ಚಿತ್ರದುರ್ಗ: ವೃಕ್ಷಮಾತೆ ಎಂದೇ ಗುರುತಿಸಿಕೊಂಡಿರುವ ಸಾಲುಮರದ ತಿಮ್ಮಕ್ಕಳ ಹೆಸರನ್ನು ಸ್ಮರಣೀಯಗೊಳಿಸಬೇಕಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ವಿಶ್ವವಿದ್ಯಾಲಯಕ್ಕೆ ತಿಮ್ಮಕ್ಕ ಹೆಸರನ್ನು ನಾಮಕರಣ ಗೊಳಿಸಬೇಕು. ಸಾವಿರ ಎಕರೆಗೂ ಹೆಚ್ಚು ಭೂಮಿಯಲ್ಲಿ ಅವರ ಹೆಸರಿನಲ್ಲಿ ರಾಷ್ಟ್ರೀಯ ಉದ್ಯಾನವನ ಸ್ಥಾಪಿಸಬೇಕು. ಅವರ ಪುತ್ರನ ನೇತೃತ್ವದಲ್ಲಿ ಟ್ರಸ್ಟ್ ಸ್ಥಾಪಿಸಲು ಒಂದೇರಡು ಎಕರೆ ಭೂಮಿ ಕೊಟ್ಟು ಟ್ರಸ್ಟ್ ಮೂಲಕ ಪರಿಸರ ಜಾಗೃತಿ ಮೂಡಿಸಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದರು.
ಸಾಮಾನ್ಯ ಮಹಿಳೆ ತಿಮ್ಮಕ್ಕಳ ಬದ್ಧತೆ, ಪರಿಸರ ಕಾಳಜಿ, ಗಿಡ-ಮರಗಳ ಪ್ರಾಮುಖ್ಯತೆಯ ಅರಿವು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ಬುಡಕಟ್ಟು, ಹಳ್ಳಿ ಜನರು ಪ್ರಕೃತಿಯೊಂದಿಗೆ ಬದುಕು ಕಟ್ಟಿಕೊಂಡವರು. ಮರಗಳನ್ನೇ ದೇವರ ಸ್ಥಾನದಲ್ಲಿಟ್ಟು ಪೂಜಿಸಿದವರು. ನಮ್ಮ ಪೂರ್ವಿಕರು ಪರಿಸರ ರಕ್ಷಣೆಗೆ ಟೊಂಕ ಕಟ್ಟಿ ನಿಂತಹ ಮಹನೀಯರು. ಒಂದು ಹೆಜ್ಜೆ ಮುಂದಿಟ್ಟ ತಿಮ್ಮಕ್ಕ ತನಗೆ ಮಕ್ಕಳಿಲ್ಲದ ಕೊರಗು ನೀಗಿಸಿಕೊಳ್ಳಲು ಸಸಿ ನೆಟ್ಟು ಅವುಗಳನ್ನು ಸಲುಹಿದ ರೀತಿಯೇ ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ ಎಂದರು.ಪತಿ ಸಾವಿನ ಬಳಿಕ ಸಂಕಷ್ಟಕ್ಕೆ ಸಿಲುಕಿದರೂ ಸಸಿ ನೆಟ್ಟು ಪೋಷಿಸುವ ಕಾರ್ಯ ಕೈಬಿಡದೆ ಮುಂದುವರಿಸಿಕೊಂಡಿದ್ದು ಸ್ಮರಣೀಯ. ಈ ಕಾರಣಕ್ಕೆ ತಿಮ್ಮಕ್ಕ ಸಾವಿನ ಬಳಿಕವೂ ಮರ-ಗಿಡಗಳಲ್ಲಿ ಸದಾ ಜೀವಂತವಾಗಿರುತ್ತಾರೆ ಎಂದರು.
ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಜೆ.ಆರ್.ರವಿಕುಮಾರ್ ನಾಯಕನಹಟ್ಟಿ, ಮೇಘ ಗಂಗಾಧರ ನಾಯ್ಕ, ವಕೀಲರಾದ ರವೀಂದ್ರ, ಉಮಾಪತಿ, ಪರಿಸರವಾದಿ ಇನಾಯತ್ ಷರೀಫ್ ಮಾತನಾಡಿದರು.
ಕಾಂಗ್ರೆಸ್ ಎಸ್ಸಿ ವಿಭಾಗದ ತಾಲೂಕು ಅಧ್ಯಕ್ಷ ಅನಿಲ್ ಕೋಟಿ, ಹೊಳಲ್ಕೆರೆ ಕಾಂಗ್ರೆಸ್ ಮಾಧ್ಯಮ ವಿಭಾಗದ ಕಿರಣ್ ಶಿವಪುರ, ಅಜಾದ್ ನಗರ ಗ್ರಾಪಂ ಮಾಜಿ ಸದಸ್ಯ ದಾದಾಪೀರ್, ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮುನೀರಾ, ಒಬಿಸಿ ಘಟಕದ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್ ಭೀಮಸಮುದ್ರ, ಚೇತನ್ ಬೋರೇನಹಳ್ಳಿ ಇತರರಿದ್ದರು.