* ಪ್ರದೀಪ್ ಮಾವಿನಕೈ
ಹವಾಮಾನ ವೈಪರೀತ್ಯದಿಂದಾಗಿ ಬ್ಯಾಕೋಡು ಭಾಗದ ರೈತರ ತೋಟದಲ್ಲಿ ಅಡಕೆ ಮಣಿ ಮತ್ತು ಕಾಯಿ ಉದುರುವುದು, ಇದ್ದಕ್ಕಿದ್ದಂತೆ ಸಿಂಗಾರ ಒಣಗಿ ಹೋಗುತ್ತಿದ್ದು, ಇದೇ ರೀತಿ ಬಿಸಿಲು ಮತ್ತು ಮಳೆಯ ವಾತಾವರಣ ಮುಂದುವರೆದರೆ ಕಾಯಿ ಅಡಕೆ ಕೊಳೆ ರೋಗಕ್ಕೂ ತುತ್ತಾಗುವ ಭೀತಿ ಎದುರಾಗಿದೆ.
ಮಲೆನಾಡಿನ ಅಡಕೆ ಬೆಳೆಗಾರರು ಒಂದಲ್ಲ ಒಂದು ರೀತಿಯ ಸಂಕಷ್ಟಕ್ಕೆ ಸಿಲುಕುತ್ತಲೇ ಇರುತ್ತಾರೆ. ಎಲೆ ಚುಕ್ಕಿ ರೋಗ, ಬೇರುಹುಳ, ಮಣಿ ಉದರುವುದು, ನಿರು ಕೊಳೆ, ಬೂದಿ ಕೊಳೆ. ಸಿಂಗಾರ ಸಾಯುವುದು, ಆದರಲ್ಲೂ ಕಳೆದ ವರ್ಷ ವಾಡಿಕೆ ಮಳೆ ಕೊರತೆಯಿಂದ ನೀರಿನ ಕೊರತೆ ಉಂಟಾಗಿದ್ದು, ಕುಡಿಯಲೂ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಮಳೆಗಾಳದ ಆರಂಭದ ಹೊತ್ತಿನಲ್ಲಿ ಸರಾಸರಿ ಫಸಲಿನಲ್ಲಿ ಶೇಕಡ 30 ರಷ್ಟು ಹಾನಿಯಾಗಿತ್ತು. ಇದ್ದಷ್ಟು ಅಡಕೆಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೇ ಕಂಗಾಲಾಗಿದ್ದರು.ಆದರೆ ಈಗಾಗಲೇ ಒಟ್ಟು ಫಸಲಿನಲ್ಲಿ ಶೇ.20 ರಷ್ಟು ಅಡಕೆ ಮಣಿ ಮತ್ತು ಕಾಯಡಿಕೆ ಉದುರಿ ಹೋಗಿದ್ದು, ಅದನ್ನು ನಿಯಂತ್ರಣ ಮಾಡಲು ಬಾಯೊಫೈಟ್, ಮೈಲು ತುತ್ತು ವಿವಿಧ ಔಷಧಿಗಳನ್ನು ಸಿಂಪಡಿಸುತ್ತಿದ್ದಾರೆ. ಇಲ್ಲಿಗೆ ರೋಗ ನಿಯಂತ್ರಣವಾದರೇ ಉತ್ತಮ. ಇಲ್ಲವಾದರೆ ಮಳೆ ಹೆಚ್ಚಾದ ಸಂದರ್ಭದಲ್ಲಿ ಔಷಧಿ ಸಿಪಡಿಸು ವುದು ಕಷ್ಟಕರ ಮತ್ತು ಕೊಳೆಯೂ ನಿಯಂತ್ರಣವಾಗುವುದಿಲ್ಲ ಎಂಬುದು ಬ್ಯಾಕೋಡು, ತುಮರಿ ಭಾಗದ ರೈತರ ಮಾತಾಗಿದೆ.
ಅಡಕೆ ಕೊಯ್ಯುವ ಹೊತ್ತಿನಲ್ಲಿ ಮಂಗಗಳು ಎಲ್ಲಿಲ್ಲದ ಕಾಟ ಕೊಡುತ್ತವೆ. ತೋಟದಲ್ಲಿ ಅಡಕೆ ಅಲ್ಲಲ್ಲಿ ಹಣ್ಣಾಗಿರುವ ಸಂದರ್ಭದಲ್ಲಿ ಮಂಗಗಳು ಮತ್ತು ಅಳಿಲುಗಳು ರೈತರಿಗೆ ಹೆಚ್ಚು ನಷ್ಟವನ್ನು ಉಂಟು ಮಾಡುತ್ತವೆ. ಒಟ್ಟಾರೆಯಾಗಿ ರೈತರೂ ತಮ್ಮ ತಮ್ಮ ಅಡಕೆ ಫಸಲನ್ನು ಕಾಯ್ದುಕೊಳ್ಳಲು ಸಿಂಗಾರ ಬಿಟ್ಟಾಗಿನಿಂದ ಅಡಕೆ ಕೊಯ್ದು ಮಾರುಕಟ್ಟೆಗೆ ತಲುಪವರೆಗೂ ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಜೂನ್‌ನಲ್ಲಿ ಮಳೆ ಸುರಿದ ಪರಿಣಾಮ ಬಹುತೇಕ ಅಡಿಕೆ ಮರಗಳು ಹಿಂಗಾರ ಕೊಳೆಯುತ್ತಿದೆ. ತೇವ ಹೆಚ್ಚಾಗಿ ನಾಶವಾಗುವ ಹಂತದಲ್ಲಿವೆ. ಇದರ ಜೊತೆಗೆ ಕೀಟ ಬಾಧೆಯೂ ಜೊತೆ ಸೇರಿದ ಪರಿಣಾಮ ಶೇ. 40ರಷ್ಟು ಅಡಕೆ ತೋಟಗಳಲ್ಲಿ ಭವಿಷ್ಯದ ಫಸಲು ನೆಲಕಚ್ಚುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರತಿ ವರ್ಷದಂತೆ ಜೂನ್ ತಿಂಗಳಲ್ಲಿ ಮೈಲು ತುತ್ತ, ಸುಣ್ಣ ದ್ರಾವಣ ಮಿಶ್ರಣ ಮಾಡಿ ಸಿಂಪಡಣೆ ಬಳಿಕ ಎಳೆ ಅಡಕೆ ಉದುರು ಕಡಿಮೆಯಾಗುತ್ತಿತ್ತು. ಆದರೆ ಈ ಭಾರಿ ರೋಗ ಹತೋಟಿಗೆ ಬರುತ್ತಿಲ್ಲ. ಹೀಗಾದರೆ ಬೆಳೆದ ಫಸಲು ಕೈಗೆ ಸಿಗುವುದು ಕಷ್ಟವಾಗಲಿದೆ. ಅತ್ತ ಕೃಷಿ ಇಲಾಖೆಯೂ ಮಳೆ ಹಾಗೂ ಕೃಷಿ ಮಳೆ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎನ್ನುತ್ತಾರೆ ಹೆರಬೇಟ್ಟು ಅಡಕೆ ಬೆಳೆಗಾರ ವಿಜಯ್ ಕುಮಾರ್.