ಕನ್ನಡಪ್ರಭ ವಾರ್ತೆ ಜಮಖಂಡಿ
ರೈತರು ಹಾಗೂ ಪೂಜ್ಯರ ಆಶೀರ್ವಾದದಿಂದ ನಿರಾಣಿ ಪರಿವಾರ ಹಾಗೂ ಸಮೂಹ ಸಂಸ್ಥೆಗಳು ಇಷ್ಟೊಂದು ಬೆಳೆದು ನಿಂತಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಎಂಆರ್‌ಎನ್ ಫೌಂಡೇಶನ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಕೃಷ್ಣಾ ಪುಣ್ಯಸ್ನಾನ, ಕೃಷ್ಣಾ ಆರತಿ ಹಾಗೂ ಸಂತ ಸಮಾವೇಶ ಹುಟ್ಟುಹಬ್ಬದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಮುಂದೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮುಂದಿನ ವರ್ಷ ಮುಖ್ಯಮಂತ್ರಿಯನ್ನು ಕರೆಸಿ ಕಾರ್ಯಕ್ರಮ ಮಾಡೋಣ ಎಂದು ಹೇಳಿದರು.ರೈತರ ಮಕ್ಕಳು, ರೈತರು ವಿಮಾನದಲ್ಲಿ, ಕಾರುಗಳಲ್ಲಿ ಓಡಾಡಬೇಕು ಎಂಬುವುದು ನಿರಾಣಿ ಪರಿವಾರದ ಕನಸಾಗಿದೆ. ನಾವು ಬೆಳೆಯುವ ಕಬ್ಬು. ಮೆಕ್ಕೆಜೋಳ, ಅಕ್ಕಿ, ಸಿಹಿಜೋಳದ ಬೆಳೆಗಳನ್ನ ಹೆಚ್ಚು ಇಳುವರಿ ಪಡೆಯುವ ತಂತ್ರಜ್ಞಾನ ಬಗ್ಗೆ ತಿಳಿದುಕೊಳ್ಳಲು ಯುರೋಪ ಪ್ರವಾಸ ಮಾಡಿ ಬಂದಿದ್ದಾಗಿ ತಿಳಿದ ಅವರು, ನಮ್ಮ ಭಾಗದಲ್ಲಿ ಎಕರೆಗೆ 40 ಟನ್ ಕಬ್ಬು ಬೆಳೆಯುತ್ತೇವೆ. ಪಕ್ಕದ ಮಹಾರಾಷ್ಟ್ರದಲ್ಲಿ 80 ಟನ್ ಬೆಳೆಯುತ್ತಾರೆ. ಅವರ ಮಾದರಿ ನಾವೂ ಅನುಸರಿಸಬೇಕಿದೆ. ಇದರಿಂದ ರೈತರ ಆರ್ಥಿಕ ಸ್ಥಿತಿ ಉತ್ತಮವಾಗಿ ಹೆಚ್ಚಿನ ಲಾಭ ಸಿಗಲಿದೆ ಎಂದು ಹೇಳಿದರು.
ಗೋವಿನ ಜೋಳ, ಅಕ್ಕಿ, ಸಿಹಿಜೋಳ, ಕಬ್ಬಿನಿಂದ ಇಥೆನಾಲ್ ತಯಾರಿಸುವ ಕೆಲಸವಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯ ನಿಯಂತ್ರಣ, ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಜೊತೆಗೆ ಆತ್ಮನಿರ್ಭರ ಭಾರತದ ಕನಸು ನನಸಾಗಲಿದೆ ಎಂದ ಅವರು, ಆಧುನಿಕ ತಂತ್ರಜ್ಞಾನ ಕೃಷಿಯಲ್ಲಿ ಬಳಸಿಕೊಳ್ಳಬೇಕು. ಎಐ ಸಹಯೊಗದಿಂದ ಜಮೀನು ನಿರ್ವಹಣೆ ಮಾಡಬಹುದು ಎಂದು ವಿವರಿಸಿದರು.ಹರಿಹರ ಪಂಚಮ ಸಾಲಿ ಪೀಠದ ವಚನಾನಂದ ಶ್ರೀಗಳು ಮಾತನಾಡಿ, ನಿರಾಣಿಯವರಿಗೆ ಶಕ್ತಿ ಇದೆ ಅವರನ್ನು ಬೆಳೆಸಿದರೆ ಈ ಭಾಗದಿಂದ ಒಬ್ಬ ಮುಖ್ಯಮಂತ್ರಿ ಅಭ್ಯರ್ಥಿ ಬೆಂಬಲಿಸಿದಂತಾಗುತ್ತದೆ ಎಂದು ಹೇಳಿದರು.
ನಿಡಸೋಸಿ ಸ್ವಾಮಿಗಳು, ಹಿಪ್ಪರಗಿಯ ಪ್ರಭುಜಿಮಹಾರಾಜರು, ಮಾತನಾಡಿ ಶುಭ ಕೋರಿದರು. ತೇರದಾಳ ಶಾಸಕ ಸಿದ್ದು ಸೌದಿ, ಮಾಜಿ ಶಾಸಕ ಜಿ.ಎಸ್,ನ್ಯಾಮಗೌಡ ಸೇರಿದಂತೆ ಹಲವು ಗಣ್ಯರು, ಸಾಧು ಸಂತರು ಉಪಸ್ಥಿತರಿದ್ದರು.