ಆಸ್ಪತ್ರೆಯಲ್ಲಿ ವ್ಹೀಲ್‌ಚೇರ್‌ಗಳ ಅಗತ್ಯ ಹೆಚ್ಚಿದೆ

KannadaprabhaNewsNetwork |  
Published : May 21, 2026, 01:45 AM IST
20ಎಚ್ಎಸ್ಎನ್12: | Kannada Prabha

ಸಾರಾಂಶ

ಹಿಮ್ಸ್ ಆಸ್ಪತ್ರೆ ಜಿಲ್ಲೆಯ ಪ್ರಮುಖ ಸರ್ಕಾರಿ ಆಸ್ಪತ್ರೆಯಾಗಿದ್ದು, ಪ್ರತಿದಿನ ಸಾವಿರಾರು ಮಂದಿ ವಿವಿಧ ಕಾಯಿಲೆಗಳ ಚಿಕಿತ್ಸೆಗೆ ಆಗಮಿಸುತ್ತಾರೆ. ಗ್ರಾಮೀಣ ಪ್ರದೇಶಗಳು ಸೇರಿದಂತೆ ದೂರದ ಊರುಗಳಿಂದಲೂ ಅನೇಕ ಬಡ ಹಾಗೂ ಮಧ್ಯಮ ವರ್ಗದ ಜನರು ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಅನಾರೋಗ್ಯದಿಂದ ಬಳಲುತ್ತಿರುವವರು, ಅಪಘಾತಕ್ಕೊಳಗಾದವರು, ವಯೋಸಹಜ ಸಮಸ್ಯೆ ಎದುರಿಸುತ್ತಿರುವ ಹಿರಿಯ ನಾಗರಿಕರು ಹಾಗೂ ದೈಹಿಕ ಅಸಮರ್ಥತೆಯಿಂದ ಬಳಲುತ್ತಿರುವ ವಿಕಲಚೇತನರು ಆಸ್ಪತ್ರೆಯೊಳಗೆ ಓಡಾಡಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆ ಆಸ್ಪತ್ರೆಯಲ್ಲಿ ವ್ಹೀಲ್‌ಚೇರ್‌ಗಳ ಅಗತ್ಯ ಹೆಚ್ಚಾಗಿದ್ದು, ಅದನ್ನು ಮನಗಂಡು ಜೈ ಭೀಮ್ ಬ್ರಿಗೇಡ್ ಸಂಘಟನೆ ನೆರವಿನ ಹಸ್ತ ಚಾಚಿದೆ.

ಕನ್ನಡಪ್ರಭ ವಾರ್ತೆ ಹಾಸನ

ಹಿಮ್ಸ್‌ಗೆ ಬರುವ ರೋಗಿಗಳು, ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ಅನುಕೂಲವಾಗುವ ಉದ್ದೇಶದಿಂದ ಜೈ ಭೀಮ್ ಬ್ರಿಗೇಡ್ ಸಂಘಟನಾ ಸಮಿತಿ ವತಿಯಿಂದ ವ್ಹೀಲ್‌ಚೇರ್‌ಗಳನ್ನು ಹಿಮ್ಸ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ರಾಜಣ್ಣ ಅವರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.ಹಿಮ್ಸ್ ಆಸ್ಪತ್ರೆ ಜಿಲ್ಲೆಯ ಪ್ರಮುಖ ಸರ್ಕಾರಿ ಆಸ್ಪತ್ರೆಯಾಗಿದ್ದು, ಪ್ರತಿದಿನ ಸಾವಿರಾರು ಮಂದಿ ವಿವಿಧ ಕಾಯಿಲೆಗಳ ಚಿಕಿತ್ಸೆಗೆ ಆಗಮಿಸುತ್ತಾರೆ. ಗ್ರಾಮೀಣ ಪ್ರದೇಶಗಳು ಸೇರಿದಂತೆ ದೂರದ ಊರುಗಳಿಂದಲೂ ಅನೇಕ ಬಡ ಹಾಗೂ ಮಧ್ಯಮ ವರ್ಗದ ಜನರು ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಅನಾರೋಗ್ಯದಿಂದ ಬಳಲುತ್ತಿರುವವರು, ಅಪಘಾತಕ್ಕೊಳಗಾದವರು, ವಯೋಸಹಜ ಸಮಸ್ಯೆ ಎದುರಿಸುತ್ತಿರುವ ಹಿರಿಯ ನಾಗರಿಕರು ಹಾಗೂ ದೈಹಿಕ ಅಸಮರ್ಥತೆಯಿಂದ ಬಳಲುತ್ತಿರುವ ವಿಕಲಚೇತನರು ಆಸ್ಪತ್ರೆಯೊಳಗೆ ಓಡಾಡಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆ ಆಸ್ಪತ್ರೆಯಲ್ಲಿ ವ್ಹೀಲ್‌ಚೇರ್‌ಗಳ ಅಗತ್ಯ ಹೆಚ್ಚಾಗಿದ್ದು, ಅದನ್ನು ಮನಗಂಡು ಜೈ ಭೀಮ್ ಬ್ರಿಗೇಡ್ ಸಂಘಟನೆ ನೆರವಿನ ಹಸ್ತ ಚಾಚಿದೆ.ಕಾರ್ಯಕ್ರಮದಲ್ಲಿ ಮಾತನಾಡಿದ ಜೈ ಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಸಮಾಜದಲ್ಲಿ ಸೇವಾಭಾವ ಅತ್ಯಂತ ಮುಖ್ಯವಾಗಿದೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರು ಹೆಚ್ಚಿನವರು ಬಡವರು ಹಾಗೂ ಗ್ರಾಮೀಣ ಭಾಗದ ಜನರು. ಇಂತಹವರಿಗೆ ಚಿಕಿತ್ಸೆ ಮಾತ್ರವಲ್ಲ, ಆಸ್ಪತ್ರೆಯೊಳಗೆ ಸುಗಮವಾಗಿ ಸಂಚರಿಸಲು ಮೂಲ ಸೌಲಭ್ಯಗಳೂ ಅಗತ್ಯವಾಗಿವೆ. ವ್ಹೀಲ್‌ಚೇರ್‌ ಕೊರತೆಯಿಂದ ರೋಗಿಗಳು ಹಾಗೂ ಅವರ ಕುಟುಂಬಸ್ಥರು ಸಂಕಷ್ಟ ಅನುಭವಿಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆ ಸಂಘಟನೆ ವತಿಯಿಂದ ವ್ಹೀಲ್‌ಚೇರ್‌ಗಳನ್ನು ನೀಡಲಾಗಿದೆ ಎಂದು ಹೇಳಿದರು. ಹಿರಿಯ ನಾಗರಿಕರು, ವಿಕಲಚೇತನರು ಹಾಗೂ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳು ಆಸ್ಪತ್ರೆಯಲ್ಲಿ ಒಂದು ವಾರ್ಡ್‌ನಿಂದ ಮತ್ತೊಂದು ವಾರ್ಡ್‌ಗೆ ತೆರಳಲು ಸಹಾಯಕ್ಕಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ವ್ಹೀಲ್‌ಚೇರ್‌ಗಳು ಅತ್ಯಂತ ಉಪಯುಕ್ತವಾಗುತ್ತವೆ. ನಮ್ಮ ಸಂಘಟನೆ ಸಮಾಜದ ಅಗತ್ಯಗಳನ್ನು ಗುರುತಿಸಿ ಸಾರ್ವಜನಿಕ ಸೇವೆಗೆ ಆದ್ಯತೆ ನೀಡುತ್ತಿದೆ. ಮುಂದಿನ ದಿನಗಳಲ್ಲಿಯೂ ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಜನಪರ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಹಿಮ್ಸ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ರಾಜಣ್ಣ ಮಾತನಾಡಿ, ಜೈ ಭೀಮ್ ಬ್ರಿಗೇಡ್ ಸಂಘಟನೆ ಸಮಾಜದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಆಸ್ಪತ್ರೆಯ ಅವಶ್ಯಕತೆಯನ್ನು ಮನಗಂಡು ವ್ಹೀಲ್‌ಚೇರ್‌ಗಳನ್ನು ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಪ್ರತಿದಿನ ಅಪಾರ ಸಂಖ್ಯೆಯಲ್ಲಿ ರೋಗಿಗಳು ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಇಂತಹ ಸಹಾಯ ಸಾಮಗ್ರಿಗಳು ಸಾರ್ವಜನಿಕರಿಗೆ ಸಾಕಷ್ಟು ಉಪಯೋಗವಾಗುತ್ತವೆ. ಸಂಘಟನೆಯ ಈ ಕಾರ್ಯ ಇತರರಿಗೂ ಪ್ರೇರಣೆಯಾಗಲಿ ಎಂದು ಹೇಳಿದರು.ಸಾಮಾಜಿಕ ಜವಾಬ್ದಾರಿಯನ್ನು ಮನಗಂಡು ಸಂಘಟನೆ ಕೈಗೊಂಡ ಈ ಕಾರ್ಯಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬರುವ ರೋಗಿಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಸಮಾಜ ಸೇವಾ ಸಂಘಟನೆಗಳು ಕೈಜೋಡಿಸುವುದು ಆರೋಗ್ಯ ಸೇವೆಯ ಗುಣಮಟ್ಟ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.ಈ ಸಂದರ್ಭದಲ್ಲಿ ಜೈ ಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಸರಸ್ವತಿ ರಾಜೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಸ್ವಾಮಿ, ಸಂಘಟನಾ ಸಮಿತಿಯ ಮುಖಂಡರಾದ ರಂಗನಾಥ್, ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಮಟ್ಟದ ಬಾಸ್ಕೆಟ್‌ಬಾಲ್ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮ: ಪಿ.ರವಿಕುಮಾರ್
ದಾಳಿಗೆ ಹೆದರಿ ಕಡತಗಳನ್ನು ಬಚ್ಚಿಟ್ಟ ಬೇಲೂರು ಗ್ರಾಪಂ ಅಧಿಕಾರಿಗಳು