ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯಲ್ಲಿ ಸೊಳ್ಳೆಗಳಿಂದ ಹರಡುವ ಡೆಂಘೀ ಕಾಯಿಲೆ ನಿತ್ಯ ಎಂಬಂತೆ ಹೆಚ್ಚುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ 250 ಮಂದಿಯಲ್ಲಿ ಡೆಂಘೀ ಪತ್ತೆಯಾಗಿದೆ. ಅವರಲ್ಲಿ ಬಹುತೇಕ ಮಂದಿ ಚಿಕಿತ್ಸೆಯಿಂದ ಗುಣಮುಖವೂ ಆಗಿದ್ದಾರೆ.ಜಿಲ್ಲಾ ಆರೋಗ್ಯ ಇಲಾಖೆ ಸಾಂಕ್ರಮಿಕ ಕಾಯಿಲೆಗಳು ಹರಡದಂತೆ ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಪರಿಣಾಮ ಜನರು ಸಕಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಕಾಯಿಲೆಯಿಂದ ಯಾರೂ ಮೃತರಾಗಿಲ್ಲ.
ಮಂಗಳವಾರ 5 ಮಂದಿಯಲ್ಲಿ ಡೆಂಘಿ ಪತ್ತೆಯಾಗಿತ್ತು. ಬುಧವಾರ ಮತ್ತೆ 10 ಮಂದಿಯಲ್ಲಿ ಈ ಕಾಯಿಲೆ ಇರುವುದು ದೃಢಪಟ್ಟಿದೆ ಎಂದು ಮಲೇರಿಯಾ ನಿರ್ಮೂಲನಾಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.ಪ್ರಸ್ತುತ 250 ಮಂದಿ ರೋಗಿಗಳಲ್ಲಿ 29 ಮಂದಿ ಆಸ್ಪತ್ರೆಯಲ್ಲಿ ಸಾಮಾನ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. 4 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ.
ಆರೋಗ್ಯ ಇಲಾಖೆ ವತಿಯಿಂದ ಮಲ್ಪೆಯ ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಸೊಳ್ಳೆಗಳನ್ನು ನಿವಾರಿಸಲು ಫಾಗಿಂಗ್ ನಡೆಸಲಾಯಿತು.ಮಳೆಗಾಲದಲ್ಲಿ ಸೊಳ್ಳೆಗಳಿಗೆ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಮಣಿಪಾಲದ ಸ್ಯಾಂಡ್ ಹಾರ್ಟ್ ಕಲಾವಿದರಾದ ಶ್ರೀನಾಥ್ ಮಣಿಪಾಲ್, ರವಿ ಹಿರೇಬೆಟ್ಟು, ಪುರಂದರ ಮಲ್ಪೆ ಅವರು ಕಾಪು ಬೀಚ್ ನಲ್ಲಿ ಸೊಳ್ಳೆಯ ಬಹೃತ್ ಮರಳಶಿಲ್ಪವನ್ನು ರಚಿಸಿ ಜನರ ಗಮನ ಸೆಳೆದರು.
ವೈದ್ಯರ ಸಲಹೆಯಿಲ್ಲದೆ ಪ್ಯಾರಾಸಿಟಮಲ್ ಮಾರಾಟ ಇಲ್ಲ: ಉಡುಪಿ - ಜಿಲ್ಲೆಯಾದ್ಯಂತ ವ್ಯಾಪಕವಾಗಿ ಡೆಂಘಿ ಮತ್ತಿತರ ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚಾಗುತ್ತಿದ್ದು, ರೋಗಿಗಳು ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯದೇ ಸ್ವ ಔಷಧೋಪಾಚಾರ ಮಾಡಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯೂ ಇದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಔಷಧ ವ್ಯಾಪಾರಿಗಳು ಕಡ್ಡಾಯವಾಗಿ ವೈದ್ಯರ ಸಲಹಾ ಚೀಟಿ ಇಲ್ಲದೆ ಪ್ಯಾರಾಸಿಟಿಮಲ್ ಮತ್ತು ಇತರೆ ಆಂಟಿಬಯೋಟಿಕ್ ಔಷಧಗಳ ಮಾರಾಟ ಮಾಡುವಂತಿಲ್ಲ ಎಂದು ಉಡುಪಿ ಸಹಾಯಕ ಔಷಧಿ ನಿಯಂತ್ರಕರು ಆದೇಶಿಸಿದ್ದಾರೆ.ರಕ್ತದಾನಿಗಳ ಪಟ್ಟಿ ಮಾಡಿ: ಜಿಲ್ಲೆಯ ಎಲ್ಲ ರಕ್ತ ಕೋಶ ಕೇಂದ್ರದವರು ರಕ್ತ ಹಾಗೂ ರಕ್ತ ಉತ್ಪನ್ನಗಳ ಕೊರತೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ರಕ್ತದಾನಿಗಳ ಪಟ್ಟಿಯನ್ನು ಸಿದ್ಧ ಪಡಿಸಿಟ್ಟುಕೊಂಡು ಅವಶ್ಯಕತೆಗೆ ಅನುಗುಣವಾಗಿ ರಕ್ತವನ್ನು ಪಡೆದು ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.