ಪಿಂಗಾಣಿ ಹಣತೆಗಳ ಅಬ್ಬರ: ಕುಂಬಾರರ ಬದುಕಿಗೆ ಕತ್ತಲು!

KannadaprabhaNewsNetwork |  
Published : Nov 09, 2026, 02:15 AM IST
ಕುಷ್ಟಗಿ ಪಟ್ಟಣದ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿರುವ ಪಿಂಗಾಣಿ ಹಣತೆಗಳನ್ನು ಖರೀದಿಸುತ್ತಿರುವ ಮಹಿಳೆಯರು. | Kannada Prabha

ಸಾರಾಂಶ

ಒಂದು ಕಾಲದಲ್ಲಿ ದೀಪಾವಳಿ ಬಂತೆಂದರೆ ಕುಂಬಾರರ ಮನೆಗಳಲ್ಲಿ ತಿಂಗಳುಗಳ ಮುಂಚೆಯೇ ಹಣತೆ ತಯಾರಿಸುವ ಕೆಲಸ ಆರಂಭವಾಗುತ್ತಿತ್ತು

ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ

ದೀಪಾವಳಿಯ ಬೆಳಕಿನ ಹಬ್ಬದಲ್ಲೂ ಮಣ್ಣಿನ ಹಣತೆ ತಯಾರಿಸುವ ಕುಂಬಾರರ ಬದುಕು ಕತ್ತಲಲ್ಲೇ ಉಳಿದಿದೆ!

ಆಧುನಿಕ ವಿನ್ಯಾಸದ ಬಣ್ಣಬಣ್ಣದ ಪಿಂಗಾಣಿ ಹಣತೆಗಳ ಆಕರ್ಷಣೆಗೆ ಗ್ರಾಹಕರು ಮಾರುಹೋಗುತ್ತಿದ್ದಂತೆ, ತಲೆಮಾರುಗಳಿಂದ ಕುಂಬಾರರ ಕೈಚಳಕದಲ್ಲಿ ಅರಳುತ್ತಿದ್ದ ಮಣ್ಣಿನ ಹಣತೆಗಳು ಮಾರುಕಟ್ಟೆಯಲ್ಲಿ ಬೇಡಿಕೆ ಕಳೆದುಕೊಳ್ಳುತ್ತಿವೆ. ಹೊರರಾಜ್ಯದ ಪಿಂಗಾಣಿ ಹಣತೆಗಳ ಅಬ್ಬರ ಸ್ಥಳೀಯ ಕುಂಬಾರರ ಕುಲಕಸುಬಿಗೆ ಕೊಡಲಿಪೆಟ್ಟು ನೀಡಿದೆ.

ದೀಪಾವಳಿ ಹಬ್ಬ ಆರಂಭವಾಗುತ್ತಿದ್ದಂತೆ ಕುಷ್ಟಗಿ ಪಟ್ಟಣದ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ. ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜನರು ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದಾರೆ. ವರ್ತಕರು ಅಂಗಡಿ-ಮುಂಗಟ್ಟುಗಳನ್ನು ಸ್ವಚ್ಛಗೊಳಿಸಿ, ಸುಣ್ಣಬಣ್ಣ ಬಳಿದು ಲಕ್ಷ್ಮಿಪೂಜೆಗೆ ಸಜ್ಜಾಗುತ್ತಿದ್ದರೆ, ಮನೆಗಳಲ್ಲಿಯೂ ಸ್ವಚ್ಛತೆ, ಅಲಂಕಾರ ಹಾಗೂ ಪೂಜಾ ಸಾಮಗ್ರಿಗಳ ಖರೀದಿ ಚಟುವಟಿಕೆ ಗರಿಗೆದರಿದೆ.

ಮಾರುಕಟ್ಟೆಯಲ್ಲಿ ವಿವಿಧ ಬಣ್ಣ, ಆಕಾರ ಹಾಗೂ ವಿನ್ಯಾಸದ ಹಣತೆಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ವಿಶೇಷವಾಗಿ ತಮಿಳುನಾಡು ಮೂಲದ ಪಿಂಗಾಣಿ ಹಣತೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬಂದಿದ್ದು, ಮಹಿಳೆಯರು ಅವುಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಆಕರ್ಷಕ ವಿನ್ಯಾಸ, ವೈವಿಧ್ಯಮಯ ಬಣ್ಣ ಹಾಗೂ ವಿವಿಧ ಗಾತ್ರಗಳಲ್ಲಿ ಲಭ್ಯವಿರುವ ಪಿಂಗಾಣಿ ಹಣತೆಗಳು ಗ್ರಾಹಕರ ಮೊದಲ ಆಯ್ಕೆಯಾಗುತ್ತಿವೆ.

ಮಣ್ಣಿನ ಹಣತೆಗಳಿಗೆ ಬೇಡಿಕೆ ಕುಸಿತ: ಒಂದು ಕಾಲದಲ್ಲಿ ದೀಪಾವಳಿ ಬಂತೆಂದರೆ ಕುಂಬಾರರ ಮನೆಗಳಲ್ಲಿ ತಿಂಗಳುಗಳ ಮುಂಚೆಯೇ ಹಣತೆ ತಯಾರಿಸುವ ಕೆಲಸ ಆರಂಭವಾಗುತ್ತಿತ್ತು. ಕುಟುಂಬದ ಸದಸ್ಯರೆಲ್ಲರೂ ಸೇರಿ ಮಣ್ಣು ಹದಗೊಳಿಸಿ, ಚಕ್ರದಲ್ಲಿ ಹಣತೆ ರೂಪಿಸಿ, ಒಣಗಿಸಿ, ಸುಟ್ಟು ಮಾರುಕಟ್ಟೆಗೆ ತರುತ್ತಿದ್ದರು. ಹಬ್ಬದ ದಿನಗಳಲ್ಲಿ ಹಣತೆಗಳ ಮಾರಾಟವೇ ಕುಂಬಾರ ಕುಟುಂಬಗಳಿಗೆ ಆದಾಯದ ಆಸರೆಯಾಗಿತ್ತು. ಆದರೆ, ಈಗ ಪಿಂಗಾಣಿ ಹಣತೆಗಳ ಆಕರ್ಷಣೆಗೆ ಮಾರುಹೋಗಿರುವ ಗ್ರಾಹಕರು ಮಣ್ಣಿನ ಹಣತೆಗಳನ್ನು ಕಡೆಗಣಿಸುತ್ತಿರುವುದರಿಂದ ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಕುಸಿದಿದೆ.

ದುಬಾರಿಯಾದ ಹಣತೆಗಳು: ಈ ಬಾರಿ ಗಾತ್ರ ಮತ್ತು ವಿನ್ಯಾಸಕ್ಕೆ ಅನುಗುಣವಾಗಿ ₹100ರಿಂದ ₹1000ರ ವರೆಗೆ ವಿವಿಧ ಬಗೆಯ ಹಣತೆಗಳು ಮಾರಾಟವಾಗುತ್ತಿವೆ. ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ತಳ್ಳುವ ಗಾಡಿಗಳ ಮೂಲಕ ವ್ಯಾಪಾರ ನಡೆಯುತ್ತಿದೆ. ಹಬ್ಬದ ಖರೀದಿಗೆ ಬರುವ ಮಹಿಳೆಯರು ಬಣ್ಣಬಣ್ಣದ ಪಿಂಗಾಣಿ ಹಣತೆಗಳನ್ನು ಪರಿಶೀಲಿಸಿ ಖರೀದಿಸುತ್ತಿದ್ದಾರೆ.

ಮಣ್ಣು ಸಿಗದೆ, ಮಾರುಕಟ್ಟೆಯೂ ಇಲ್ಲದೆ ಸಂಕಷ್ಟ: ಮಣ್ಣಿನ ಹಣತೆ ತಯಾರಿಸಲು ಅಗತ್ಯವಾದ ಮಣ್ಣು ಸುಲಭವಾಗಿ ದೊರೆಯುತ್ತಿಲ್ಲ. ನೀರು ಸೇರಿದಂತೆ ಮೂಲಸೌಲಭ್ಯಗಳ ಕೊರತೆಯೂ ಕುಂಬಾರರನ್ನು ಕಾಡುತ್ತಿದೆ. ಶ್ರಮ, ಸಮಯ ಹಾಗೂ ಬಂಡವಾಳ ಹೂಡಿದರೂ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ. ಹೀಗಾಗಿ ಅಲ್ಪ ಪ್ರಮಾಣದಲ್ಲಿ ಮಣ್ಣಿನ ಹಣತೆ ತಯಾರಿಸುವ ಜತೆಗೆ ಪಿಂಗಾಣಿ ಹಣತೆಗಳನ್ನು ಹೊರಗಿನಿಂದ ಖರೀದಿಸಿ ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿದೆ.

ದೀಪಾವಳಿಯಲ್ಲಿ ಮನೆಮನೆಗಳಲ್ಲಿ ಮಣ್ಣಿನ ಹಣತೆ ಬೆಳಗಿಸುವ ಸಂಪ್ರದಾಯ ಮುಂದುವರಿಯಬೇಕು. ಜನರು ಸ್ಥಳೀಯ ಕುಂಬಾರರು ತಯಾರಿಸಿದ ಹಣತೆಗಳನ್ನು ಖರೀದಿಸುವ ಮೂಲಕ ಅವರ ಬದುಕಿಗೆ ಆಸರೆಯಾಗಬೇಕು ಕುಷ್ಟಗಿ ಗೃಹಿಣಿ ಶಾರದಾ ಶೆಟ್ಟರ್‌ ತಿಳಿಸಿದ್ದಾರೆ.

ಮಣ್ಣಿನ ಹಣತೆ ತಯಾರಿಸಲು ಅಗತ್ಯ ಸೌಲಭ್ಯಗಳು ಸಿಗುತ್ತಿಲ್ಲ. ಬೇಡಿಕೆ ಕಡಿಮೆಯಾಗಿರುವುದರಿಂದ ಅಲ್ಪ ಪ್ರಮಾಣದಲ್ಲಿ ಮಣ್ಣಿನ ಹಣತೆ ತಯಾರಿಸಿ, ಪಿಂಗಾಣಿ ಹಣತೆಗಳನ್ನೂ ಖರೀದಿಸಿ ಮಾರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ದೋಟಿಹಾಳ ನಿವಾಸಿ ಸಗರಪ್ಪ ಕುಂಬಾರ ತಿಳಿಸಿದ್ದಾರೆ.

ಕಳೆದ ಏಳು ವರ್ಷಗಳಿಂದ ಪಿಂಗಾಣಿ ಹಣತೆ ವ್ಯಾಪಾರ ಮಾಡುತ್ತಿದ್ದೇನೆ. ಈ ಬಾರಿ ₹2 ಲಕ್ಷಕ್ಕೂ ಅಧಿಕ ಬಂಡವಾಳ ಹೂಡಿದ್ದು, ಪ್ರತಿ ವರ್ಷದಂತೆ ಉತ್ತಮ ವಹಿವಾಟಿನ ನಿರೀಕ್ಷೆಯಿದೆ ಎಂದು ಪಿಂಗಾಣಿ ಹಣತೆ ವ್ಯಾಪಾರಿ ನಜೀರಅಹ್ಮದ ಸಿಂಧನೂರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ