ಕೊಪ್ಪಳ: ಜಿಲ್ಲಾ ಕೇಂದ್ರ ಕೊಪ್ಪಳ, ಭಾಗ್ಯನಗರ ಹಾಗೂ ಇನ್ನಿತರ ಗ್ರಾಮಗಳ ಜನರ ಜೀವ, ಆರೋಗ್ಯದ ಕಾಳಜಿ ಇಲ್ಲದೇ ಸರ್ಕಾರ ₹54 ಸಾವಿರ ಕೋಟಿ ಹೂಡಿಕೆಯ ಬಲ್ಡೋಟಾ ಕಾರ್ಖಾನೆ ವಿಸ್ತರಣೆಗೆ ಅವಕಾಶ ಕೊಟ್ಟಿದ್ದು ಸರಿಯಲ್ಲ ಎಂದು ನಗರ ಎನ್.ಕೆ.ಪಿ.ಎಂ. ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆ ಸಂಸ್ಥಾಪಕ ಅಧ್ಯಕ್ಷ ಬಿ.ಕೆ.ಪಟ್ಟಣಶೆಟ್ಟಿ ಹೇಳಿದರು.
ಈಗಿರುವ ಪೆಲೆಟ್ ಒಂದು ಘಟಕದಿಂದ ಆಗುತ್ತಿರುವ ಅನಾಹುತವೇ ದೊಡ್ಡದು. ಮತ್ತೆ ಈಗ ಸ್ಟೀಲ್-ವಿದ್ಯುತ್ ಉತ್ಪಾದನೆಗಾಗಿ ವಿಸ್ತರಣೆ ಮಾಡಲು ಮುಂದಾಗಿದ್ದು ಸರಿಯಲ್ಲ. ಕೈಗಾರಿಕೆಗಳು ಜನವಸತಿ ಪ್ರದೇಶದ ಬಳಿ ಇರಕೂಡದು. ವಿಷಾನೀಲ ಉಗುಳಿ ಮಾಲಿನ್ಯ ಮಾಡುವ ಕಾರ್ಖಾನೆಗಳಂತೂ ಜನವಸತಿಯಿಂದ ದೂರವಿದ್ದು, ಬಫರ್ ವಲಯ ಇಟ್ಟುಕೊಂಡು 15-20 ಕಿ.ಮೀ. ದೂರವಿರಬೇಕು. ನಾವ್ಯಾರೂ ಕೈಗಾರಿಕಾ ವಿರೋಧಿಗಳಲ್ಲ. ಅಭಿವೃದ್ಧಿ ಕೃಷಿಯಿಂದಾದರಷ್ಟೇ ದೇಶದ ಜಿಡಿಪಿ ಸ್ಥಿರವಾಗಿರುತ್ತದೆ. ಕೈಗಾರಿಕೆಗಳಿಂದ ಆಗುವ ಅಭಿವೃದ್ಧಿ ಯಾವಾಗಲೂ ಬಿದ್ದು ಹೋಗಬಹುದು. ಕಾರ್ಖಾನೆ ಸ್ಥಾಪನೆಗಾಗಿ, ಜನವಸತಿಗಾಗಿ ಭೂಮಿ ಅನಗತ್ಯವಾಗಿ ಬಳಕೆಯಾಗುತ್ತಿದೆ. ಇದು ಭವಿಷ್ಯದ ಕೃಷಿಗೆ ಎದುರಾಗುವ ಅಪಾಯವಾಗಿದೆ. ಮಾಲಿನ್ಯದಿಂದ ಸಮಸ್ಯೆಯಾಗಿದೆ ಎಂದರೆ ಏನು ಪ್ರಯೋಜನ. ಪೂರ್ವಾಲೋಚನೆ, ಜನರು ಅಹವಾಲು ಆಲಿಸದ ಸರ್ಕಾರಗಳು ಇರುವಾಗ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಗಂಭೀರವಾಗಿ ಚಿಂತಿಸಿ ಈ ಹೋರಾಟದಲ್ಲಿ ಸೇರಿಕೊಳ್ಳಬೇಕು. ನಾವು ಸಂಸ್ಥೆಗಳನ್ನು ಸ್ಥಾಪಿಸಿ ಮಕ್ಕಳ ಭವಿಷ್ಯ ರೂಪಿಸಲು ಶಿಕ್ಷಣ ಕೊಡುತ್ತೇವೆ.ಆ ಮಕ್ಕಳಾದಿಯಾಗಿ ನಾವೂ ರೋಗಗ್ರಸ್ಥರಾದರೆ ಶಿಕ್ಷಣ ಮತ್ತು ಸಂಸ್ಥೆ ಯಾರ ಉದ್ಧಾರಕ್ಕೆ? ಎನ್ನುವ ಪ್ರಶ್ನೆ ನನ್ನೊಳಗೆ ಮೂಡಿತು. ಶಿಕ್ಷಣದಲ್ಲಿ ಆರೋಗ್ಯ, ಪೌಷ್ಟಿಕತೆ, ನಿಸರ್ಗ, ಪರಿಸರ ಕುರಿತಾದ ಮೌಲ್ಯಯುತ ಪಾಠ ಮಾಡುತ್ತೇವೆ. ಈಗ ನಮ್ಮ ಊರು ಮಾಲಿನ್ಯದಿಂದ ನಲುಗಿ ಹೋಗುತ್ತಿದೆ. ಇಲ್ಲಿನ ಮಕ್ಕಳ ಜೀವನದ ಭವಿಷ್ಯ ಅಪಾಯಕ್ಕೆ ಸಿಲುಕಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಎನ್.ಕೆ.ಪಿ.ಎಂ.ಹೈಸ್ಕೂಲ್ ವಿದ್ಯಾರ್ಥಿಗಳಾದ ದೀಪಕ್, ವೈಷ್ಣವಿ, ಆದಿಲ್, ಸುಮಯ್ಯ, ಇವರುಗಳು ಚಿಪ್ಕೋ,ಕೈಗಾ, ಅಪ್ಪಿಕೋ, ನರ್ಮದಾ, ಸೈಲೆಂಟ್ವ್ಯಾಲಿ ಚಳವಳಿ ಮತ್ತು ಸಾಲುಮರದ ತಿಮ್ಮಕ್ಕ ಅವರನ್ನು ಉದಾಹರಿಸಿ ಆಂಗ್ಲ ಭಾಷೆಯಲ್ಲಿ ಮತ್ತು ಕನ್ನಡದಲ್ಲಿ ಮನಕಲಕುವಂತೆ ಭಾಷಣ ಮಾಡಿದರು.ಶಿಕ್ಷಕರಾದ ಬಿ.ಎಂ. ನಿತಿನ್ ಶರ್ಮಾ, ರಂಗಮ್ಮ ಮಾತನಾಡಿ, ನಮ್ಮ ಅನಾರೋಗ್ಯಕ್ಕೆ ಕಾರಣವಾಗುವ ಈ ಕಾರ್ಖಾನೆಗಳು ಜೀವ ತೆಗೆಯುವಾಗಲೂ ಎಚ್ಚರಿಕೆ ವಹಿಸದಿದ್ದರೆ ಭವಿಷ್ಯ ಮುಂದಿಟ್ಟು ನೋಡಿದರೆ ಭಯಂಕರವಾಗಿದೆ. ನಾವಲ್ಲದೆ ಎಲ್ಲ ತಿಳಿದವರು, ಪ್ರಜ್ಞಾವಂತ ಜನರು ಮುಂದೆ ಬಂದು ಪ್ರತಿರೋಧ ತೋರಲಿ ಎಂದರು.
ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಶಿಕ್ಷಕರಾದ ಉದಯಕುಮಾರ್ ಎಂ.ಕೆ, ಮಲ್ಲಪ್ಪ ಕಿನ್ನಾಳ, ವಿಜೇತಾ ಎಂ, ಬಿಂದಿಯಾ ಬಿ., ವೆಂಕಟಲಕ್ಷ್ಮಿ, ಸವಿತಾ ಸಾಕ್ರೆ, ಲಕ್ಷ್ಮೀ ವಿಜಯಮುದ್ರಿ, ಜ್ಯೋತಿ, ಪುಷ್ಪಲತಾ ಏಳುಭಾವಿ, ಸಾಹಿತಿ ಎ.ಎಂ. ಮದರಿ, ಜಿ.ಬಿ. ಪಾಟೀಲ್, ರವಿ ಕಾಂತನವರ, ಮಹಾದೇವಪ್ಪ ಮಾವಿನಮಡು, ಮೂಕಪ್ಪ ಮೇಸ್ತ್ರಿ ಬಸಾಪುರ, ಮಂಜುನಾಥ ಕವಲೂರು, ಸುಂಕಮ್ಮ ಪಡಚಿಂತಿ ಹಾಗೂ ಎನ್.ಕೆ.ಪಿ.ಎಂ. ಹೈಸ್ಕೂಲ್ ವಿದ್ಯಾರ್ಥಿಗಳು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.ಹೋರಾಟಕ್ಕಾಗಿ ಬಿ.ಕೆ. ಪಟ್ಟಣಶೆಟ್ಟಿ ₹5000 ದೇಣಿಗೆ ಚೆಕ್ ನ್ನು ಇದೇ ಸಂದರ್ಭದಲ್ಲಿ ನೀಡಿದರು.