ಪರಿಹಾರ ನೀಡದಿದ್ದಕ್ಕೆ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿ ಜಪ್ತಿ!

KannadaprabhaNewsNetwork |  
Published : Jun 30, 2026, 01:30 AM IST
29ಕೆಎಂಎನ್‌ಡಿ-4ಹೇಮಾವತಿ ನಾಲಾ ಭೂ ಪರಿಹಾರ ನೀಡದ ವಿಶೇಷ ಭೂಸ್ವಾಧೀನ ಕಚೇರಿಯ ಕಂಪ್ಯೂಟರ್‌ಗಳನ್ನು ನ್ಯಾಯಾಲಯದ ಆದೇಶದಂತೆ ಹೊತ್ತೊಯ್ಯುತ್ತಿರುವುದು. | Kannada Prabha

ಸಾರಾಂಶ

ಮಂಡ್ಯ ಜಿಲ್ಲೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ಇಲಾಖೆಯೊಂದನ್ನು ಜಪ್ತಿ ಮಾಡಲಾಗಿದ್ದು, ಕಚೇರಿಯಲ್ಲಿದ್ದ ಗಣಕಯಂತ್ರಗಳು, ಕುರ್ಚಿ, ಮೇಜು, ಅಲ್ಮೇರಾಗಳು ಸೇರಿದಂತೆ ಪ್ರಮುಖ ಸರ್ಕಾರಿ ಸ್ವತ್ತುಗಳನ್ನು ನ್ಯಾಯಾಲಯದ ಅಮೀನರು ಹಾಗೂ ಸಂತ್ರಸ್ತರ ಪರ ವಕೀಲರ ಸಮ್ಮುಖದಲ್ಲಿ ವಶಕ್ಕೆ ಪಡೆಯಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಜಮೀನು ಕಳೆದುಕೊಂಡ ಸಂತ್ರಸ್ತ ರೈತರಿಗೆ ನ್ಯಾಯಾಲಯ ಆದೇಶಿಸಿದ್ದ ಹೆಚ್ಚುವರಿ ಪರಿಹಾರದ ಹಣವನ್ನು ಪಾವತಿಸಲು ವಿಳಂಬ ಧೋರಣೆ ಅನುಸರಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಮೊದಲ ಮಹಡಿಯಲ್ಲಿರುವ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿಯ ಪೀಠೋಪಕರಣಗಳು, ಕಂಪ್ಯೂಟರ್‌ಗಳನ್ನು ಸೋಮವಾರ ನ್ಯಾಯಾಲಯದ ಆದೇಶದಂತೆ ಜಪ್ತಿ ಮಾಡಲಾಗಿದೆ.

ಮಂಡ್ಯ ಜಿಲ್ಲೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ಇಲಾಖೆಯೊಂದನ್ನು ಜಪ್ತಿ ಮಾಡಲಾಗಿದ್ದು, ಕಚೇರಿಯಲ್ಲಿದ್ದ ಗಣಕಯಂತ್ರಗಳು, ಕುರ್ಚಿ, ಮೇಜು, ಅಲ್ಮೇರಾಗಳು ಸೇರಿದಂತೆ ಪ್ರಮುಖ ಸರ್ಕಾರಿ ಸ್ವತ್ತುಗಳನ್ನು ನ್ಯಾಯಾಲಯದ ಅಮೀನರು ಹಾಗೂ ಸಂತ್ರಸ್ತರ ಪರ ವಕೀಲರ ಸಮ್ಮುಖದಲ್ಲಿ ವಶಕ್ಕೆ ಪಡೆಯಲಾಗಿದೆ.

ಪ್ರಕರಣದ ಹಿನ್ನೆಲೆ:

ಕೆ.ಆರ್. ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಮತ್ತಿಕೆರೆ, ಕಾಡನಹಳ್ಳಿ, ಅಟ್ಟುಪೆ, ಶೆಟ್ಟಹಳ್ಳಿ, ಬೀರಚಳ್ಳಿ, ಕೀಳಂಕುಪ್ಪಲು, ಅಳವೂರು ಸೇರಿದಂತೆ ಸುಮಾರು 10 ರಿಂದ 15 ಗ್ರಾಮಗಳ ವ್ಯಾಪ್ತಿಯಲ್ಲಿ ಹೇಮಾವತಿ ನಾಲೆಯ ನಿರ್ಮಾಣಕ್ಕಾಗಿ 2006-07ರ ಅವಧಿಯಲ್ಲೇ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆರಂಭದಲ್ಲಿ ನೀಡಲಾಗಿದ್ದ ಪರಿಹಾರದ ಮೊತ್ತ ಅತ್ಯಲ್ಪವಾಗಿದ್ದರಿಂದ, ಹೆಚ್ಚಿನ ಪರಿಹಾರಕ್ಕಾಗಿ ರೈತರು ಮಂಡ್ಯದ ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದರು.

ರೈತರ ಸುದೀರ್ಘ ಹೋರಾಟವನ್ನು ಪುರಸ್ಕರಿಸಿದ ನ್ಯಾಯಾಲಯವು ಹೆಚ್ಚುವರಿ ಪರಿಹಾರವನ್ನು ಬಡ್ಡಿ ಸಮೇತ ನೀಡುವಂತೆ ಆದೇಶಿಸಿ ಎರಡು ವರ್ಷಗಳೇ ಕಳೆದಿದೆ. ಆದರೂ, ಕಚೇರಿಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಹಣ ಬಿಡುಗಡೆ ಮಾಡಲು ಯಾವುದೇ ಕ್ರಮ ವಹಿಸಿರಲಿಲ್ಲ. ನ್ಯಾಯಾಲಯದಿಂದ ಸತತ 8 ರಿಂದ 9 ಬಾರಿ ಜಪ್ತಿ ಆದೇಶ ಹೊರಬಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದರಿಂದ ಬೇಸತ್ತ ರೈತರು ಕೊನೆಗೂ ಜಪ್ತಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಸಂತ್ರಸ್ತ ರೈತ ಕೀಳನಕೊಪ್ಪಲು ಸ್ವಾಮಿ ಕೆ.ಎಸ್. ಮಾತನಾಡಿ , ನಾಲೆಗೆ ಜಮೀನು ಕೊಟ್ಟು 16 ರಿಂದ 17 ವರ್ಷ ಆಯ್ತು. ಹೆಚ್ಚುವರಿ ಪರಿಹಾರ ಕೊಡೋಕೆ ಕೋರ್ಟ್ ಆದೇಶ ಮಾಡಿ ಎರಡು ವರ್ಷ ಆಗಿದೆ. ನ್ಯಾಯಾಲಯದ ಆದೇಶಕ್ಕೆ ಅಧಿಕಾರಿಗಳು ನಯಾಪೈಸೆ ಬೆಲೆ ಕೊಟ್ಟಿಲ್ಲ. ಬಡ್ಡಿ ಸಾಲ ಮಾಡ್ಕೊಂಡು, ಸಾಲಗಾರರು ಮನೆ ಹತ್ತಿರ ಬಂದು ನಿಂತಿದ್ದಾರೆ. ಸಾಲದ ಬೇಗೆಯಲ್ಲಿ ನಾವೀಗ ಸಾಯೋ ಪರಿಸ್ಥಿತಿಗೆ ಬಂದು ತಲುಪಿದ್ದೇವೆ ಎಂದು ಅಳಲು ತೋಡಿಕೊಂಡರು.

ಸಂತ್ರಸ್ತರ ಪರ ವಕೀಲ ಧನಂಜಯ ಮಾತನಾಡಿ, ನೀರಾವರಿ ಸಚಿವರಾಗಿರುವ ರಾಮಲಿಂಗಾರೆಡ್ಡಿಯವರು ಮತ್ತು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಈ ಸೂಕ್ಷ್ಮ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಹೇಮಾವತಿ ಕಚೇರಿಯನ್ನು ಜಪ್ತಿ ಮಾಡಿದ್ದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಸರ್ಕಾರದ ಈ ಬೇಜವಾಬ್ದಾರಿತನ ಇಡೀ ಜಿಲ್ಲಾಡಳಿತದ ಗೌರವಕ್ಕೆ ಧಕ್ಕೆ ತಂದಿದೆ ಎಂದು ಅವರು ದೂರಿದರು.

ಮಂಡ್ಯ ಜಿಲ್ಲೆ ಇತಿಹಾಸದಲ್ಲೇ ಜಿಲ್ಲಾಧಿಕಾರಿ ಆವರಣದಲ್ಲಿ ಜಪ್ತಿ ಆಗಿರೋದು ಇದೇ ಮೊದಲು. ಬಿಡದಿಯಲ್ಲಿ ಒಂದು ಎಕರೆಗೆ 5 ರಿಂದ 10 ಕೋಟಿ ಘೋಷಣೆ ಮಾಡುವ ಸರ್ಕಾರಕ್ಕೆ 15 ವರ್ಷಗಳ ಹಿಂದೆಯೇ ಭೂಮಿ ಕೊಟ್ಟಿರೋ ನಮ್ಮ ಮಂಡ್ಯ ರೈತರಿಗೆ ನೀಡಲು ದುಡ್ಡಿಲ್ಲವೇ?, ಒಂದು ವೇಳೆ ಈ ಜಪ್ತಿ ಆದೇಶಕ್ಕೂ ಸರ್ಕಾರ ಬೆಲೆ ಕೊಡದಿದ್ದರೆ, ಮುಂದಿನ ದಿನಗಳಲ್ಲಿ ರೈತರೊಂದಿಗೆ ವಿಧಾನಸೌಧದ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಕೂರಲಿದ್ದೇವೆ ಎಂದು ಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಯಲ್ಲಿ ಹೈನುಗಾರಿಕೆಯ ಕೀರ್ತಿ ರೇವಣ್ಣಗೆ ಸಲ್ಲುತ್ತದೆ
​ಸರ್ಕಾರಿ ಕೆಲಸ ದೇವರ ಸೇವೆಯಂತೆ ಮಾಡಿ: ಡಾ.ಪ್ರಭಾ