ಕೆಪಿಟಿಸಿಎಲ್ ಟವರ್ ನಿರ್ಮಾಣಕ್ಕಿದ್ದ ಅಡ್ಡಿ ನಿವಾರಣೆ

KannadaprabhaNewsNetwork |  
Published : Jan 22, 2025, 12:33 AM IST
20 46 | Kannada Prabha

ಸಾರಾಂಶ

ಸೂಕ್ತ ಪರಿಹಾರದ ಭರವಸೆ ಬಳಿಕ ಕಾಮಗಾರಿ ಆರಂಭಿಸಲು ಜಮೀನು ಮಾಲೀಕರ ಸಮ್ಮತಿ

ಕನ್ನಡಪ್ರಭ ವಾರ್ತೆ ಮೈಸೂರು

ಭೂ ಮಾಲೀಕರ ಜೊತೆಗಿನ ಯಶಸ್ವಿ ಸಂಧಾನ ಹಾಗೂ ಸೂಕ್ತ ಪರಿಹಾರ ಭರವಸೆಯ ಬಳಿಕ ಎಚ್.ಡಿ. ಕೋಟೆ ತಾಲೂಕು ವಡ್ಡರಗುಡಿ ಗ್ರಾಮದಲ್ಲಿ ಹಲವು ತಿಂಗಳುಗಳಿಂದ ವಿಳಂಬವಾಗಿದ್ದ ಕೆಪಿಟಿಸಿಎಲ್ 66/11 ಕೆ.ವಿ. ವಿದ್ಯುತ್‌ ಗೋಪುರ ಮತ್ತು ಲೈನ್‌ ನಿರ್ಮಾಣ ಕಾರ್ಯಕ್ಕೆ ಇದ್ದ ವಿಘ್ನ ನಿವಾರಣೆಯಾಗಿದೆ.

ಪೊಲೀಸರ ಸಮ್ಮುಖದಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳು ಮತ್ತು ಜಮೀನು ಮಾಲೀಕರ ಜೊತೆ ನಡೆದ ಮಾತುಕತೆ ಬಳಿಕ ಸೂಕ್ತ ಪರಿಹಾರದೊಂದಿಗೆ ನಿಗದಿತ ಸ್ಥಳದಲ್ಲಿ ಟವರ್ ನಿರ್ಮಾಣಕ್ಕೆ ಸರ್ವೆ ನಡೆಸಿ ಕಾಮಗಾರಿ ಆರಂಭಿಸಲು ಜಮೀನು ಮಾಲೀಕರು ಸಮ್ಮತಿಸಿದ್ದಾರೆ.

ಕಾಡಂಚಿನ ನೂರಕ್ಕೂ ಹೆಚ್ಚು ಗ್ರಾಮಗಳಿಗೆ ವಿದ್ಯುತ್ ಕಲ್ಪಿಸುವ ಉದ್ದೇಶದಿಂದ ಎಚ್.ಡಿ. ಕೋಟೆ ತಾಲೂಕು ವಡ್ಡರಗುಡಿ ಗ್ರಾಮದ ಜಮೀನಿನಲ್ಲಿ 66/11 ವಿದ್ಯುತ್ ಗೋಪುರ ನಿರ್ಮಿಸಲು ಸ್ಥಳ ನಿಗದಿ ಮಾಡಲಾಗಿತ್ತು. ಆದರೆ, ಕಾನೂನಿನ ಮಾಹಿತಿಯ ಕೊರತೆಯಿಂದಾಗಿ ಸ್ಥಳೀಯರು ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಕೆಲಸ ಆರಂಭಿಸಲು ಅವಕಾಶ ನೀಡಿರಲಿಲ್ಲ.

ಈ ಮಧ್ಯೆ ಜಿಲ್ಲಾಧಿಕಾರಿಗಳ ನ್ಯಾಯಾಲಯವು ಜಮೀನು ಮಾಲೀಕರಿಗೆ ಸೂಕ್ತ ಪರಿಹಾರ ನೀಡಿ ನಿಗದಿತ ಸ್ಥಳದಲ್ಲಿಯೇ ಕಾಮಗಾರಿ ಆರಂಭಿಸುವಂತೆ ಆದೇಶಿಸಿತ್ತು. ಅಲ್ಲದೆ, ಕಾಮಗಾರಿ ನಡೆಸಲು ಸೂಕ್ತ ಪೊಲೀಸ್ ಭದ್ರತೆ ಕಲ್ಪಿಸುವಂತೆಯೂ ಸೂಚಿಸಿತ್ತು. ಅದರಂತೆ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಮೈಸೂರು ವಿಭಾಗದ ಅಧೀಕ್ಷಕ ಎಂಜಿನಿಯರ್ ಟಿ.ಎಸ್. ರಮೇಶ್‌ ಅವರ ನೇತೃತ್ವದಲ್ಲಿ ಸೋಮವಾರ ಜಮೀನು ಮಾಲೀಕರೊಂದಿಗೆ ಮಾತುಕತೆ ನಡೆಸಿ, ಜಮೀನು ಮಾಲೀಕರಿಗೆ ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಲಾಯಿತು.

ಇದರಿಂದ ಸಮಾಧಾನಗೊಂಡ ಜಮೀನು ಮಾಲೀಕರು ಕಾಮಗಾರಿ ಆರಂಭಿಸಲು ಒಪ್ಪಿಗೆ ಸೂಚಿಸಿದರು. ಅದರಂತೆ ಸೋಮವಾರವೇ ಕೆಲಸ ಆರಂಭಿಸಲಾಗಿದೆ.

ಏನಿದು ಪ್ರಕರಣ?

ಅಸ್ತಿತ್ವದಲ್ಲಿರುವ ಕೆಪಿಟಿಸಿಎಲ್ ಹೊಸೂರು ಗೇಟ್ 66/11 ಕೆ.ವಿ. ಉಪ ಕೇಂದ್ರ ಮೈಸೂರಿನಿಂದ 20.568 ಕಿ.ಮೀ. ದೂರದ ಎಚ್.ಡಿ. ಕೋಟೆಯಲ್ಲಿ ಅಸ್ತಿತ್ವದಲ್ಲಿರುವ 66/11 ಕೆ.ವಿ. ಉಪ ಕೇಂದ್ರಕ್ಕೆ ಡಿಸಿ ಟವರ್‌ ಗಳ ಮೇಲೆ ಉದ್ದೇಶಿತ 66 ಕೆ.ವಿ. ಎಸ್‌ ಸಿ ಲೈನ್ ನಿರ್ಮಾಣ ಕಾಮಗಾರಿಯನ್ನು 9.77 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಈ ಯೋಜನೆಯಲ್ಲಿ 87 ಗೋಪುರಗಳು ಬರುತ್ತಿದ್ದು, ಅವುಗಳ ಪೈಕಿ 81 ಗೋಪುರಗಳ ಕಾಮಗಾರಿ ಪೂರ್ಣಗೊಂಡಿದೆ. ಕೇವಲ 6 ಗೋಪುರಗಳ ನಿರ್ಮಾಣವಾಗಬೇಕಿದ್ದು, ಗೋಪುರ ಸಂಖ್ಯೆ 75ಕ್ಕೆ ಸಂಬಂಧಿಸಿದಂತೆ ಜಮೀನು ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದರು.

ಹೀಗಾಗಿ, ಯೋಜನೆಗೆ ಅವಕಾಶ ಕಲ್ಪಿಸುವಂತೆ ಕೆಪಿಟಿಸಿಎಲ್ ವತಿಯಿಂದ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಜಿಲ್ಲಾಧಿಕಾರಿಗಳ ನ್ಯಾಯಾಲಯವು, ವಿದ್ಯುತ್ ಸರಬರಾಜು ಏರ್ಪಡಿಸಲು ಮತ್ತು ಉತ್ತಮಗೊಳಿಸಲು ಗೋಪುರಗಳ ನಿರ್ಮಾಣದ ಯೋಜನೆಯಾಗಲಿ, ನಿರ್ಮಾಣಗೊಂಡಿರುವ ಗೋಪುರಗಳ ಮಾರ್ಪಾಡುಗಳಿಲಾಗಲೀ ಅಥವಾ ಈಗಾಗಲೇ ಸ್ಥಾಪಿಸಲಾಗಿರುವ ಗೋಪುರಗಳ ವಿದ್ಯುತ್ ಲೈನುಗಳ ಪುನರ್ ನಿರ್ಮಾಣದ ಯೋಜನೆಗಳಾಗಲಿ ಯಾವುದೇ ತೊಂದರೆ ಉಂಟು ಮಾಡಬಾರದು ಎಂದು ಆದೇಶಿಸಿತ್ತು.

ಅಲ್ಲದೆ, ಜಮೀನು ಮಾಲೀಕರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು. ಜಮೀನು ಮಾಲೀಕರು ಪರಿಹಾರ ಪಡೆದು ಯೋಜನೆಗೆ ಸಹಕರಿಸಬೇಕು. ಒಂದು ವೇಳೆ ಇದನ್ನು ಮೀರಿ ಕಾಮಗಾರಿಗೆ ತೊಂದರೆ ಉಂಟು ಮಾಡಿದಲ್ಲಿ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿತ್ತು.

ಈ ಆದೇಶದನ್ವಯ ಕೆಪಿಟಿಸಿಎಲ್ ಮತ್ತು ಸೆಸ್ಕ್ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಸ್ಥಳಕ್ಕೆ ತೆರಳಿ ಸರ್ವೇ ಕಾರ್ಯ ಆರಂಭಿಸಲು ಮುಂದಾದಾಗ ಜಮೀನು ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ನ್ಯಾಯಾಲಯ ನೀಡಿದ ಆದೇಶವನ್ನು ವಿವರಿಸಿ ಸರ್ವೆ ನಡೆಸಿ ಕಾಮಗಾರಿ ಆರಂಭಿಸಲು ಅವಕಾಶ ಕಲ್ಪಿಸುವಂತೆ ಕೋರಿದರು. ಜಿಲ್ಲಾಧಿಕಾರಿಗಳ ನ್ಯಾಯಾಲಯದ ಆದೇಶದಂತೆ ಜಮೀನು ಮಾಲೀಕರಿಗೆ ಸೂಕ್ತ ಪರಿಹಾರ ನೀಡುವ ಭರವಸೆಯನ್ನೂ ನೀಡಿ ಜಮೀನು ಮಾಲೀಕರ ಮನವೊಲಿಸುವಲ್ಲಿ ಯಶಸ್ವಿಯಾದರು. ಅಧಿಕಾರಿಗಳ ಭರವಸೆಗೆ ಸ್ಪಂದಿಸಿದ ಜಮೀನು ಮಾಲೀಕರು ಕೆಲಸ ಆರಂಭಿಸಲು ಸಮ್ಮತಿಸಿದರು.

----

ಕೋಟ್‌...

ಇಂತಹ ಯೋಜನೆಗಳನ್ನು ಕೈಗೊಂಡಾಗ ಆಕ್ಷೇಪ, ವಿರೋಧ ಉಂಟಾಗುವುದು ಸಾಮಾನ್ಯ. ಆದರೆ, ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ವಿದ್ಯುತ್ ಪೂರೈಸುವ ಸಲುವಾಗಿ ಈ ಯೋಜನೆ ಕಾರ್ಯಗತಗೊಳಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ ಜಿಲ್ಲಾಧಿಕಾರಿಗಳ ನ್ಯಾಯಾಲಯ ನೀಡಿದ ಆದೇಶವನ್ನು ಜಮೀನು ಮಾಲೀಕರಿಗೆ ತಿಳಿಸಿ, ಅದಕ್ಕೆ ಬದ್ಧರಾಗಿರುವಂತೆ ಮನವಿ ಮಾಡಿ, ಅವರ ಮನವೊಲಿಸಿ ಟವರ್ ನಿರ್ಮಾಣ ಕಾರ್ಯ ಆರಂಭಿಸಲಾಯಿತು.

- ಟಿ.ಎಸ್. ರಮೇಶ್‌, ಅಧೀಕ್ಷಕ ಎಂಜಿನಿಯರ್‌, ಯೋಜನೆ, ಕೆಪಿಟಿಸಿಎಲ್ ಮೈಸೂರು ವಿಭಾಗ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ