ನಿರಂತರ ಮಳೆಗೆ ಹೆಸರು ಬೆಳೆಗೆ ರೋಗ ಬಾಧೆಯ ಕಂಟಕ

KannadaprabhaNewsNetwork |  
Published : Aug 12, 2024, 01:06 AM IST
(8ಎನ್.ಆರ್.ಡಿ4 ಅತಿಯಾದ ಮಳೆಗೆ ಹೆಸರು ಬೆಳೆ ಹಾನಿಯಾಗಿರವದು.) | Kannada Prabha

ಸಾರಾಂಶ

ಔಷಧಿ ಸಿಂಪರಣೆ ಮಾಡಿದರೂ ಹಳದಿ ಹಾಗೂ ಬೂದಿ ರೋಗ ಹತೋಟಿಗೆ ಬಾರದಿರುವರಿಂದ ಅನ್ನದಾತರು ಭಯಬೀಳುವಂತಾಗಿದೆ

ಎಸ್.ಜಿ. ತೆಗ್ಗಿನಮನಿ ನರಗುಂದ

ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತೇವಾಂಶ ಹೆಚ್ಚಾಗಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಹೆಸರು ಬೆಳೆ ಹಳದಿ ಹಾಗೂ ಬೂದಿ ರೋಗಕ್ಕೆ ಸಿಲುಕಿ ರೈತರನ್ನು ಆತಂಕಗೊಳ್ಳುವಂತೆ ಮಾಡಿದೆ.

ಮುಂಗಾರು ಮಳೆ ಉತ್ತಮವಾಗಿ ಸುರಿದ ಕಾರಣ ಹೆಸರು ಬಿತ್ತನೆ ಮಾಡಿದ್ದು, ಬೆಳೆ ಚೆನ್ನಾಗಿ ಬಂದಿದೆ. ಇನ್ನೇನು ಕಾಯಿ ಬಿಡುವ ವೇಳೆಗೆ ಸುರಿದ ಮಳೆಯ ಹಿನ್ನೆಲೆ ಹಳದಿ ಹಾಗೂ ಬೂದಿ ರೋಗಕ್ಕೆ ತುತ್ತಾಗಿದನ್ನು ಕಂಡು ರೈತರು ಕೃಷಿ ಅಧಿಕಾರಿಗಳ ನಿರ್ದೇಶನದಂತೆ ಔಷಧಿ ಸಿಂಪರಣೆ ಮಾಡಿದರೂ ಹಳದಿ ಹಾಗೂ ಬೂದಿ ರೋಗ ಹತೋಟಿಗೆ ಬಾರದಿರುವರಿಂದ ಅನ್ನದಾತರು ಭಯಬೀಳುವಂತಾಗಿದೆ.

ಪ್ರತಿ ವರ್ಷ ತಾಲೂಕಿನಲ್ಲಿ ಗೋವಿನಜೋಳ, ಬಿಟಿ ಹತ್ತಿ ಬೆಳೆಯುವ ಅನ್ನದಾತರು, ಪ್ರಸಕ್ತ ವರ್ಷದಲ್ಲಿ ಮುಂಗಾರು ಮಳೆ ಸುರಿದ ಹಿನ್ನೆಲೆ ಬಿತ್ತನೆ ಗುರಿಗಿಂತ ಹೆಚ್ಚು ಹೆಸರು ಬೆಳೆಯಲು ಮುಂದಾದ ರೈತರಿಗೆ ಈ ಮಳೆ ಆವಾಂತರ ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ.

ಹೆಸರು ಹೂವು, ಮಗ್ಗಿ ಬಿಡುವ ಸಮಯಕ್ಕೆ ಅತಿಯಾದ ಮಳೆ ಹಾಗೂ ತಂಪಾದ ವಾತಾವರಣದಿಂದ ಬೆಳೆಗೆ ತೇವಾಂಶ ಹೆಚ್ಚಾಗಿ ಹೂವು ಮಗ್ಗಿ ಹಾನಿಯಾಗಿ ಬೆಳೆ ಜಮೀನುಗಳಲ್ಲಿ ಕೊಳೆಯುತ್ತಿದೆ.

ಪ್ರಸಕ್ತ ವರ್ಷ ತಾಲೂಕಿನ ರೈತರು ನೀರಾವರಿ ಮತ್ತು ಖುಷ್ಕಿ ಜಮೀನಿನಲ್ಲಿ 22000 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬೆಳೆ ಬಿತ್ತನೆ ಮಾಡಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಮುಂಗಾರು ಮಳೆ ಉತ್ತಮವಾಗಿದೆ, ಒಳ್ಳೆಯ ಇಳುವರಿ ಬರಬಹುದು ಎಂದು ನಿರೀಕ್ಷೆಯಲ್ಲಿದ್ದೇವು. ಆದರೆ ಅತಿಯಾದ ಮಳೆಯಿಂದ ಬೆಳೆದು ನಿಂತ ಹೆಸರು ಬೆಳೆಗೆ ಹಳದಿ ಹಾಗೂ ಬೂದಿ ರೋಗ ಆವರಿಸಿಕೊಂಡು ಇಳುವರಿ ಕುಂಠಿತವಾಗಿರುವುದು. ಅಲ್ಲದೇ ಸಾಲಸೋಲ ಮಾಡಿ ರೋಗ ಹತೋಟಿಗೆ ಔಷಧಿ ಸಿಂಪಡಿಸಿದರೂ ಯಾವ ಪ್ರಯೋಜನವಾಗುತ್ತಿಲ್ಲ ಎಂದು ಕುರ್ಲಗೇರಿ ರೈತ ಯಲ್ಲಪ್ಪ ಚಲವಣ್ಣವರ ತಿಳಿಸಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಹೆಸರು ಬೆಳೆ ತೇವಾಂಶ ಹೆಚ್ಚಾಗಿ ಸಂಪೂರ್ಣ ನಾಶವಾಗಿದೆ. ಆದರಿಂದ ಸರ್ಕಾರ ಮಳೆಗೆ ಹಾನಿಯಾದ ಪ್ರತಿ ಎಕರೆಗೆ ₹50 ಸಾವಿರ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಶಹರ ಘಟಕದ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ವಿಠಲ ಜಾಧವ ತಿಳಿಸಿದ್ದಾರೆ.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ