ಉಡುಪಿ: ಯುದ್ಧ ಮತ್ತು ನಂತರದ ಪ್ರಕೋಪಗಳು ಪುರಾಣ ಕಾಲದಿಂದಲೂ ಇದೆ. ಆಗಲೂ ಇದ್ದ ಶೋಕ, ದೌರ್ಜನ್ಯ, ಹತ್ಯೆ ಇಂದಿಗೂ ಇದೆ. ಆದರೆ, ಇದೀಗ ಬೇರೆ ಬೇರೆ ಸ್ವರೂಪಗಳಲ್ಲಿ ಕಾಣುತ್ತಿದೆ. ಶಾಲೆ ಮತ್ತು ಆಸ್ಪತ್ರೆಗಳ ಮೇಲೂ ಸಹ ಅಮಾನವೀಯ ದೌರ್ಜನ್ಯ, ದಾಳಿ ನಡೆಯುತ್ತಿದೆ. ಇದರ ತಡೆಗೆ ಸೌಹಾರ್ದ, ಬಾಂಧವ್ಯ ಇನ್ನೂ ವಿಸ್ತಾರಗೊಳ್ಳಬೇಕಿದೆ ಎಂದು ಲೇಖಕಿ ಡಾ. ಮಾಧವಿ ಭಂಡಾರಿ ಅನಿಸಿಕೆ ವ್ಯಕ್ತಪಡಿಸಿದರು. ಅವರು ನಗರದ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ ಧ್ವನ್ಯಾಲೋಕದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಹಾಗೂ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ‘ಗೋಡೆಗೆ ನೇತು ಹಾಕಿದ ಭೂಪಟ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಈ ಸಾಲಿನ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ ಸ್ವೀಕರಿಸಿದ ಬೆಳಗಾವಿಯ ಡಾ.ಲಕ್ಷ್ಮಣ ವಿ.ಎ. ಅವರು ಮಾತನಾಡಿ, ಕಾವ್ಯ ಪ್ರಶಸ್ತಿಗಳಲ್ಲಿಯೇ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ ಶ್ರೇಷ್ಠವಾದುದಾಗಿದೆ. ಕರ್ನಾಟಕದಲ್ಲಿಯೇ ಇದು ಪ್ರಥಮ ಪ್ರಶಸ್ತಿ ಎಂದರೂ ಅತಿಶಯೋಕ್ತಿಯಲ್ಲ. ಶಿಫಾರಸು, ಅಡ್ಡದಾರಿ ಹಿಡಿದು ಪ್ರಶಸ್ತಿಗಳ ಘನತೆ ಹಾಳು ಮಾಡಬಾರದು. ಹಾಗಾಗದೇ ಕರಾವಳಿ ಕರ್ನಾಟಕದ ಈ ಪ್ರಮುಖ ಪ್ರಶಸ್ತಿ ನನಗೆ ಲಭಿಸಿರುವುದು ಜೀವಮಾನದ ಸಾಧನೆಯಾಗಿದೆ ಎಂದರು. ಎಂಜಿಎಂ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ. ಗಾಯತ್ರಿ ಪೈ ಅಧ್ಯಕ್ಷತೆ ವಹಿಸಿದ್ದರು. ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ಚೈತನ್ಯಾ ಎನ್. ಪ್ರಾರ್ಥಿಸಿದರು. ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್‌ಆರ್‌ಸಿಯ ಸಹಾಯಕ ಸಂಶೋಧಕ ಡಾ. ಅರುಣಕುಮಾರ್ ಎಸ್.ಆರ್. ಕಾರ್ಯಕ್ರಮ ನಿರೂಪಿಸಿದರು. ಕಡೆಂಗೋಡ್ಲು ಶಂಕರ್ ಭಟ್ಟ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.