ಬಳ್ಳಾರಿಯಲ್ಲಿ ಹೇಳೋರಿಲ್ಲ-ಕೇಳೋರಿಲ್ಲ । ಜಿಲ್ಲೆಯ ಜನಪ್ರತಿನಿಧಿಗಳ ಮೌನ । ಶೀಘ್ರದಲ್ಲಿಯೇ ಕಚೇರಿ ಸ್ಥಳಾಂತರ ಆದೇಶಮಂಜುನಾಥ ಕೆ.ಎಂ.
ಕನ್ನಡಪ್ರಭ ವಾರ್ತೆ ಬಳ್ಳಾರಿನಗರದ ಜವಳಿ ಮತ್ತು ಕೈಮಗ್ಗ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯನ್ನು ಕಲಬುರಗಿಗೆ ಎತ್ತಂಗಡಿ ಮಾಡಲು ಇಲಾಖೆ ನಿರ್ಧರಿಸಿದೆ.
ನಗರದಲ್ಲಿ ಜೀನ್ಸ್ ಅಪರೆಲ್ ಪಾರ್ಕ್ ಸ್ಥಾಪನೆ ಹಿನ್ನೆಲೆ ಬಳ್ಳಾರಿ ಜೀನ್ಸ್ ಹಾಗೂ ಜವಳಿ ಉದ್ಯಮದಲ್ಲಿ ಮುನ್ನಲೆಗೆ ಬರಲಿದೆ ಎಂಬ ನಿರೀಕ್ಷೆಯ ಬೆನ್ನಲ್ಲೇ ಜವಳಿ ಇಲಾಖೆಯ ವಲಯ ಕಚೇರಿಯನ್ನು ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿದ್ದು ಈ ಭಾಗದ ಜವಳಿ ಹಾಗೂ ಕೈಮಗ್ಗ ಉದ್ಯಮಕ್ಕೆ ಹಿನ್ನಡೆಯಾಗುವ ಆತಂಕ ಮೂಡಿದೆ.ಇತ್ತೀಚೆಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿ ಸ್ಥಳಾಂತರ ಪ್ರಸ್ತಾಪ ಕೇಳಿ ಬಂದಿತ್ತು. ಕೂಡಲೇ ಎಚ್ಚೆತ್ತ ಸಂಘಟನೆಗಳು ಹೋರಾಟದ ಮೂಲಕ ಕಚೇರಿ ಬಳ್ಳಾರಿಯಲ್ಲಿಯೇ ಉಳಿಯುವಂತೆ ನೋಡಿಕೊಂಡವು.
ಏತನ್ಮಧ್ಯೆ ಬಳ್ಳಾರಿಯಲ್ಲಿ ಸ್ಥಾಪನೆಯಾಗಬೇಕಿದ್ದ ಮೆಗಾಡೈರಿಯನ್ನು ವಿಜಯನಗರ ಜಿಲ್ಲೆಗೆ ಹೊತ್ತೊಯ್ಯುವ ಹುನ್ನಾರ ಶುರುಗೊಂಡಿದ್ದು ಮತ್ತೊಂದು ಹೋರಾಟಕ್ಕೆ ಜಿಲ್ಲೆಯ ಜನರು ಸಜ್ಜಾಗುವ ಮುನ್ನವೇ ಜವಳಿ ಮತ್ತು ಕೈಮಗ್ಗ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಎತ್ತಂಗಡಿಯ ವಿಚಾರ ಬೆಳಕಿಗೆ ಬಂದಿದೆ.ಜನಪ್ರತಿನಿಧಿಗಳ ನಿರ್ಲಕ್ಷ್ಯ:
ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಫಲಿತವೇ ಈ ಎಲ್ಲ ಬೆಳವಣಿಗೆಗಳಿಗೆ ಕಾರಣ ಎಂಬ ಟೀಕೆ ಬಲವಾಗಿ ಕೇಳಿ ಬಂದಿವೆ. ಸಾರ್ವಜನಿಕ ಸಮಾವೇಶದಲ್ಲಿ ವೀರಾವೇಶದಿಂದ ಭಾಷಣ ಬಿಗಿಯುವ ಜಿಲ್ಲೆಯ ಜನಪ್ರತಿನಿಧಿಗಳಿಗೆ ತನ್ನದೇ ಜಿಲ್ಲೆಯ ಪ್ರಮುಖ ಕಚೇರಿಗಳು, ಮೆಗಾಡೈರಿ ಕೈ ತಪ್ಪುವ ಸುಳಿವು ಕಂಡು ಬಂದರೂ ಮೌನ ವಹಿಸಿರುವುದು ಯಾಕೆ? ಜವಳಿ ಮತ್ತು ಕೈಮಗ್ಗ ಜಂಟಿ ನಿರ್ದೇಶಕ ಕಚೇರಿ ಸ್ಥಳಾಂತರದ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ. ಶಾಸಕರು, ಸಂಸದರಿಗೆ ಈ ಜಿಲ್ಲೆಯ ಅಭಿವೃದ್ಧಿಯ ಕಾಳಜಿಗಳಿಲ್ಲವೇ? ಜಿಲ್ಲೆಯ ಜನರಿಂದ ಆಯ್ಕೆಗೊಂಡ ಶಾಸಕರು, ಸಂಸದರು ಯಾರ ಹಿತ ಕಾಯುತ್ತಿದ್ದಾರೆ? ಎಂಬಿತ್ಯಾದಿ ಪ್ರಶ್ನೆಗಳು ಮೂಡಿವೆ.ಜೆಡಿ ಕಚೇರಿ ಎತ್ತಂಗಡಿ?
ಕೇಂದ್ರ ಸರ್ಕಾರ ಕಲಬುರಗಿಯಲ್ಲಿ ಸುಮಾರು 1 ಸಾವಿರ ಎಕರೆ ಪ್ರದೇಶದಲ್ಲಿ ಪಿಎಂ ಮಿತ್ರ ಮೆಗಾ ಟೆಕ್ಸ್‌ಟೈಲ್ಸ್ ಪಾರ್ಕ್ ನಿರ್ಮಿಸುತ್ತಿದೆ. ನಿರ್ಮಾಣ ಕಾರ್ಯವೂ ಭರದಿಂದ ಸಾಗಿದೆ. ಹೀಗಾಗಿ ಬಳ್ಳಾರಿಯಲ್ಲಿರುವ ಜವಳಿ ಮತ್ತು ಕೈಮಗ್ಗ ಇಲಾಖೆಯ ಕಚೇರಿಯನ್ನು ಕಲಬುರಗಿಗೆ ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿದೆ. ಜವಳಿ ಪಾರ್ಕ್ ನಿರ್ಮಾಣ ಕಾರ್ಯ ಸ್ವಾಗತಾರ್ಹವಾದರೂ ಬಳ್ಳಾರಿಯ ಕಚೇರಿಯನ್ನು ಸ್ಥಳಾಂತರಿಸುವುದು ಯಾಕೆ ? ಎಂಬುದು ಸ್ಥಳೀಯರ ಪ್ರಶ್ನೆ. ಬಳ್ಳಾರಿಯಲ್ಲಿ ಜೀನ್ಸ್ ಅಪರೆಲ್ ಪಾರ್ಕ್ ನಿರ್ಮಿಸಲಾಗುವುದು. ಇದಕ್ಕಾಗಿ ₹5 ಸಾವಿರ ಕೋಟಿಯನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಬಳ್ಳಾರಿಗೆ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದರು.ಇದರಿಂದ ಬಳ್ಳಾರಿ ಜೀನ್ಸ್ ಉದ್ಯಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರ ಕುದುರಿಸಿಕೊಳ್ಳುವ ನಿರೀಕ್ಷೆ ಗರಿಗೆದರಿತ್ತು. ಆದರೆ, ರಾಜ್ಯ ಸರ್ಕಾರ ಇನ್ನೂ ಅಪರೆಲ್ ಪಾರ್ಕ್ ಸಂಬಂಧ ಯಾವುದೇ ಪೂರಕ ನಿಲುವು ತೆಗೆದುಕೊಂಡಿಲ್ಲವಾದರೂ ಉದ್ಯಮದ ಚೇತರಿಕೆಯ ವಿಶ್ವಾಸವಂತೂ ಇದ್ದೇ ಇದೆ. ಈ ನಡುವೆ ಜವಳಿ ಮತ್ತು ಕೈಮಗ್ಗ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗೆ ಕಲಬುರಗಿಗೆ ಸ್ಥಳಾಂತರಗೊಳ್ಳುತ್ತಿರುವುದು ಉದ್ಯಮದ ಪ್ರಗತಿ ನೆಲೆಯಲ್ಲಿ ಸಮಸ್ಯೆಯಾಗುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ ಇಲಾಖೆಯ ಸ್ಥಳಾಂತರದ ಪೂರ್ಣ ಪ್ರಕ್ರಿಯೆ ಮುಗಿದಿದ್ದು ಶೀಘ್ರದಲ್ಲಿಯೇ ಕಲಬುರಗಿಗೆ ಸ್ಥಳಾಂತರಗೊಳ್ಳುವುದು ಖಚಿತವಾಗಿದೆ. ಕೂಡಲೇ ಸ್ಥಳೀಯ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಿ, ಕಚೇರಿ ಸ್ಥಳಾಂತರಕ್ಕೆ ತಡೆಯೊಡ್ಡಬೇಕಾದ ಅಗತ್ಯವಿದೆ. ಖಂಡಿಸಿ ಹೋರಾಟ:
ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಪ್ರಧಾನ ಕಚೇರಿ ಸ್ಥಳಾಂತರ ವಿರೋಧಿ ಹೋರಾಟ ನಡೆಸಿ, ಸಫಲರಾಗಿದ್ದೇವೆ. ಜವಳಿ ಮತ್ತು ಕೈಮಗ್ಗ ಇಲಾಖೆಯ ಜಂಟಿ ನಿರ್ದೇಶಕ ಕಚೇರಿ ಸ್ಥಳಾಂತರದ ಸರ್ಕಾರದ ನಿಲುವು ಖಂಡಿಸಿ ಮತ್ತೆ ಹೋರಾಟ ರೂಪಿಸುತ್ತೇವೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಮುಖ್ಯಸ್ಥ ಸಿರಿಗೇರಿ ಪನ್ನರಾಜ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ಕಚೇರಿ ಸ್ಥಳಾಂತರ ವಿಚಾರ ಇಂದು ಗೊತ್ತಾಗಿದೆ. ಹೋರಾಟ ಕೈಗೆತ್ತಿಕೊಳ್ಳುವ ಸಂಬಂಧ ವಿವಿಧ ಸಂಘಟನೆಗಳ ಮುಖಂಡರು ಜೊತೆ ಚರ್ಚೆ ನಡೆಸಲಾಗುವುದು. ಜಿಲ್ಲೆಯ ಜನಪ್ರತಿನಿಧಿಗಳ ಗಮನಕ್ಕೂ ತರಲಾಗುವುದು ಎಂದು ಪನ್ನರಾಜ್ ತಿಳಿಸಿದರು.