ವಿಧೇಯಕ ವಾಪಸ್‌ ಕಳಿಸಿದ ರಾಜ್ಯಪಾಲರ ನಡೆಗೆ ಕೈ ಕೆಂಡ

KannadaprabhaNewsNetwork |  
Published : Aug 26, 2024, 01:36 AM IST
11 ವಿಧೇಯಕಗಳನ್ನು ವಾಪಸ್‌ ಕಳಿಸಿದ ರಾಜ್ಯಪಾಲರು: ಸುನೀಲಗೌಡ ಸೇರಿದಂತೆ 15 ಶಾಸಕರ ಆಕ್ಷೇಪ  | Kannada Prabha

ಸಾರಾಂಶ

ಜನರ ವಿಶ್ವಾಸ ಗಳಿಸಿ, ಜನಪ್ರಿಯವಾದ ಸರ್ಕಾರದ ಕಾರ್ಯಚಟುವಟಿಕೆಗೆ ಅಡಿಗಡಿಗೂ ಅಡ್ಡಿ ಮಾಡುತ್ತಿರುವ ರಾಜ್ಯಪಾಲರ ಕ್ರಮ ರಾಜಕೀಯ ಪ್ರೇರಿತವಾಗಿದೆ. ಉಭಯ ಸದನಗಳಲ್ಲಿ ಅಂಗೀಕಾರವಾದ ಮಸೂದೆಗಳನ್ನು ವಾಪಸ್‌ ಮಾಡಿರುವ ರಾಜ್ಯಪಾಲರ ಕ್ರಮಕ್ಕೆ ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಸೇರಿದಂತೆ 15 ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಜನರ ವಿಶ್ವಾಸ ಗಳಿಸಿ, ಜನಪ್ರಿಯವಾದ ಸರ್ಕಾರದ ಕಾರ್ಯಚಟುವಟಿಕೆಗೆ ಅಡಿಗಡಿಗೂ ಅಡ್ಡಿ ಮಾಡುತ್ತಿರುವ ರಾಜ್ಯಪಾಲರ ಕ್ರಮ ರಾಜಕೀಯ ಪ್ರೇರಿತವಾಗಿದೆ. ಉಭಯ ಸದನಗಳಲ್ಲಿ ಅಂಗೀಕಾರವಾದ ಮಸೂದೆಗಳನ್ನು ವಾಪಸ್‌ ಮಾಡಿರುವ ರಾಜ್ಯಪಾಲರ ಕ್ರಮಕ್ಕೆ ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಸೇರಿದಂತೆ 15 ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಜಂಟಿ ಪ್ರಕಟಣೆ ನೀಡಿರುವ ಕಾಂಗ್ರೆಸ್ ಶಾಸಕರಾದ ಸುನೀಲಗೌಡ ಪಾಟೀಲ, ಮಂಜುನಾಥ ಭಂಡಾರಿ, ಎಸ್.ರವಿ, ಅನಿಲಕುಮಾರ, ರಾಜೇಂದ್ರ ರಾಜಣ್ಣ, ದಿನೇಶ ಗೂಳಿಗೌಡ, ಸುನಿಲಗೌಡ ಪಾಟೀಲ, ಚಂದ್ರಶೇಖರ ಪಾಟೀಲ, ಚೆನ್ನರಾಜು, ಮಧು ಮಾದೇಗೌಡ, ಡಾ.ತಿಮ್ಮಯ್ಯ, ರಾಮೋಜಿಗೌಡ, ಡಿ.ಟಿ.ಶ್ರೀನಿವಾಸ, ಶರಣಗೌಡ ಪಾಟೀಲ, ಭೀಮರಾವ ಪಾಟೀಲ, ತಿಪ್ಪಣ್ಣಾ ಕಮಕನೂರು ಅವರು ರಾಜ್ಯಪಾಲರ ನಡೆಯ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.ಆಗಸ್ಟ್‌ ತಿಂಗಳಲ್ಲಿ ರಾಜ್ಯಪಾಲರು ಆರು ಪ್ರಮುಖ ಮಸೂದೆಗಳನ್ನು ಹಿಂದಿರುಗಿಸಿದ್ದು, ಒಟ್ಟು 11 ವಿಧೇಯಕಗಳನ್ನು ರಾಜ್ಯಪಾಲರು ವಾಪಸ್‌ ಕಳಿಸಿದ್ದಾರೆ. ಈ ಮೂಲಕ ವಿರೋಧ ಪಕ್ಷದ ನಾಯಕರಂತೆ ವರ್ತಿಸುತ್ತಿದ್ದಾರೆ. ಕರ್ನಾಟಕ ಸಾರ್ವಜನಿಕ ಭ್ರಷ್ಟಾಚಾರ ತಡೆ ವಿಧೇಯಕ, ಕರ್ನಾಟಕ ಧಾರ್ಮಿಕ ದತ್ತಿ ತಿದ್ದುಪಡಿ ವಿಧೇಯಕ, ಕರ್ನಾಟಕ ಟೌನ್‌ ಆ್ಯಂಡ್‌ ಕಂಟ್ರಿ ಪ್ಲಾನಿಂಗ್‌ ವಿಧೇಯಕ, ಕರ್ನಾಟಕ ಶಾಸಕಾಂಗ ಸದಸ್ಯರ ಅನರ್ಹತೆ ತಡೆ ವಿಧೇಯಕ, ಕರ್ನಾಟಕ ಪುರಸಭೆಗಳು ಮತ್ತು ಇತರೆ ಕೆಲವು ಕಾನೂನು ವಿಧೇಯಕ, ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಲಾವಿದರ ಕಲ್ಯಾಣ ವಿಧೇಯಕ, ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ, ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಗದಗ ಬೆಟಗೇರಿ ವ್ಯಾಪಾರ ಸಂಸ್ಕೃತಿ ಪ್ರದರ್ಶನ ಪ್ರಾಧಿಕಾರ ವಿಧೇಯಕ, ಕರ್ನಾಟಕ ನೋಂದಣಿ ತಿದ್ದುಪಡಿ ವಿಧೇಯಕಗಳನ್ನು ರಾಜ್ಯಪಾಲರು ಇದುವರೆಗೆ ವಾಪಸ್‌ ಮಾಡಿದ್ದಾರೆ. ಈ ಕ್ರಮ ಸರಿಯಲ್ಲ ಎಂದು ಕೈ ಶಾಸಕರು ಹೇಳಿದ್ದಾರೆ.ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ಮಸೂದೆಗಳು ಅಂಗೀಕಾರವಾಗಿದ್ದರೂ ಕಾಯಿದೆಯಲ್ಲಿ ಲೋಪದೋಷಗಳಿದ್ದರೆ, ಸ್ಪಷ್ಟನೆ ಕೇಳುವ ಅಧಿಕಾರ ರಾಜ್ಯಪಾಲರಿಗಿದೆ. ಆದರೆ, ಪ್ರತಿಪಕ್ಷದವರು ವಿರೋಧಿಸಿದ್ದಾರೆಂಬ ಕಾರಣಕ್ಕೆ ಮಸೂದೆಗಳನ್ನು ವಾಪಸ್‌ ಕಳಿಸುವುದು ಸರಿಯಾದ ಕ್ರಮವಲ್ಲ. ಕಾಲಕಾಲಕ್ಕೆ ಕಾನೂನು ತಿದ್ದುಪಡಿ ಮಾಡುವ ಅವಕಾಶವನ್ನು ಸಂವಿಧಾನವೇ ನೀಡಿದೆ. ಜನಪ್ರತಿನಿಧಿಗಳು, ಬಹುಮತದ ಸರ್ಕಾರ ಶಾಸನ ರೂಪಿಸುತ್ತದೆ. ಅದು, ಕೆಳಮನೆ, ಮೇಲ್ಮನೆಯಲ್ಲಿ ಚರ್ಚೆಯಾಗಿ ಅಂಗೀಕಾರವಾಗಬೇಕು. ಅದನ್ನು ರಾಜ್ಯಪಾಲರು ತಮ್ಮ ಅಂಕಿತದೊಂದಿಗೆ ಅಂಗೀಕರಿಸಬೇಕು. ನಂತರ ಕಾಯಿದೆ ಜಾರಿಯಾಗಬೇಕು ಎಂಬುದು ಕ್ರಮ. ಅದಕ್ಕೆ ಅಡ್ಡಿಪಡಿಸುವುದು ಸಮಂಜಸವಲ್ಲ. ಈ ರೀತಿ ಮಾಡುವುದರಿಂದ ಶಾಸನ ಸಭೆಗಳ ಮಹತ್ವ ಕಡಿಮೆ ಆಗುತ್ತದೆ. ಒಕ್ಕೂಟದ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಇದರಲ್ಲಿ ರಾಜಕೀಯದ ದುರುದ್ದೇಶ ಕಾಣುತ್ತದೆ ಎಂದು ಆರೋಪಿಸಿದ್ದಾರೆ.ಅವರೇ ಪ್ರಮಾಣವಚನ ಬೋಧಿಸಿದ ಈ ಕಾಂಗ್ರೆಸ್ ಸರ್ಕಾರಕ್ಕೆ ಜನ ಬೆಂಬಲ ಇರುವ ರಾಜ್ಯ ಸರ್ಕಾರದ ಮೇಲೆ ರಾಜ್ಯಪಾಲರಿಗೆ ವಿಶ್ವಾಸ ಇದ್ದಂತಿಲ್ಲ. ರಾಜ್ಯಪಾಲರ ನಡೆ ಗಮನಿಸಿದರೆ, ದುರುದ್ದೇಶ ಪೂರ್ವಕವಾಗಿ ಸರ್ಕಾರಕ್ಕೆ ತೊಂದರೆ ಕೊಡುತ್ತಿರುವಂತೆ ಕಾಣುತ್ತಿದೆ. ಇವರು ಬಿಜೆಪಿ, ಮೈತ್ರಿ ಪಕ್ಷದ ಮಾತು ಕೇಳಿ ರಾಜ್ಯ ಸರ್ಕಾರದ ಕಾರ್ಯಗಳಿಗೆ ಅಡ್ಡಿಪಡಿಸಿದರೆ ಏನೂ ಉಪಯೋಗವಾಗದು ಎಂದು ತಿಳಿಸಿದ್ದಾರೆ.ಕಾನೂನು ಹೋರಾಟದ ಎಚ್ಚರಿಕೆ:

ರಾಜ್ಯದಲ್ಲಿ ಏಕ ಕಾಲದಲ್ಲಿ 11 ಮಸೂದೆಗಳಿಗೆ ಅಡ್ಡಿಪಡಿಸುವ ಮೂಲಕ ರಾಜ್ಯಪಾಲರು ಕರ್ನಾಟಕದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಕೇರಳ, ಮಹಾರಾಷ್ಟ್ರ, ಪಂಜಾಬ್‌ನಲ್ಲಿ ಇದೇ ಧೋರಣೆಯನ್ನು ಅಲ್ಲಿನ ರಾಜ್ಯಪಾಲರು ಅನುಸರಿಸಿದ್ದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಸಮರ ಮಾಡಿ ಮಸೂದೆಗಳಿಗೆ ಅಂಗೀಕಾರ ಪಡೆಯಬೇಕಾಯಿತು. ಎಲ್ಲ ನಿರ್ಣಯಗಳೂ ಶಾಸನ ಸಭೆಯಲ್ಲೇ ಆಗಬೇಕು ಎಂದು ಸುಪ್ರೀಂ ಕೋರ್ಟ್‌ ಕೂಡ ಹೇಳಿದೆ. ಹೀಗಾಗಿ ಕರ್ನಾಟಕದ ರಾಜ್ಯಪಾಲರು ಮತ್ತೊಮ್ಮೆ ತಮ್ಮ ನಿರ್ಧಾರಗಳನ್ನು ಮರುಪರಿಶೀಲಿಸಬೇಕು. ಸಂವಿಧಾನದ ರಕ್ಷಕರಾದ ತಾವು ಪಕ್ಷಪಾತ ಧೋರಣೆಯನ್ನು ಅನುಸರಿಸಬಾರದು. ಉಭಯ ಸದನಗಳಲ್ಲಿ ಅಂಗೀಕಾರವಾದ ಮಸೂದೆಗಳಿಗೆ ಅಂಕಿತ ಹಾಕಿ ಸುಗಮ ಆಡಳಿತಕ್ಕೆ ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಜನರ ಆಶೋತ್ತರಗಳನ್ನು ಈಡೇರಿಸುವ ಸಲುವಾಗಿ ಅನಿವಾರ್ಯವಾಗಿ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ಶಾಸಕರು ರಾಜ್ಯಪಾಲರಿಗೆ ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಸ್‌ ಕೋರ್ಸ್‌ ಸ್ಥಳಾಂತರಕ್ಕೆ ಪ್ರಭಲ ವಿರೋಧ
ವೈಜ್ಞಾನಿಕ ಚಿಂತನೆ ಬದುಕಿನ ಭಾಗವಾಗಿರಬೇಕು