ಒಳ ಮೀಸಲಾತಿಗೆ ನಡೆಯುತ್ತಿರುವ ಸಮೀಕ್ಷೆ ಪಾರದರ್ಶಕವಾಗಿರಲಿ

KannadaprabhaNewsNetwork | Published : May 6, 2025 12:16 AM

ಸಾರಾಂಶ

ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ನಂಜುಂಡೇಗೌಡ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿಯನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ನ್ಯಾ.ನಾಗಮೋಹನ್ ದಾಸ್ ಅವರ ಸಮಿತಿಯು ಪರಿಶಿಷ್ಟ ಜಾತಿಯಲ್ಲಿರುವ ೧೦೧ ಜಾತಿಗಳ ಸಮೀಕ್ಷೆಯನ್ನು ಸೋಮವಾರದಿಂದ ನಡೆಯಲಿದ್ದು, ನಿಖರ ದತ್ತಾಂಶವನ್ನು ಸಂಗ್ರಹಿಸಬೇಕು ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಂಜುಂಡೇಗೌಡ ತಿಳಿಸಿದರು. ನಗರದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನ್ಯಾಯಮೂರ್ತಿ, ಎಚ್.ಎನ್. ನಾಗಮೋಹನ್ ದಾಸ್‌ರ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಯ ಕುರಿತ ಗಣತೀದಾರರಿಗೆ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಿಶಿಷ್ಟ ಜಾತಿಯಲ್ಲಿರುವ ೧೦೧ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ವರ್ಗೀಕರಣ ಮಾಡುವ ಸಲುವಾಗಿ ಸರ್ಕಾರ ನ್ಯಾ. ನಾಗಮೋಹನ್ ದಾಸ್ ಅವರ ಆಯೋಗವನ್ನು ರಚನೆ ಮಾಡಿತ್ತು. ಈ ಆಯೋಗವು ಈಗಾಗಲೇ ಸರ್ಕಾರಕ್ಕೆ ವರದಿಯನ್ನು ಮಂಡಿಸಿದೆ. ಸರ್ಕಾರದ ವರದಿಯಂತೆ ಮೀಸಲಾತಿ ವರ್ಗೀಕರಣ ಮಾಡಲು ನಿಖರವಾದ ದತ್ತಾಂಶವನ್ನು ಸಂಗ್ರಹಿಸುವ ಅವಶ್ಯಕತೆ ಬಹಳ ಇದೆ. ಹೀಗಾಗಿ ಜಾತಿ ಗಣತಿ ಸಮೀಕ್ಷೆಯನ್ನು ಆಯೋಜನೆ ಮಾಡಿದ್ದು, ಈ ಗಣತಿಗೆ ನೇಮಕವಾಗಿರುವ ಶಿಕ್ಷಕರು ತಮ್ಮ ಬ್ಲಾಕ್ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳನ್ನು ಖುದ್ದಾಗಿ ಮನೆ ಮನೆ ಭೇಟಿ ಮಾಡಿ ನಿಖರವಾದ ಮಾಹಿತಿ ಸಂಗ್ರಹಿಸಿ, ಮೊಬೈಲ್ ಆ್ಯಪ್‌ಗೆ ಅಪ್ ಲೋಡ್ ಮಾಡಬೇಕು. ಜೊತೆಗೆ ನಾವು ನೀಡುವ ಅರ್ಜಿಯಲ್ಲಿಯೇ ಅವರ ಮಾಹಿತಿ ಭರ್ತಿ ಮಾಡಿ ಸಲ್ಲಿಸಬೇಕು ಎಂದರು. ತಹಸೀಲ್ದಾರ್ ಗಿರಿಜಾ ಮಾತನಾಡಿ, ಸೋಮವಾರ ಗಣತಿ ಆರಂಭವಾಗಲಿದೆ. ಇದಕ್ಕೂ ಮುನ್ನಾ ಈಗಾಗಲೇ ನೇಮಕವಾಗಿರುವ ಶಿಕ್ಷಕರು ಪೂರ್ಣ ಪ್ರಮಾಣದ ತರಬೇತಿಯನ್ನು ಪಡೆದುಕೊಂಡು ಗಣತಿ ಕಾರ್ಯಕ್ಕೆ ಮುಂದಾಗಬೇಕು. ಅನುಮಾನ ಹಾಗೂ ಸಂಶಯ ಇದ್ದರೆ ಕೇಳಿ ತಿಳಿದುಕೊಳ್ಳಿ. ರಾಜ್ಯ ಮಟ್ಟದಲ್ಲಿ ನಮಗೆ ಆಯಾ ದಿನದಂದು ನಡೆಯುವ ಸಮೀಕ್ಷೆಯ ನಿಖರವಾದ ಮಾಹಿತಿ ಕೇಳುತ್ತಾರೆ. ಹೀಗಾಗಿ ಆಯಾ ದಿನವೇ ಸಮೀಕ್ಷೆಯ ವರದಿಯನ್ನು ಮೊಬೈಲ್‌ ಆ್ಯಫ್‌ಗೆ ಅಪ್ಲೋಡ್ ಮಾಡುವಂತೆ ಹೇಳಿದರು.ಈಗಾಗಲೇ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರು, ಆನಾರೋಗ್ಯ ಇತರೆ ಕಾರಣಗಳಿಂದ ಗಣತಿ ಕಾರ್ಯದಲ್ಲಿ ಭಾಗವಹಿಸಲು ಸಾಧ್ಯವಾಗದವರು ತಕ್ಷಣ ಅರ್ಜಿಯನ್ನು ಸಲ್ಲಿಸಿ, ಬದಲಾವಣೆ ಮಾಡಿಸಿಕೊಳ್ಳಿ ಎಂದರು. ಕಾರ್ಯಾಗಾರದಲ್ಲಿ ನಗರಸಭೆ ಸಂಯೋಜನಾಧಿಕಾರಿ ವೆಂಕಟನಾಯಕ, ತಾಲೂಕು ಮಟ್ಟದ ಮಾಸ್ಟರ್ ತರಬೇತುದಾರರಾದ ಲೋಕೇಶ್, ರಂಗಸ್ವಾಮಿ, ಜೆಮ್ಸ್ ಸುನೀಲ್ ಹಾಗೂ ಶಿಕ್ಷಕರು ಇದ್ದರು.

Share this article