ಕನ್ನಡಪ್ರಭ ವಾರ್ತೆ ಹಾಸನ

ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನ ಆಧಾರಿತ ಕಲಿಕಾ ವಾತಾವರಣ ಕಲ್ಪಿಸುವ ಉದ್ದೇಶದಿಂದ ರೋಟೇರಿಯನ್ ಡಾ. ತೇಜಸ್ವಿ ಹೆಚ್.ಜೆ. ಅವರು ನಗರದ ಗಂಧದ ಕೋಠಿಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರಧಾನ) ಪ್ರೌಢಶಾಲೆಗೆ ೨೦,೦೦೦ ಮೌಲ್ಯದ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯನ್ನು ಕೊಡುಗೆಯಾಗಿ ನೀಡಿದ್ದಾರೆ.ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಮಾರ್ಟ್ ಟಿವಿಯನ್ನು ಶಾಲಾ ಆಡಳಿತಕ್ಕೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಈ ಟಿವಿಯ ಮೂಲಕ ವಿದ್ಯಾರ್ಥಿನಿಯರಿಗೆ ಡಿಜಿಟಲ್ ಮಾಧ್ಯಮದ ಮೂಲಕ ಪಾಠ ಬೋಧನೆ, ಶೈಕ್ಷಣಿಕ ವಿಡಿಯೊಗಳ ಪ್ರದರ್ಶನ, ಸ್ಮಾರ್ಟ್ ಕ್ಲಾಸ್‌ಗಳ ನಿರ್ವಹಣೆ ಹಾಗೂ ವಿಷಯಾಧಾರಿತ ಕಲಿಕೆಗೆ ಹೆಚ್ಚಿನ ಅವಕಾಶ ದೊರೆಯಲಿದ್ದು, ಸರ್ಕಾರಿ ಶಾಲೆಯಲ್ಲಿಯೇ ಖಾಸಗಿ ಶಾಲೆಗಳಿಗೆ ಸಮಾನವಾದ ತಂತ್ರಜ್ಞಾನ ಆಧಾರಿತ ಕಲಿಕಾ ವಾತಾವರಣ ನಿರ್ಮಾಣವಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಡಾ. ತೇಜಸ್ವಿ ಹೆಚ್.ಜೆ. ಅವರು ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಿದ್ದು, ಈಗಾಗಲೇ ಜಿಲ್ಲೆಯ ೧೦ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ವಿವಿಧ ಶೈಕ್ಷಣಿಕ ಸೌಲಭ್ಯಗಳನ್ನು ದೇಣಿಗೆಯಾಗಿ ನೀಡಿ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಿದ್ದಾರೆ. ಅವರ ಈ ಸೇವಾ ಮನೋಭಾವ ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.ರೋಟರಿ ಕ್ಲಬ್ ಆಫ್ ಹಾಸನ ಮಿಡ್‌ಟೌನ್ ಸಂಸ್ಥಾಪನಾ ಸಮಾರಂಭದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಈ ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮಾಜದ ದಾನಿಗಳ ಸಹಕಾರ ಅತ್ಯಗತ್ಯವಾಗಿದ್ದು, ಇಂತಹ ಸೇವಾ ಕಾರ್ಯಗಳು ಇತರರಿಗೂ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು. ಶಿಕ್ಷಣ, ಸಾರ್ವಜನಿಕ ಆರೋಗ್ಯ ಮತ್ತು ಸಮಾಜಮುಖಿ ಸೇವೆಗಳನ್ನು ಜೀವನದ ಧ್ಯೇಯವಾಗಿಸಿಕೊಂಡಿರುವ ಡಾ. ತೇಜಸ್ವಿ ಹೆಚ್.ಜೆ. ಅವರು ವಿವಿಧ ಜನಪರ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಶಾಶ್ವತ ಬದಲಾವಣೆ ತರಲು ನಿರಂತರವಾಗಿ ಶ್ರಮಿಸುತ್ತಿದ್ದು, ಸರ್ಕಾರಿ ಶಾಲೆಗಳ ಬಲವರ್ಧನೆಗೆ ನೀಡುತ್ತಿರುವ ಕೊಡುಗೆ ಶಿಕ್ಷಣ ವಲಯದಲ್ಲಿ ಮಾದರಿಯಾಗಿದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಧುನಿಕ ಕೃಷಿಕ ರಂಗಸ್ವಾಮಿ (ಅರಕಲಗೂಡು), ರೋಟರಿ ಜಿಲ್ಲೆ ೩೧೮೨ರ ಸಹಾಯಕ ಗವರ್ನರ್ ರೋಟೇರಿಯನ್ ಎ. ಮಂಜುನಾಥ್, ರೋಟರಿ ಕ್ಲಬ್ ಆಫ್ ಹಾಸನ ಮಿಡ್‌ಟೌನ್ ಅಧ್ಯಕ್ಷ ರೋಟೇರಿಯನ್ ವಿಶ್ವನಾಥ್, ಶಾಲೆಯ ಶಿಕ್ಷಕರು, ರೋಟರಿ ಸದಸ್ಯರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.