ವಿಬಿ ಜಿ ರಾಮ್ ಜಿ: ಕುಮಟಾದಲ್ಲಿ ಬಿಜೆಪಿ ಜಿಲ್ಲಾ ಸಮಾವೇಶ
ಕಾಂಗ್ರೆಸಿಗೆ ಯೋಜನೆ ಸುಧಾರಣೆಗಿಂತಲೂ ಯೋಜನೆಯಲ್ಲಿ ರಾಮನ ಹೆಸರು ನಿದ್ದೆಗೆಡಿಸಿದೆ. ಬಡವರಿಗೆ ಶಕ್ತಿ ನೀಡುವುದು ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ, ೨೦೪೭ಕ್ಕೆ ವಿಕಸಿತ ಭಾರತದ ದೂರದೃಷ್ಟಿಯೊಂದಿಗೆ ಯೋಜನೆ ಸುಧಾರಣೆ ಮಾಡಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಇಲ್ಲಿಯ ಹವ್ಯಕ ಸಭಾಭವನದಲ್ಲಿ ಶನಿವಾರ ವಿಬಿ ಜಿ ರಾಮ್ ಜಿ ಕುರಿತು ಬಿಜೆಪಿ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮ ಪಂಚಾಯಿತಿ ಕಾಯಿದೆ ೧೯೯೨-೯೩ರಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಕೂಲಿಗಾಗಿ ಕಾಳು ಯೋಜನೆ ಜಾರಿಯಲ್ಲಿತ್ತು. ಬಳಿಕ ನೆಹರೂ ರೋಜಗಾರ ಯೋಜನೆ, ಬಳಿಕ ಉದ್ಯೋಗ ಖಾತ್ರಿ ಯೋಜನೆಯೆಂದು ಬದಲಾಯಿತು. ಇದನ್ನೇ ೨೦೦೮ರಲ್ಲಿ ಎಂಜಿ ನರೇಗಾ ಎಂದು ಬದಲಿಸಲಾಗಿದೆ. ಬದಲಾದ ಯೋಜನೆಗಳಲ್ಲಿ ಸುಧಾರಣೆ ಏನು ಎಂಬುದಷ್ಟೇ ಪ್ರಶ್ನೆಯಾಗಿದೆ ಎಂದು ಅವರು ಹೇಳಿದರು.
ಈ ಯೋಜನೆಯಲ್ಲಿ ರಾಜ್ಯದಲ್ಲೇ ₹೬೦೦ ಕೋಟಿಯಷ್ಟು ಅಕ್ರಮವಾಗಿರುವ ವರದಿಯಾಗಿದೆ. ಇದನ್ನು ತನಿಖೆ ಮಾಡುತ್ತಿಲ್ಲ. ಯೋಜನೆಗೆ ಬಿಡುಗಡೆಯಾದ ಅನುದಾನದಲ್ಲಿ ಪಶ್ಚಿಮ ಬಂಗಾಳ ಇನ್ನಿತರ ರಾಜ್ಯಗಳಲ್ಲಿ ಒಟ್ಟೂ ₹೨೨,೫೦೦ ಕೋಟಿ ಲೂಟಿ ಮಾಡಲಾಗಿದೆ. ರಾಮಭಕ್ತರಾಗಿದ್ದ ಮಹಾತ್ಮ ಗಾಂಧೀಜಿ ಬದುಕಿದ್ದರೆ ನರೇಗಾ ಯೋಜನೆಗೆ ಶ್ರೀರಾಮನ ಹೆಸರನ್ನೇ ಇಡುತ್ತಿದ್ದರು. ಯೋಜನೆಯಲ್ಲಿ ನಡೆಯುವ ಲೂಟಿ ನೋಡಿಕೊಂಡು ಸುಮ್ಮನಿರಲಾಗದು. ರಾಜ್ಯದಲ್ಲಿ ಜಾರಿಗೆ ತಂದಿದ್ದ ಸಪ್ತಪದಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಮಾಂಗಲ್ಯಭಾಗ್ಯ ಎಂದು ಬದಲಿಸಿಲ್ಲವೇ? ಸುಳ್ಳಿನ ಗೋಪುರ ಕಟ್ಟುತ್ತಿರುವ ರಾಜ್ಯದ ದಿವಾಳಿ ಸರ್ಕಾರ ರಾಜ್ಯದಲ್ಲಿ ತುಘಲಕ್ ಕಾಯಿದೆ ತರುವ ಸಂದರ್ಭ ಸೃಷ್ಟಿಯಾಗಿದೆ. ಸರ್ಕಾರಗಳು ಕಾಲಕ್ಕೆ ತಕ್ಕಂತೆ ಹಲವಾರು ಯೋಜನೆಗಳ ಹೆಸರು ಮತ್ತು ನಿಯಮ ಬದಲಿಸಿದೆ. ವಿಚಿತ್ರವೆಂದರೆ ಜ. ೨೬ರ ಗಣರಾಜ್ಯೋತ್ಸವದಂದೇ ರಾಜ್ಯದಲ್ಲಿ ಗ್ರಾಮಸಭೆಗಳನ್ನು ನಡೆಸಿ, ಜಿ ರಾಮ್ ಜಿ ಯೋಜನೆ ವಿರೋಧ ದಾಖಲಿಸುವ ಆದೇಶ ಮಾಡಲಾಗಿದೆ. ಬಿಜೆಪಿ ಸದಸ್ಯರ್ಯಾರೂ ಅಂಥ ನಿರ್ಣಯಗಳಿಗೆ ಸಹಿ ಹಾಕದೇ ವಿರೋಧಿಸಬೇಕು ಎಂದರು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಜಿಲ್ಲೆಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಹಾಗೂ ಬೇಡ್ತಿ, ಅಘನಾಶಿನಿ ನದಿ ತಿರುವು ಯೋಜನೆಗಳಿಗೆ ಸಂಬಂಧಿಸಿ ಬಿಜೆಪಿ ನಿಲುವು ಸ್ಪಷ್ಟವಿದೆ. ಡಿಪಿಆರ್‌ಗೆ ಆನುಮತಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿಯೋಗದಿಂದ ತೆರಳಿ ಮನವಿ ಮಾಡಿದ್ದೆವು. ಆದರೂ ಅನುಮತಿ ಕೊಟ್ಟರು. ಜಿಲ್ಲೆಯ ಕಾಂಗ್ರೆಸ್ ಶಾಸಕರು, ಸಚಿವರು ಅಸಹಾಯಕರು. ಬಿಜೆಪಿಯಿಂದ ಕಾಂಗ್ರೆಸ್ ಸೇರಿದವರ ದ್ವಂದ್ವ ನಿಲುವು ಹಾಗೂ ರಾಜ್ಯ ಸರ್ಕಾರದ ಅತಿಯಾದ ಸ್ವಆಸಕ್ತಿಯೇ ಯೋಜನೆ ಹೇರಿಕೆಗೆ ಕಾರಣ ಎಂದು ಕುಟುಕಿದ ಕಾಗೇರಿ, ಯೋಜನೆ ತಡೆಗೆ ಕೇಂದ್ರದಲ್ಲಿ ನಾವು ಮಾಡಬೇಕಾದ ಜವಾಬ್ದಾರಿಯನ್ನು ಖಂಡಿತವಾಗಿ ನಿರ್ವಹಿಸುತ್ತೇವೆ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ವಿರೋಧಿಸುವುದೇ ಮೂಲ ಉದ್ದೇಶ ಹೊಂದಿದ ಕಾಂಗ್ರೆಸ್, ಜಿ ರಾಮ್ ಜಿ ಯೋಜನೆಯನ್ನು ತಪ್ಪಾಗಿ ಬಿಂಬಿಸುವ ಪ್ರಯತ್ನ ನಡೆಸಿದೆ. ಪಂಚಾಯಿತಿ ಮಟ್ಟದಿಂದಲೇ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯವಸ್ಥೆಯಲ್ಲಿ ಬಡ ಜನರ ಬಲವರ್ಧನೆಗೆ ಜಿ ರಾಮ್ ಜಿ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಬದಲಾದ ಯೋಜನೆಯ ಹೆಚ್ಚಿನ ಲಾಭಗಳನ್ನು ಜನರಿಗೆ ತಿಳಿವಳಿಕೆ ನೀಡಬೇಕಿದೆ. ಯೋಜನೆಯಲ್ಲಿ ರಾಮ ಪದದ ಬಳಕೆಯಾಗುವುದರಿಂದ ಕಾಂಗ್ರೆಸ್‌ಗೆ ಬೆಂಕಿ ಬಿದ್ದಿದೆ ಎಂದರು.
ವಿಬಿ ಜಿ ರಾಮ ಜಿ ಯೋಜನೆಯ ಹಿಂದಿನ ಹಾಗೂ ಬದಲಾದ ಸುಧಾರಣೆಗಳ ಸಂಪೂರ್ಣ ಮಾಹಿತಿಯುಳ್ಳ ಕರಪತ್ರ ಬಿಡುಗಡೆಗೊಳಿಸಲಾಯಿತು. ರಾಜ್ಯ ಕಾರ್ಯಕಾರಿಣಿ ಸದಸ್ಯೆ ರೇಖಾ ಹೆಗಡೆ ಅವರಿಂದ ವಂದೇ ಮಾತರಂ ಗೀತೆಯೊಂದಿಗೆ ಆರಂಭವಾದ ಸಮಾವೇಶದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.ಮಾಜಿ ಶಾಸಕರಾದ ಸುನೀಲ ಹೆಗಡೆ ಹಳಿಯಾಳ, ಸುನೀಲ ನಾಯ್ಕ ಭಟ್ಕಳ, ಮಾಜಿ ಸಚಿವ ಶಿವಾನಂದ ನಾಯ್ಕ ಭಟ್ಕಳ, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಮಾಜಿ ನಿಗಮಾಧ್ಯಕ್ಷ ಗೋವಿಂದ ನಾಯ್ಕ, ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಪದಾಧಿಕಾರಿಗಳಾದ ಈಶ್ವರ ನಾಯ್ಕ, ಗಣೇಶ ಪಂಡಿತ, ಗಿರೀಶ ನರಸಂಗಿ, ಯೋಗೇಶ ಮೇಸ್ತ, ಎಂ.ಜಿ. ಭಟ್, ರಾಜೇಂದ್ರ ನಾಯ್ಕ, ಜಾಯ್ಸನ್, ಪ್ರೇಮಕುಮಾರ, ಶ್ರೀಕಾಂತ ಇತರರು ಇದ್ದರು.