ಎಐಡಿವೈಓ ಸಂಘಟನೆಯಿಂದ ಪ್ರತಿಭಟನೆ । ತಹಸೀಲ್ದಾರ ಮೂಲಕ ಪ್ರಧಾನಮಂತ್ರಿಗೆ ಮನವಿ
ನೆಟ್ ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿದ್ದು, ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿ ನಗರದ
ಜಿಲ್ಲಾಧಿಕಾರಿಗಳ ಕಚೇರಿ ಎದುರು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಸೇಷನ್ ಸೋಮವಾರ ಪ್ರತಿಭಟನೆ ನಡೆಸಿತು.ಯುಜಿಸಿ-ನೆಟ್ ಪರೀಕ್ಷೆಯಲ್ಲಿನ ಅಕ್ರಮದಲ್ಲಿ ಭಾಗವಹಿಸಿದವರನ್ನು ತಕ್ಷಣವೇ ಬಂಧಿಸುವಂತೆ ಹಾಗೂ ಪರೀಕ್ಷೆ ನಡೆಸುವ ಎನ್‌ಟಿಎ ಏಜೆನ್ಸಿಯನ್ನು ರದ್ದುಗೊಳಿಸುವಂತೆ ತಹಸೀಲ್ದಾರ ರವಿ ವಸ್ತ್ರದ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.ಎಐಡಿವೈಒನ ಜಿಲ್ಲಾ ಸಮಿತಿಯ ಸದಸ್ಯ ದೇವರಾಜ ಹೊಸ್ಮನಿ ಮಾತನಾಡಿ, ಜೂ.18ರಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು (ಎನ್‌ಟಿಎ) ನಡೆಸಿದ ಯುಜಿಸಿ-ನೆಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ದೂರು ಬಂದ ಹಿನ್ನೆಲೆ ಪರೀಕ್ಷೆ ರದ್ದು ಮಾಡಲಾಗಿದೆ. ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿದೆ. ಆದರೆ ಇದರಿಂದ 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಿದೆ. ಈ ವರ್ಷದಿಂದ ಪಿಎಚ್‌ಡಿ ಪ್ರವೇಶಕ್ಕೂ ನೆಟ್ ಪರೀಕ್ಷೆ ಪಾಸಾಗುವುದು ಕಡ್ಡಾಯ ಮಾಡಿದ್ದರಿಂದಾಗಿ ಪಿಎಚ್‌ಡಿ ಪ್ರವೇಶಕ್ಕಾಗಿ ಕಾದು ಕುಳಿತ ವಿದ್ಯಾರ್ಥಿಗಳು ಹಾಗೂ ಮಹಾವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಪಡೆಯುವುದಕ್ಕಾಗಿ ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಎಲ್ಲ ನೇಮಕಾತಿಗಳಲ್ಲೂ ನಡೆಯುವ ಭ್ರಷ್ಟಾಚಾರದ ಭೂತ ಈಗ ಈ ಪರೀಕ್ಷೆಗೂ ಬಡಿದುಕೊಂಡಿದೆ. ವೈದ್ಯಕೀಯ ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಪರೀಕ್ಷೆಯಾದ ನೀಟ್ ನೀಟಾಗಿ ನಡೆಯಲಿಲ್ಲ. ನೆಟ್ ನೆಟ್ಟಗಾಗಲಿಲ್ಲ ಎಂದು ವ್ಯಂಗ್ಯವಾಡುವಂತಹ ಸ್ಥಿತಿ ಶಿಕ್ಷಣ ವ್ಯವಸ್ಥೆ ತಲುಪಿರುವುದು ದುರಂತ ಎಂದರು.
ಪ್ರತಿಭಟನೆಯಲ್ಲಿ ಮಲ್ಲಪ್ಪ, ಹನುಮಂತರಾಯ, ಮಹೇಶ, ಇಮಾಮ್ ಸಾಬ್, ಮೌನೇಶ, ಪರೀಕ್ಷಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.