ಕನ್ನಡಪ್ರಭ ವಾರ್ತೆ ಮಡಿಕೇರಿ
ನವಜಾತ ಅವಧಿ ಮಕ್ಕಳ ಉಳಿವಿನ ನಿರ್ಣಾಯಕ ಘಟ್ಟವಾಗಿದೆ. ಆರೋಗ್ಯವಂತ ನವಜಾತ ಶಿಶುಗಳು, ಆರೋಗ್ಯವಂತ ವಯಸ್ಕರಾಗಿ ಬೆಳೆದು ಸಮುದಾಯ ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಉತ್ತಮ ಕೊಡುಗೆ ಆಗಬಹುದು ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಮಧುಸೂಧನ್ ಹೇಳಿದ್ದಾರೆ.ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗ, ಮಡಿಕೇರಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆಶ್ರಯದಲ್ಲಿ ನಡೆದ ನವಜಾತ ಶಿಶು ಆರೈಕೆ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರದ ಯೋಜನೆಗಳಾದ ವಿಶೇಷ ನವಜಾತ ಶಿಶು ಆರೈಕೆ ಘಟಕ, ನವಜಾತ ಶಿಶು ಸ್ಥಿರೀಕರಣ ಘಟಕ, ಪೌಷ್ಠಿಕಾಂಶ ಪುನರ್ವಸತಿ ಕೇಂದ್ರ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಮತ್ತು ಸ್ತನ್ಯಪಾನ ಸಪ್ತಾಹ, ಈ ಕಾರ್ಯಕ್ರಮಗಳ ಬಗ್ಗೆ ಅವರು ಮಾಹಿತಿ ನೀಡಿದರು.ನ.15 ರಿಂದ ನ.21ರ ವರೆಗೆ ವಿಶ್ವದಾದ್ಯಂತ ನವಜಾತ ಶಿಶು ಆರೈಕೆ ಸಪ್ತಾಹ ಆಚರಿಸಲಾಗುತ್ತಿದೆ. ಶಿಶುಗಳ ಉಳಿವು ಮತ್ತು ಅಭಿವೃದ್ಧಿಗೆ ನವಜಾತ ಶಿಶುವಿನ ಆರೈಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು, ಆರೈಕೆ ಮೂಲಕ ಶಿಶು ಮರಣ ತಡೆಗಟ್ಟುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ್ ಮಾತನಾಡಿ, ನವಜಾತ ಶಿಶುವಿನ ರಕ್ಷಣೆ ಮತ್ತು ರೋಗಗ್ರಸ್ತ ನವಜಾತ ಶಿಶುವನ್ನು ಚಿಕಿತ್ಸೆಯ ಅಂಶಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ನವಜಾತ ಶಿಶು ಆರೈಕೆ ಕ್ರಮವನ್ನು ವೇಗಗೊಳಿಸಿ ಶಿಶುಮರಣ ತಡೆಯುವುದು ಈ ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಿದರು.ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಕ್ಕಳ ವಿಭಾಗದ ಸಹ ಪ್ರಾಧ್ಯಾಪಕ ಡಾ.ದಿವ್ಯರಾಣಿ ಮಾತನಾಡಿ, ನವಜಾತ ಶಿಶುಗಳ ಮರಣಕ್ಕೆ ಮುಖ್ಯ ಕಾರಣ ಅವಧಿಪೂರ್ವ ಜನನ, ಜನನದ ಸಮಯದಲ್ಲಿ ತೊಡಕುಗಳು, ತೀವ್ರ ಸೋಂಕು, ಜನ್ಮಜಾತ ಕಾಯಿಲೆಗಳು ಆಗಿವೆ. ಎಲ್ಲಾ ಮಗುವಿನ ಆರೋಗ್ಯದ ಮೇಲೆ ಹೆಚ್ಚು ಗಮನ ಹರಿಸುವುದು ಮತ್ತು ಯಾವುದೇ ತೊಡಕುಗಳಿಲ್ಲದಂತೆ ಆರೋಗ್ಯವನ್ನು ಕಾಪಾಡುವುದು ನಮ್ಮ ಗುರಿ ಎಂದು ಮಾಹಿತಿ ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಕ್ಕಳ ವಿಭಾಗದ ಹಿರಿಯ ತಜ್ಞ ವೈದ್ಯ ಡಾ.ರವಿಚಂದ್ರ ಮಾತನಾಡಿ, ನವಜಾತ ಶಿಶು ಆರೈಕೆ ಸಪ್ತಾಹ ಕಾರ್ಯಕ್ರಮದ ಬಗ್ಗೆ ವಿವರಿಸಿದರು.ಒಟ್ಟಾರೆಯಾಗಿ ಜನನವಾದ ತಕ್ಷಣ ಮತ್ತು ಮಗುವಿಗೆ 6 ತಿಂಗಳವರೆಗೆ ಎದೆ ಹಾಲನ್ನು ಮಾತ್ರ ಕುಡಿಸುವುದು. 6 ತಿಂಗಳಿನಿಂದ 2 ವರ್ಷಗಳ ವರೆಗೆ ಎದೆಹಾಲು ಮುಂದುವರಿಸುವುದು, ಸ್ವಚ್ಛತೆಗೆ ಆದ್ಯತೆ, ವಯಸ್ಸಿಗನುಗುಣವಾಗಿ ಲಸಿಕೆ ಹಾಕಿಸುವುದು ಮತ್ತು ಮಕ್ಕಳಿಗೆ ಕಂಡುಬರುವ ಸಣ್ಣಪುಟ್ಟ ಮತ್ತು ಇತರ ಯಾವುದೇ ಕಾಯಿಲೆಗಳಿಗೂ ಮನೆಮದ್ದು ಮಾಡದೆ ಸೊಪ್ಪಿನ ರಸಗಳನ್ನು ಕುಡಿಸಬಾರದು. ತಕ್ಷಣ ವೈದ್ಯರಲ್ಲಿ ಪರೀಕ್ಷಿಸಿ ಚಿಕಿತ್ಸೆ ಪಡೆದುಕೊಳ್ಳಲು ಮಾಹಿತಿ ನೀಡಿದರು.
ನರ್ಸಿಂಗ್ ಕಾಲೇಜಿನ ಪ್ರಬಾರ ಪ್ರಾಂಶುಪಾಲ ಗುರುಪ್ರಸಾದ್ ಮಾತನಾಡಿ, ನವಜಾತ ಶಿಶುವಿನ ಉಳಿವಿಗಾಗಿ, ಮಗುವಿನಲ್ಲಿ ಹಸಿವಿನ ಚಿಹ್ನೆಗಳನ್ನು ಗಮನಿಸಬೇಕು. ಮಗುವಿಗೆ ಸಾಕಾಗುವಷ್ಟು ಸ್ತನ್ಯಪಾನ ಲಭ್ಯವಾಗುತ್ತಿದೆಯೇ ಎಂದು ಪೋಷಕರು ತಿಳಿದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.‘ನವಜಾತ ಶಿಶುಗಳಲ್ಲಿ ಆಂಟಿ ಮೈಕ್ರೋಬಿಯಲ್ ಪ್ರತಿರೋಧಕವನ್ನು ತಡೆಗಟ್ಟಲು ಆಂಟಿ ಮೈಕ್ರೋಬಿಯಲ್ ಔಷಧಗಳನ್ನು ಸಮರ್ಪಕವಾಗಿ ಬಳಸುವುದು’ ಎಂಬ ಘೋಷವಾಕ್ಯದೊಂದಿಗೆ ಸಪ್ತಾಹ ನಡೆಯುತ್ತಿದೆ.
ಜಿಲ್ಲಾ ಶುಶ್ರೂಷಣಾಧಿಕಾರಿ ಭವಾನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಎಚ್.ಕೆ, ಮೇಟ್ರನ್ ದೇವಕಿ ಪಾಲ್ಗೊಂಡಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ (ಪ್ರಭಾರ) ಶಾಂತಿ ಎಚ್.ಕೆ. ಸ್ವಾಗತಿಸಿ, ವಂದಿಸಿದರು.