- ಕೆಎಸ್ಸಾರ್ಟಿಸಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಬಸವ ಜಯಂತಿ । ಡಾ.ಶಿವಶಂಕರಪ್ಪರಿಗೆ ಗೌರವ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದಲ್ಲಿ ಸುಮಾರು 2 ಕೋಟಿಯಷ್ಟು ವೀರಶೈವ ಲಿಂಗಾಯತರಿದ್ದರೂ, ಜಾತಿಗಣತಿಯಲ್ಲಿ ನಮ್ಮ ಸಮಾಜದ ಜನಸಂಖ್ಯೆಯನ್ನು ಕೇವಲ 50-60 ಲಕ್ಷವೆಂದು ತೋರಿಸಿದ್ದಾರೆ. ನಮ್ಮಲ್ಲಿ ಒಗ್ಗಟ್ಟು ಇಲ್ಲದಿದ್ದರೆ ಮುಂದಿನ ಹತ್ತು ವರ್ಷಗಳಲ್ಲಿ ನಮ್ಮ ಸಮಾಜವೇ ಇಲ್ಲವೆಂದು ತೋರಿಸಿದರೂ ಅಚ್ಚರಿ ಇಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ, ಅಪೂರ್ವ ಹೋಟೆಲ್ ಸಮೂಹಗಳ ಸಂಸ್ಥಾಪಕ ಅಣಬೇರು ರಾಜಣ್ಣ ಹೇಳಿದರು.ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಆವರಣದಲ್ಲಿ ಭಾನುವಾರ ಕೆಎಸ್ಸಾರ್ಟಿಸಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಬಸವ ಜಯಂತಿ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಭಾವೀಲಿಂಮ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಜಾತಿಗಣತಿಯಲ್ಲಿ ಸರ್ಕಾರವು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತರನ್ನು ತೋರಿಸಿದ ಬಗ್ಗೆ ಧ್ವನಿ ಎತ್ತಿದ್ದಾರೆ. ಅಲ್ಲದೇ, ಗುರು-ವಿರಕ್ತರು, ನಾಡಿನ ಎಲ್ಲ ವೀರಶೈವ ಲಿಂಗಾಯತ ಮಠಾಧೀಶರು, ಸ್ವಾಮೀಜಿಗಳಿಗೆ ಒಂದಾಗಿ, ಸಮಾಜ ಒಗ್ಗೂಡಿಸುವಂತೆ ಒತ್ತಡ ಹೇರಿದ್ದಾರೆ ಎಂದರು.ಡಾ.ಶಾಮನೂರು ಶೀವಶಂಕರಪ್ಪ ನೇತೃತ್ವ ಮತ್ತು ಅಧ್ಯಕ್ಷತೆಯಲ್ಲಿ ಮಹಾಸಭಾದಿಂದ ಸಭೆ ನಡೆಸಿ, ಸಮಾಜ ಒಗ್ಗೂಡಿಸುವ ಬಗ್ಗೆ ಚರ್ಚಿಸಲಾಗುವುದು. ಅಲ್ಲದೇ, ಕೇಂದ್ರ ಸರ್ಕಾರವೇ ಕೈಗೊಳ್ಳಲಿರುವ ಜಾತಿ ಜನಗಣತಿಯಲ್ಲಿ ವೀರಶೈವ ಲಿಂಗಾಯತ ಸಮಾಜ ಬಾಂಧವರು ಗಣತಿಯಲ್ಲಿ ಏನು ಬರೆಸಬೇಕೆಂಬ ಬಗ್ಗೆ ತೀರ್ಮಾನಿಸಿ, ಸಮಾಜಕ್ಕೆ ಸಂದೇಶ ನೀಡಲಿದ್ದಾರೆ ಎಂದು ರಾಜಣ್ಣ ವಿವರಿಸಿದರು.
ಸಮಾಜದ ಹಿರಿಯ ಮುಖಂಡ ಚಂದ್ರಶೇಖರ ಪೂಜಾರ ಮಾತನಾಡಿ, ಕ್ಷೇಮಾಭಿವೃದ್ಧಿ ಸಂಘವೆಂದರೆ ಒಳ್ಳೆಯ ಸ್ನೇಹಿತರ ಸಮ್ಮಿಲನ ಇದ್ದಂತೆ. ಸಂಘಟನೆಯಿಂದ ಬಸವ ಜಯಂತಿ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆ. ಅದೇ ರೀತಿ ನೌಕರರ ಸಮಸ್ಯೆಗೂ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಸಂಘ ಪ್ರಯತ್ನಿಸಿದರು. ವೀರಶೈವ ಲಿಂಗಾಯತ ಸಂಘ- ಸಂಸ್ಥೆಗಳು ಕೇವಲ ಜಾತಿಗೆ ಸೀಮಿತವಾಗದೇ, ಎಲ್ಲರ ಹಿತ ಕಾಯುತ್ತಿವೆ. ಮಠಗಳು ಸಹ ಜಾತ್ಯತೀತವಾಗಿ ತ್ರಿವಿಧ ದಾಸೋಹಕ್ಕೆ ಹೆಸರಾಗಿದೆ. ಎಲ್ಲರೂ ನಮ್ಮವರೆಂದು ಒಪ್ಪಿಕೊಳ್ಳುವ ಸಮುದಾಯವೆಂದರೆ ಅದು ವೀರಶೈವ ಲಿಂಗಾಯತರು ಎಂದು ಹೇಳಿದರು.ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣಕುಮಾರ ಎಫ್. ಬಸಾಪುರ ಅಧ್ಯಕ್ಷತೆ ವಹಿಸಿದ್ದರು. ಸಾಧಕರಿಗೆ ಸನ್ಮಾನಿಸಲಾಯಿತು. ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ, ಕೆಎಸ್ಸಾರ್ಟಿಸಿ ಮುಖ್ಯ ಅಭಿಯಂತರ ಸಿದ್ದೇಶ್ವರ ಹೆಬ್ಬಾಳ್, ಹಿರಿಯ ಸಾಹಿತಿ ಎಸ್.ಟಿ. ಶಾಂತಗಂಗಾಧರ, ಸಮಾಜದ ಹಿರಿಯ ಮುಖಂಡರಾದ ಆರುಂಡಿ ನಾಗರಾಜ, ಭಾನುವಳ್ಳಿ ಬಿ.ಎಂ.ವಾಗೀಶಸ್ವಾಮಿ, ಅಶೋಕ ಗೋಪನಾಳ್ ಇತರರು ಇದ್ದರು.
- - -(ಬಾಕ್ಸ್) * ಸಮಬಾಳು ಹಕ್ಕು ನೀಡಿದ ಬಸವಣ್ಣ: ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ನಡೆಯುತ್ತಿರುವ ಭಯೋತ್ಪಾದನೆ, ಉಗ್ರವಾದ ನಿಯಂತ್ರಣಕ್ಕೆ ಬಸವತತ್ವವೊಂದೇ ಪರಿಹಾರವಾಗಿದೆ. ಪಾಕಿಸ್ತಾನ ದ್ವೇಷವಿಟ್ಟುಕೊಂಡು, ಭಾರತದೊಂದಿಗೆ ವಾಮಮಾರ್ಗದಲ್ಲಿ ಕದನಕ್ಕೆ ಇಳಿಯುತ್ತಿದೆ. ದ್ವೇಷಕ್ಕೆ ಬಸವ ತತ್ವದಲ್ಲಿ ಮದ್ದು ಇದೆ. ಬಸವ ತತ್ವದ ಅನ್ವಯ ಪ್ರೀತಿಯಿಂದ ಮಾತ್ರ ದ್ವೇಷ ಅಳೆದು, ಶಾಂತಿ ನೆಲೆಸಲಿದೆ. ಪ್ರೀತಿಯಿಂದ ಮಾತ್ರ ಜಗತ್ತು ಉಳಿಯುತ್ತದೆ ಎಂದರು.
ಭ್ರಷ್ಟಾಚಾರ ಎಲ್ಲೆಡೆ ತಾಂಡವವಾಡುತ್ತಿದೆ. ಸತ್ಯ ಶುದ್ಧ ಕಾಯಕ ಮಾಡಿದರೆ ಅದೆಲ್ಲದನ್ನೂ ಹೋಗಲಾಡಿಸಬಹುದು. ಸರ್ವ ಸಮಾನತೆ ಹರಿಕಾರರಾದ ಬಸವಣ್ಣ ಸೂರ್ಯನಿದ್ದಂತೆ. ಒಂದುವೇಳೆ ಬಸವಣ್ಣ ಜನಿಸದೇ ಇದ್ದಿದ್ದರೆ ನಾವು ಸಮಾನತೆಗಾಗಿ ಇಂದಿಗೂ ಹೋರಾಟ ನಡೆಸಬೇಕಾಗಿತ್ತು. ಅನುಭವ ಮಂಟಪ ಸ್ಥಾಪಿಸಿ, ಎಲ್ಲ ಜಾತಿ, ಧರ್ಮೀಯರು, ಮಹಿಳೆಯರಿಗೆ ಅವಕಾಶ ಕೊಟ್ಟು, ಸಮಾನವಾಗಿ ಬಾಳುವ ಹಕ್ಕು ನೀಡಿದರು ಎಂದು ತಿಳಿಸಿದರು.- - -
-(ಫೋಟೋ ಇದೆ.)