ಕನ್ನಡಪ್ರಭ ವಾರ್ತೆ ಗದಗ/ಕೊಪ್ಪಳ
ಸಿದ್ದರಾಮಯ್ಯ ಅವರಿಗೆ ಅಧಿಕಾರ ಬಿಟ್ಟು ಕೊಡುವ ಮನಸ್ಸಿಲ್ಲ, ಜೊತೆಗೆ, ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವುದು ಅರಿವಾಗಿದೆ. ಹೀಗಾಗಿ, ಸಮಾಜಗಳ ಮಧ್ಯೆ ಕಂದಕ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಜಾತ್ಯತೀತ ಹೆಸರಿನಲ್ಲಿ ಜಾತಿ-ಜಾತಿಗಳ ಮಧ್ಯೆ ಸಂಘರ್ಷ ಸೃಷ್ಟಿಸಿ, ಬ್ರಿಟಿಷರ ಕಾಲದ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಬಿಜೆಪಿ ನಾಯಕರು ಮಂಗಳವಾರ ಗದಗ ಹಾಗೂ ಕೊಪ್ಪಳದಲ್ಲಿ ಜನಾಕ್ರೋಶ ಯಾತ್ರೆ ನಡೆಸಿದರು. ಗದಗಿನ ಮಹಾತ್ಮಾ ಗಾಂಧಿ ವೃತ್ತದಲ್ಲಿ ನಡೆದ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಜಯೇಂದ್ರ, ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದರು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ವಾತಾವರಣವಿದ್ದಾಗ ಕಳೆದ ಬಾರಿ ವೀರಶೈವ-ಲಿಂಗಾಯತ ಧರ್ಮ ಒಡೆದರು. ಈಗ ಸಿಎಂ ಹುದ್ದೆ ಬಿಟ್ಟುಕೊಡಬೇಕಾದ ಅನಿವಾರ್ಯತೆ ಬಂದಿದ್ದರಿಂದ ಜಾತಿ ಜನಗಣತಿಯನ್ನು ತಂದು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಕೇವಲ 20 ತಿಂಗಳ ಅವಧಿಯಲ್ಲಿ ಒಟ್ಟಾರೆ ಹಾಲಿನ ಬೆಲೆಯಲ್ಲಿ 9 ರೂ. ಹೆಚ್ಚಳ ಮಾಡಿದೆ. ಹೀಗಾದರೆ ಬಡವರು, ರೈತರ ಪರಿಸ್ಥಿತಿ ಏನಾಗಬೇಕು?. ಬೆಲೆ ಏರಿಕೆ ಎನ್ನುವುದು ಕಾಂಗ್ರೆಸ್ ಸರಕಾರದ 6ನೇ ಗ್ಯಾರಂಟಿ. ಪ.ಜಾತಿ, ಪ.ಪಂಗಡದ 38.5 ಸಾವಿರ ಕೋಟಿ ರು.ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು, ಕೇವಲ ಮುಸ್ಲಿಂ ಸಮಾಜದ ಓಲೈಕೆಯಲ್ಲಿ ನಿರತವಾಗಿದೆ ಎಂದು ಅವರು ಟೀಕಿಸಿದರು.ನಂತರ, ಕೊಪ್ಪಳದ ಅಶೋಕ ವೃತ್ತದಲ್ಲಿ ನಡೆದ ಬೃಹತ್ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿ, ದೇಶದಲ್ಲಿಯೇ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ 1 ಇದೆ. ಇದನ್ನು ನಾನು ಹೇಳುತ್ತಿಲ್ಲ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಹೇಳಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ಕರ್ನಾಟಕ ಅಭಿವೃದ್ಧಿಯಲ್ಲಿ ನಂ.2 ಸ್ಥಾನ ಪಡೆದಿದ್ದರೆ ಇಂದು ಭ್ರಷ್ಟಾಚಾರದಲ್ಲಿ ನಂ.1 ಸ್ಥಾನ ಪಡೆದಿದೆ ಎಂದು ವಾಗ್ದಾಳಿ ನಡೆಸಿದರು.ತೆರೆದ ವಾಹನದಲ್ಲಿ ಮೆರವಣಿಗೆ:ಜನಾಕ್ರೋಶ ಯಾತ್ರೆಯಲ್ಲಿ ಪಾಲ್ಗೊಳ್ಳಲು ಗದಗಿಗೆ ಆಗಮಿಸಿದ ಬಿಜೆಪಿ ನಾಯಕರಿಗೆ ಭವ್ಯ ಸ್ವಾಗತ ನೀಡಲಾಯಿತು. ಬಳಿಕ, ನಗರದ ಹತ್ತಿಕಾಳು ಕೂಟದಿಂದ ಗಾಂಧಿ ವೃತ್ತದವರೆಗೆ ವಿಜಯೇಂದ್ರ ಹಾಗೂ ಇತರ ಮುಖಂಡರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ನಂತರ, ಗಾಂಧಿ ವೃತ್ತದಲ್ಲಿ ಬೃಹತ್ ಸಮಾವೇಶ ನಡೆಯಿತು. ಸಮಾವೇಶದ ವೇದಿಕೆ ಕಾರ್ಯಕ್ರಮದಲ್ಲಿ ವಿಜಯೇಂದ್ರ ಅವರನ್ನು ಲಂಬಾಣಿ ಸಮಾಜದ ಮಹಿಳೆಯರು ಸನ್ಮಾನಿಸಿ, ಗೌರವಿಸಿದರು. ಅಲ್ಲಿಂದ ಯಾತ್ರೆ ಕೊಪ್ಪಳಕ್ಕೆ ಆಗಮಿಸಿತು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಗಂಗಾವತಿ ಶಾಸಕ ಜನಾರ್ದನ ರೆಡ್ಡಿ, ಎನ್. ರವಿಕುಮಾರ ಮತ್ತಿತರ ನಾಯಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಕಾಂತರಾಜು ವರದಿ ಸಮರ್ಪಕವಾಗಿಲ್ಲ ಎಂದು ನಾವು ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ವೀರಪ್ಪ ಮೊಯ್ಲಿ ಕೂಡ ಹೇಳಿದ್ದಾರೆ. ಹಿಂದುಳಿದವರು, ಬಡವರ ಕಲ್ಯಾಣಕ್ಕಾಗಿ ಸರ್ಕಾರ ಚಿಂತಿಸುತ್ತಿಲ್ಲ. ಯೋಜನೆ ಜಾರಿಗೊಳಿಸುತ್ತಿಲ್ಲ. ಆದರೆ, ಕಾಂತರಾಜು ವರದಿ ಮಂಡಿಸುವ ಮೂಲಕ ಜಾತಿಯ ವಿಷಬೀಜ ಬಿತ್ತುತ್ತಿದೆ. ಇದೆಲ್ಲವನ್ನು ಜನರು ಜಾಗೃತಿಯಿಂದ ನೋಡುತ್ತಿದ್ದಾರೆ. ಇವರಿಗೆ ಪಾಠ ಕಲಿಸುವ ಕಾಲ ದೂರವಿಲ್ಲ ಎಂದರು.ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡುವ ಅಧಿಕಾರವಿಲ್ಲ. ಆದರೂ ಸಮೀಕ್ಷೆ ಹೆಸರಿನಲ್ಲಿ ಜಾತಿ ಗಣತಿ ಮಾಡಿದ್ದಾರೆ. ಹತ್ತು ವರ್ಷಗಳ ಹಿಂದೆ ಮಾಡಿದ್ದನ್ನು ಈಗ ಪ್ರಕಟಿಸಿದ್ದಾರೆ. ಜಾತಿ ಗಣತಿ ಎನ್ನುವ ಬೆದರುಗೊಂಬೆ ಹಿಡಿದುಕೊಂಡಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ಜನರು ನೆಮ್ಮದಿಯಿಂದ ಇದ್ದಾರೆ ಎನ್ನುವ ಭ್ರಮೆಯಲ್ಲಿ ಸರ್ಕಾರವಿದೆ. ಆದರೆ, ವಾಸ್ತವ ಅರಿಯಲು ಮುಖ್ಯಮಂತ್ರಿ ಸೇರಿದಂತೆ ಸಚಿವರು ಸಹ ಜನರ ಬಳಿ ಹೋಗುತ್ತಿಲ್ಲ, ರಾಜ್ಯವನ್ನು ಸುತ್ತುತ್ತಿಲ್ಲ. ಬೆಂಗಳೂರಿಗೆ ಸೀಮಿತವಾಗಿದ್ದಾರೆಂದು ಕಿಡಿಕಾರಿದರು.ಮುಸ್ಲಿಂರಿಗೆ ಶೇ. 4 ಮೀಸಲಾತಿ:
ಸರ್ಕಾರಿ ಕಾಮಗಾರಿಯಲ್ಲಿ ಮುಸ್ಲಿಂರಿಗೆ ಗುತ್ತಿಗೆಯಲ್ಲಿ ಶೇ. 4ರಷ್ಟು ಮೀಸಲಾತಿ ನೀಡಿರುವುದನ್ನು ವಿರೋಧಿಸಿದರೂ ಸರ್ಕಾರ ಜಾರಿಗೊಳಿಸಿದೆ. ಈ ಮೂಲಕ ಹಿಂದುಳಿದ ವರ್ಗಗಳಿಗೆ ಮುಖ್ಯಮಂತ್ರಿ ಅನ್ಯಾಯ ಮಾಡಿದ್ದಾರೆ. ನೀವು ರಾಜ್ಯದ ಮುಖ್ಯಮಂತ್ರಿಗಳೋ ಅಥವಾ ಮುಸ್ಲಿಂರ ಮುಖ್ಯಮಂತ್ರಿಯೇ ಎಂದು ವಿಜಯೇಂದ್ರ ಪ್ರಶ್ನಿಸಿದರು.