವೇದ ಪದ್ಧತಿ ಬಗ್ಗೆ ಪಾಶ್ಚಾತ್ಯ ದೇಶಗಳಲ್ಲಿ ವಿಪರೀತ ಆಸಕ್ತಿ ಮೂಡಿದೆ. ವಿದೇಶಗಳಲ್ಲಿ ಅನೇಕ ಭಾರತೀಯ ಮೂಲದ ಆಯುರ್ವೇದ ವೈದ್ಯರು ಕಾರ್ಯನಿರ್ವಹಿಸುವ ಮೂಲಕ ಭಾರತದ ಹಿರಿಮೆಯನ್ನು ಎತ್ತರಕ್ಕೇರಿಸಿದ್ದಾರೆ. ವಿಪರ್ಯಾಸವೆಂದರೆ ಆಯುರ್ವೇದದ ಮೂಲವಾಗಿರುವ ಭಾರತದಲ್ಲಿಯೇ ಆಯುರ್ವೇದ ಪದ್ಧತಿಯ ಬಗ್ಗೆ ಕೆಲವರು ಅಪಸ್ವರ ಎತ್ತುತ್ತಿದ್ದಾರೆಂದು ವಿಷಾದಿಸಿದರು.ಆಲೋಪತಿ ಹಾಗೂ ಇತರ ವೈದ್ಯ ಪದ್ಧತಿಗಳಿಂದ ಗುಣಪಡಿಸಲಾಗದಂತಹ ಅನೇಕ ಅಸಾಧ್ಯ ರೋಗಗಳನ್ನು ಸಹ ಗುಣಪಡಿಸಿದ ಖ್ಯಾತಿ ಆಯುರ್ವೇದಕ್ಕಿದೆ. ಈ ಆಯುರ್ವೇದದ ಬಗ್ಗೆ ಸರ್ಕಾರ, ಸಂಘ ಸಂಸ್ಥೆಗಳು ಜನಸಾಮಾನ್ಯರಿಗೆ ತಿಳಿವಳಿಕೆ ಮೂಡಿಸಬೇಕು. ಆಯುರ್ವೇದ ಔಷಧಿಗಳು ಅತಿ ಸುಲಭವಾಗಿ ಜನರಿಗೆ ದೊರೆಯುವಂತಾಗಬೇಕೆಂದರು.ಅಕ್ಷಯ ಆರ್ಯುಧಾಮದ ಹಿರೇಮಠ ಪಂಚಕರ್ಮ ಚಿಕಿತ್ಸಾ ಕೇಂದ್ರದ ಮುಖ್ಯಸ್ಥೆ ಡಾ. ಸೌಮ್ಯಶ್ರೀ ಹಿರೇಮಠ ಮಾತನಾಡಿ, ಪ್ರಾಚೀನ ಆಯುರ್ವೇದ ಪದ್ಧತಿಗಳ ಬಗ್ಗೆ ಜನರಲ್ಲಿರುವ ಕೆಲ ತಪ್ಪು ಕಲ್ಪನೆಗಳನ್ನು ದೂರ ಮಾಡುವುದಕ್ಕಾಗಿ ಈ ಶಿಬಿರವನ್ನು ಏರ್ಪಡಿಸಿದ್ದೇವೆ. ಈ ಕೇಂದ್ರದಲ್ಲಿ ಜನಸಾಮಾನ್ಯರ ಕೈಗೆಟುಕುವಂತೆ ನಾಮಮಾತ್ರ ಶುಲ್ಕ ವಿಧಿಸಿ ಪ್ರಾಚೀನ ಪಂಚಕರ್ಮ ಚಿಕಿತ್ಸೆಗಳನ್ನು ನೀಡಲಾಗುವುದೆಂದು ವಿವರಿಸಿದರು.ಈ ವೇಳೆ 500 ರೋಗಿಗಳಿಗೆ ರಕ್ತದೊತ್ತಡ, ಎಲುವು ಸಾಂದ್ರತೆ, ಸಕ್ಕರೆ ರೋಗ, ಬೊಜ್ಜು, ನರರೋಗ, ಸಂಧಿವಾತ, ಚರ್ಮರೋಗ, ಸ್ತ್ರೀರೋಗಗಳಿಗೆ ಉಚಿತ ಚಿಕಿತ್ಸೆ ನೀಡಿ ಔಷಧಿ ವಿತರಿಸಲಾಯಿತು.
ಹಿರಿಯ ಆಯುರ್ವೇದ ತಜ್ಞ ಡಾ. ಮಹೇಶ ಹಿರೇಮಠ, ಸ್ತ್ರೀರೋಗ ತಜ್ಞೆ ಡಾ. ಸೌಮ್ಯಶ್ರೀ ಹಿರೇಮಠ ದಂಪತಿಗಳು ಚಿಕಿತ್ಸೆ ನೀಡಿದರು. ಡಾ. ವಿದ್ಯಾ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಡಾ. ಎಸ್.ಆರ್. ಹಿರೇಮಠ, ಡಾ. ಶರಣ ಬಸವರಾಜ, ಡಾ. ಅನೂಷಾ, ಡಾ. ವಿಜಯಲಕ್ಷ್ಮೀ ಹಿರೇಮಠ, ನಿವೃತ್ತ ತಹಸೀಲ್ದಾರ್ ಅಂದಪ್ಪ ನರೇಗಲ್, ಅನೀಲಕುಮಾರ ಕಡಾಡಿ, ಕೆ.ಬಿ. ಕೊಣ್ಣೂರು, ಡಾ. ಚಂದ್ರು ಹೊಸಮಠ, ಡಾ. ಪ್ರತೀಕ, ಡಾ. ನವೀನ ಬಡಿಗೇರ, ಸಂಜೀವ ಹಡಗಲಿಮಠ, ಶ್ರೀಕಾಂತ, ಶಿವಾನಂದ, ರಾಜಶೇಖರಗೌಡ ಅಯ್ಯನಗೌಡರ, ಡಾ. ಆನಂದ, ಡಾ. ಸುಮಿತ್, ಡಾ. ಕಿರಣ, ಡಾ. ಚಿನ್ಮಯ, ಡಾ. ರವಿ ಮುಂತಾದವರು ಇದ್ದರು. ಡಾ. ಮಹೇಶ ಹಿರೇಮಠ ಸ್ವಾಗತಿಸಿದರು. ಕೆ.ಬಿ. ಕೊಣ್ಣೂರ ನಿರೂಪಿಸಿ, ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.