ಹಾನಗಲ್ಲ: ಇಡೀ ಜಗತ್ತಿನಲ್ಲಿ ಸ್ತ್ರೀಯರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಎಚ್ಚರವಿರಲಿ. ಜಾತಿ, ಧರ್ಮ, ಪುರುಷ, ಮಹಿಳೆ ಎಂಬ ಭೇದಗಳ ವಿಷಯವನ್ನು ಬಂಡವಾಳ ಮಾಡಿಕೊಂಡವರು ಸಮಾನತೆಯ ಸಾಕಾರಕ್ಕೆ ಕೊಡಲಿಪೆಟ್ಟಾಗುತ್ತಿದ್ದಾರೆ ಎಂದು ಭಾರತೀಯ ಮಹಿಳಾ ಪ್ರಾದೇಶಿಕ ಸೇನಾಧಿಕಾರಿ ಭವ್ಯಾ ನರಸಿಂಹಮೂರ್ತಿ ಎಚ್ಚರಿಸಿದರು.
ಬೇರೆಯವರ ಹಕ್ಕಿಗಾಗಿ ಹೋರಾಡುವವರು ನಾಯಕರಾಗುತ್ತಾರೆ. ಸ್ವಾರ್ಥಕ್ಕಾಗಿ ಹೋರಾಡುವವರಲ್ಲ. ಜಾತಿ ವ್ಯವಸ್ಥೆ ರಹಿತವಾದ ದೇಶದ ಕನಸು ಅಂಬೇಡ್ಕರ ಅವರದ್ದಾಗಿತ್ತು. ಮಹಿಳೆ ಎಂದೂ ಅಬಲೆ ಅಲ್ಲ. ಪುರುಷ ಸಮಾನ ಎಲ್ಲ ಹಕ್ಕುಗಳಿವೆ. ಇದು ಜಾತ್ಯತೀತ, ಸಮಾನತೆಯ ಆಶಯ ಇರುವ ರಾಷ್ಟ್ರ ಎಂದರು.ತಹಸೀಲ್ದಾರ್ ಎಸ್. ರೇಣುಕಾ ಡಾ. ಬಿ.ಆರ್. ಅಂಬೇಡ್ಕರ ಅವರ ಭಾವ ಬಿಂಬಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಇಡೀ ದೇಶದ ಜನತೆ ಆತ್ಮಾವಲೋಕನದ ಹಂತದಲ್ಲಿದೆ. ಬಾಹ್ಯ ಅಸ್ಪೃಶ್ಯತೆ ಒಂದಷ್ಟು ಹಿಂದೆ ಸರಿದಂತೆ ಅನಿಸಿರಬಹುದು. ಆದರೆ ಮಾನಸಿಕ ಅಸ್ಪೃಶ್ಯತೆ ಹಾಗೆಯೇ ಇದೆ. ಇಡೀ ದೇಶದ ಅಂಕಿ ಅಂಶಗಳನ್ನು ಪರಿಗಣಿಸಿದಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಜೆಗಳಿಗೆ ಉದ್ಯೋಗಗಳಲ್ಲಿ, ಉನ್ನತ ಹುದ್ದೆಗಳಲ್ಲಿ ತೀರ ಕಡಿಮೆ ಅವಕಾಶಗಳಿವೆ. ಮೇಲ್ವರ್ಗದವರಂತೆ ಹಿಂದುಳಿದವರಿಗೂ ಇನ್ನು ಹೆಚ್ಚು ಪಾಲು ಉನ್ನತ ಉದ್ಯೋಗದಲ್ಲಿ ಅವಕಾಶ ಸಿಗಬೇಕು. ಆಗ ಮಾತ್ರ ಸಮಾನತೆ ಸಾಧ್ಯ. ಇಡೀ ದೇಶದಲ್ಲಿ ಹಿಂದುಳಿದ ವರ್ಗಗಳಿಗೆ ಇನ್ನೂ ಹೆಚ್ಚು ಮೀಸಲಾತಿ ನೀಡಿದರೆ ಮಾತ್ರ ಸಮಾನತೆ ಬರಲು ಸಾಧ್ಯ ಎಂದರು.ಸಾಮಾಜಿಕ ಹೋರಾಟಗಾರ ಸುಧೀರಕುಮಾರ ಮುರೊಳ್ಳಿ ಮಾತನಾಡಿ, ಕೇವಲ ಒಂದು ಜಾತಿ ಪಂಥಕ್ಕಲ್ಲ. ಇಡೀ ಮನುಕುಲಕ್ಕೆ ಡಾ. ಬಿ.ಆರ್. ಅಂಬೇಡ್ಕರ ಶಕ್ತಿಯಾಗಿದ್ದರು. ಈಗ ಶೋಷಿತ, ದಮನಿತ, ಕಾರ್ಮಿಕರಿಗೆ ಸ್ವಾತಂತ್ರ್ಯದ ಆಶಯ ಈಡೇರಬೇಕಾಗಿದೆ. ಹೆಣ್ಣನ್ನು ದೇವತೆ ಅಥವಾ ವಿಲನ್ ಕಾಣುವುದು ಬೇಡ. ಮನುಷ್ಯಳನ್ನಾಗಿ ಕಾಣಬೇಕಾಗಿದೆ. ಒಂದು ಜಾತಿ ಭಾಷೆಗೆ ಸೇರಿದ್ದಲ್ಲ ಈ ದೇಶ. ಬಹುಸಂಸ್ಕೃತಿಯ ಸಂದೇಶ ಇಲ್ಲಿದೆ. ನಮ್ಮ ದೇವರ ಮನೆಗಳಲ್ಲಿ ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ ಅವರ ಭಾವಚಿತ್ರಗಳನ್ನಿಟ್ಟು ಪೂಜೆ ಮಾಡಬೇಕು ಎಂದರು.ರೋಶನಿ ಕಾನ್ವೆಂಟ್ ಮುಖ್ಯಸ್ಥೆ ಸಿ. ಜಾನೆಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಗತಿಪರ ಸಂಘಟನೆಯ ಬಿ.ಆರ್. ಶೆಟ್ಟರ, ವಿಡಿಸಿ ಸದಸ್ಯ ರಘುನಾಥ ಗಾಯಕ್ವಾಡ, ಚಂದ್ರಪ್ಪ ಹೊಸಳ್ಳಿ, ಶಿವಾಜಿ ಕಲ್ಲಾಪೂರ, ಕಾಂತೇಶ ಬಾಳೂರ, ಗೀತಾ ತಳವಾರ, ಈರಮ್ಮ ಬಿದರಣ್ಣನವರ, ಸರ್ಪುನ್ನಿಸಾ ಕನವಳ್ಳಿ, ಫೈರೋಜ ಸಿರಬಡಗಿ, ಕಲಿಂಮಾಸುರಲಿ, ಮಂಜುನಾಥ ಕರ್ಜಗಿ, ರಾಮಚಂದ್ರ ಕಲ್ಲೇರ, ರಾಮಚಂದ್ರ ಶಿಡ್ಲಾಪೂರ, ರಾಮಣ್ಣ ಬುಡ್ಡನವರ ಅತಿಥಿಗಳಾಗಿದ್ದರು.