ಸಸಿಗಳನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಅಧಿಕಾರಿಗಳದ್ದು

KannadaprabhaNewsNetwork | Published : Jun 15, 2024 1:02 AM

ಸಾರಾಂಶ

ಕೊರಟಗೆರೆ ತಾಲೂಕಿನಲ್ಲೂ ಸಹ 50 ಸಾವಿರ ಗಿಡಗಳನ್ನು ನೆಡಲಾಗುತ್ತಿದೆ, ಇದರಲ್ಲಿ 25 ಸಾವಿರ ಗಿಡಗಳನ್ನು ಗ್ರಾಪಂಗೆ ನೀಡುತ್ತಿದ್ದು, ಜಿಲ್ಲೆಯಲ್ಲಿ ಪ್ರತಿ ಗ್ರಾಪಂಗೆ ಒಂದು ಸಾವಿರ ಗಿಡಗಳನ್ನು ನೀಡುತ್ತಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಗ್ರಾಪಂಗಳ ಮೇಲಿದೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಜಿಲ್ಲೆಯಲ್ಲಿ ಹಸಿರು ಗ್ರಾಮ ಯೋಜನೆ ಸೇರಿ ವಿವಿಧ ಯೋಜನೆಯಡಿ ನೆಟ್ಟ ಸಸಿಗಳನ್ನು ಪೋಷಿಸಿ, ಸಂರಕ್ಷಿಸುವುದು ಅಧಿಕಾರಿಗಳ ಹೊಣೆಯಾಗಿದೆ ಎಂದು ಗೃಹ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಕೊರಟಗೆರೆ ತಾಲೂಕಿನ ಹುಲಿಕುಂಟೆ ಗ್ರಾಪಂಯ ಗೌರಗಾನಹಳ್ಳಿ ಗ್ರಾಮದ ರಂಗನಾಥಸ್ವಾಮಿ ಬೆಟ್ಟದಲ್ಲಿ ಜಿಪಂ, ಸಾಮಾಜಿಕ ಅರಣ್ಯ ಇಲಾಖೆಯಿಂದ ಏರ್ಪಡಿಸಿದ್ದ ಹಸಿರು ಗ್ರಾಮ ಅಭಿಯಾನ ಕಾರ್ಯಕ್ರಮದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದ ಅವರು, ದೇಶದಲ್ಲಿ ಶೇ.21 ರಷ್ಟು ಅರಣ್ಯವಿದ್ದು, ನಮ್ಮ ರಾಜ್ಯದಲ್ಲಿ ಶೇ.19 ರಷ್ಟು ಅರಣ್ಯ ಪ್ರದೇಶವಿದೆ. ಆದರೆ, ಪ್ರಕೃತಿ ಸಮತೋಲನಕ್ಕೆ ಶೇ.33 ರಷ್ಟು ಅರಣ್ಯದ ಅಭಾವವಿದೆ. ಇದರಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿ ವಾತಾವರಣದ ಉಷ್ಣತೆ ಹೆಚ್ಚಾಗುತ್ತಿದೆ, ಇದರಿಂದ ಪ್ರಕೃತಿಯ ಸಣ್ಣ ಹಾಗೂ ಅತಿ ಸಣ್ಣ ಸೂಕ್ಷ್ಮ ಜೀವಿಗಳು ನಶಿಸುತ್ತಿವೆ. ಇದರೊಂದಿಗೆ ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ಅತೀವ ಪರಿಣಾಮ ಬೀರಿ, ವಾತಾವರಣದ ಉಷ್ಣತೆ ವ್ಯತ್ಯಾಸದಲ್ಲೇ ಮನುಷ್ಯರು ಹಾಗೂ ಪ್ರಾಣಿಗಳು ಸಾಯುತ್ತಿರುವುದು ನಿಜವಾಗಿ ಆತಂಕದ ಸಂಗತಿಯಾಗಿದೆ. ಆದ್ದರಿಂದ ಪ್ರತಿ ವರ್ಷ ಜಿಲ್ಲೆಯಲ್ಲಿ ಸಾಮಾಜಿಕ ವಲಯ ಅರಣ್ಯದಿಂದ ಲಕ್ಷಾಂತರ ಗಿಡಗಳನ್ನು ಬೆಳೆಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿದ್ದು, ಅದರಂತೆ ಈ ವರ್ಷ ಜಿಲ್ಲೆಯಲ್ಲಿ ಸುಮಾರು 6 ಲಕ್ಷ, 80 ಸಾವಿರ ಗಿಡಗಳನ್ನು ಬೆಳೆಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.

ಕೊರಟಗೆರೆ ತಾಲೂಕಿನಲ್ಲೂ ಸಹ 50 ಸಾವಿರ ಗಿಡಗಳನ್ನು ನೆಡಲಾಗುತ್ತಿದೆ, ಇದರಲ್ಲಿ 25 ಸಾವಿರ ಗಿಡಗಳನ್ನು ಗ್ರಾಪಂಗೆ ನೀಡುತ್ತಿದ್ದು, ಜಿಲ್ಲೆಯಲ್ಲಿ ಪ್ರತಿ ಗ್ರಾಪಂಗೆ ಒಂದು ಸಾವಿರ ಗಿಡಗಳನ್ನು ನೀಡುತ್ತಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಗ್ರಾಪಂಗಳ ಮೇಲಿದೆ. ಸಸಿಗಳನ್ನು ಸಂರಕ್ಷಿಸುವಲ್ಲಿ ಹಲವು ಲೋಪಗಳು ಕಂಡು ಬರುತ್ತಿದ್ದು, ಮುಂಬರುವ ದಿನಗಳಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳಬೇಕಿದೆ, ಅರಣ್ಯದ ಸಂರಕ್ಷಣೆಯ ಮನೋಭಾವವನ್ನು ಶಾಲಾ ಮಕ್ಕಳಲ್ಲಿ ಬೆಳೆಸಬೇಕಾಗಿದೆ, ಇದನ್ನು ಶಿಕ್ಷಣ ಇಲಾಖಾ ಅಧಿಕಾರಿಗಳು ಶಿಕ್ಷಕರ ಮೂಲಕ ಮಾಡಿಸಬೇಕಿದೆ ಎಂದರು.

ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಜಿಲ್ಲಾ ಮಟ್ಟದ ಅರಣ್ಯಾಧಿಕಾರಿಗಳಾದ ದೇವರಾಜು, ನಾಗರಾಜು, ಅನುಪಮ, ತಹಸೀಲ್ದಾರ್ ಮಂಜುನಾಥ್, ತಾಪಂ ಇಒ ಅಪೂರ್ವ, ವಲಯ ಅರಣ್ಯಾಧಿಕಾರಿ ರವಿ, ಸಾಮಾಜಿಕ ಅರಣ್ಯಾಧಿಕಾರಿ ಶಿಲ್ಪ, ಗ್ರಾಪಂ ಅಧ್ಯಕ್ಷೆ ಜಯಮ್ಮ, ಪಿಡಿಒ ಮೈಲಣ್ಣ ಸೇರಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಇಲಾಖಾ ಅಧಿಕಾರಿಗಳು ಹಾಜರಿದ್ದರು.

Share this article