ಮುಡಾ ಹಗರಣಕ್ಕೆ ಸಂಬಂಧಿಸಿದ ತನಿಖೆ ಹೊಸ ತಿರುವು : ಸಿಎಂ ಪತ್ನಿಗೆ ಸೈಟ್‌ ಕೊಟ್ಟಿದ್ದ ಅಧಿಕಾರಿ ಇ.ಡಿ. ವಶ

KannadaprabhaNewsNetwork |  
Published : Oct 30, 2024, 12:37 AM ISTUpdated : Oct 30, 2024, 11:27 AM IST
Parvathi Siddaramaiah

ಸಾರಾಂಶ

ಮುಡಾ ಹಗರಣಕ್ಕೆ ಸಂಬಂಧಿಸಿ  ಮಹತ್ವದ ಬೆಳವಣಿಗೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ನಿವೇಶನ ಹಂಚಿಕೆ ಮಾಡಿದ ಆರೋಪ ಹೊತ್ತಿರುವ ಮುಡಾ ಮಾಜಿ ಆಯುಕ್ತ ನಟೇಶ್‌ ಅವರನ್ನು ವಿಚಾರಣೆಗೆ ಸಹಕರಿಸದ ಆರೋಪದ ಮೇರೆಗೆ ಜಾರಿ ನಿರ್ದೇಶನಾಲಯ (ಇ.ಡಿ.) ತನ್ನ ವಶಕ್ಕೆ ಪಡೆದಿದೆ.

 ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದ ತನಿಖೆ ಹೊಸ ತಿರುವು ಪಡೆದುಕೊಂಡಿದೆ. ಮಹತ್ವದ ಬೆಳವಣಿಗೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ನಿವೇಶನ ಹಂಚಿಕೆ ಮಾಡಿದ ಆರೋಪ ಹೊತ್ತಿರುವ ಮುಡಾ ಮಾಜಿ ಆಯುಕ್ತ ನಟೇಶ್‌ ಅವರನ್ನು ವಿಚಾರಣೆಗೆ ಸಹಕರಿಸದ ಆರೋಪದ ಮೇರೆಗೆ ಜಾರಿ ನಿರ್ದೇಶನಾಲಯ (ಇ.ಡಿ.) ತನ್ನ ವಶಕ್ಕೆ ಪಡೆದಿದೆ.

ಹಗರಣ ಸಂಬಂಧ 34 ಗಂಟೆಗಳ ಕಾಲ ನಡೆಸಿದ ಶೋಧ ಕಾರ್ಯ ಅಂತ್ಯಗೊಳಿಸಿದ ಇ.ಡಿ. ಅಧಿಕಾರಿಗಳು, ಹಲವು ಮಹತ್ವದ ದಾಖಲೆಗಳನ್ನು ಕೊಂಡೊಯ್ದಿದ್ದಾರೆ. ದಾಳಿ ಪ್ರಕ್ರಿಯೆ ಅಂತ್ಯಗೊಳಿಸಿದ ಬೆನ್ನಲ್ಲೇ ವಿಚಾರಣೆಗೆ ಸಹಕರಿಸದ ಹಿನ್ನೆಲೆಯಲ್ಲಿ ನಟೇಶ್‌ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.

ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ಜೆ.ಪಿ.ನಗರದಲ್ಲಿನ ಬಿಲ್ಡರ್‌ ಮಂಜುನಾಥ್‌ ಹಾಗೂ ಮಲ್ಲೇಶ್ವರದಲ್ಲಿನ ನಟೇಶ್‌ ಮನೆಗಳಲ್ಲಿ ಇ.ಡಿ. ಅಧಿಕಾರಿಗಳು ಶೋಧ ಮುಂದುವರಿಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಇಬ್ಬರಿಗೂ ಸೇರಿದ ಸ್ಥಳಗಳ ಮೇಲಿನ ಕಾರ್ಯಾಚರಣೆ ಕೈಗೊಳ್ಳಲಾಯಿತು. ಮಂಗಳವಾರ ಬೆಳಗ್ಗೆಯಿಂದ ಸಂಜೆವರೆಗೆ ಪರಿಶೀಲನೆ ನಡೆಸಲಾಯಿತು. ಈ ವೇಳೆ ಅವರ ಸ್ಥಳದಲ್ಲಿ ಲಭ್ಯವಾದ ದಾಖಲೆಗಳನ್ನು ಪರಿಶೀಲನೆ ನಡೆಸಿದ ಬಳಿಕ ಇ.ಡಿ. ಅಧಿಕಾರಿಗಳು ದಾಖಲೆಗಳನ್ನು ಕೊಂಡ್ಯೊಯ್ದಿದ್ದಾರೆ. ಮಂಜುನಾಥ್‌ಗೆ ವಿಚಾರಣೆಗೆ ಕರೆದಾಗ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಇ.ಡಿ. ಅಧಿಕಾರಿಗಳು ದಾಳಿ ನಡೆಸಿದಾಗ ಕಾಣೆಯಾಗಿದ್ದ ನಟೇಶ್‌ ಅವರು ಬಳಿಕ ಮನೆಗೆ ಆಗಮಿಸಿದರು ಎಂದು ಹೇಳಲಾಗಿದೆ. ಈ ವೇಳೆ ವಿಚಾರಣೆ ನಡೆಸಿದರೂ ಸಹಕರಿಸದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಶಾಂತಿನಗರದಲ್ಲಿನ ಇ.ಡಿ. ಕಚೇರಿಗೆ ಕರೆದೊಯ್ದು ವಿಚಾರಣೆಗೊಳಪಡಿಸಲಾಗಿದೆ. ಒಂದು ವೇಳೆ ವಿಚಾರಣೆಗೆ ಮತ್ತೆ ಸಹಕಾರ ನೀಡದಿದ್ದರೆ ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾ ನಿವೇಶನ ಹಂಚಿಕೆ ಮಾಡುವ ವೇಳೆ ನಟೇಶ್‌ ಮುಡಾದ ಆಯುಕ್ತರಾಗಿದ್ದರು. ನಟೇಶ್‌ ಅವರು ಅಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ, ಮುಡಾದಿಂದ 50:50 ಅನುಪಾತದಲ್ಲಿ 928 ನಿವೇಶನಗಳು ಅಕ್ರಮ ಹಂಚಿಕೆಯಾಗಲು ನಟೇಶ್ ಕಾರಣ ಎಂಬ ಗಂಭೀರ ಆರೋಪವಿದೆ.

ಇ.ಡಿ. ಅಧಿಕಾರಿಗಳು ಇತ್ತೀಚೆಗೆ ಮೈಸೂರಿನ ಮುಡಾ ಕಚೇರಿಯ ಮೇಲೆ ದಾಳಿ ನಡೆಸಿ ಕೂಲಂಕುಷವಾಗಿ ಪರಿಶೀಲನೆ ನಡೆಸಿದ್ದರು. ಈ ವೇಳೆ ದಾಖಲೆಗಳನ್ನು ಕ್ರೋಢೀಕರಿಸಿ ಪರಿಶೀಲಿಸಿದ್ದರು. ಅಲ್ಲದೇ, ಇ.ಡಿ.ಗೆ ದೂರು ನೀಡಿರುವವರು ನೀಡಿರುವ ಮಾಹಿತಿಯನ್ನು ಸಹ ಕಲೆ ಹಾಕಲಾಯಿತು. ಎಲ್ಲವನ್ನು ವಿಸ್ತೃತವಾಗಿ ಅಧ್ಯಯನ ನಡೆಸಿದ ಇ.ಡಿ. ಅಧಿಕಾರಿಗಳು ನಟೇಶ್‌ ನಿವಾಸದ ಮೇಲೆ ದಾಳಿ ನಡೆಸಿದರು. ಈ ವೇಳೆ ಹಲವು ದಾಖಲೆಗಳು ಲಭ್ಯವಾಗಿವೆ ಎಂದು ಹೇಳಲಾಗಿದೆ. ಅಲ್ಲದೇ, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದರೂ ಹಾಜರಾಗಿರಲಿಲ್ಲ ಎನ್ನಲಾಗಿದೆ. ವಿಚಾರಣೆಗೆ ಸಹಕರಿಸದಿರುವ ಕಾರಣ ಇ.ಡಿ. ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ನಟೇಶ್‌ ನೀಡುವ ಮಾಹಿತಿ ಮೇರೆಗೆ ಇ.ಡಿ. ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...