ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ 58 ಮಾದರಿಯ ಕರಡು ಲೋಗೋ ಸಿದ್ಧ!

KannadaprabhaNewsNetwork |  
Published : Dec 21, 2025, 03:00 AM IST
GBA 1 | Kannada Prabha

ಸಾರಾಂಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಹಾಗೂ ನೂತನವಾಗಿ ರಚನೆಯಾಗಿರುವ ಐದು ನಗರ ಪಾಲಿಕೆಗಳಿಗೆ ಹೊಸ ಲಾಂಚನ (ಲೋಗೋ) ಬರಲಿದ್ದು, ಅದಕ್ಕಾಗಿ ಬರೋಬ್ಬರಿ 58 ಮಾದರಿ ಲೋಗೋ ಸಿದ್ಧಪಡಿಸಿಕೊಳ್ಳಲಾಗಿದೆ.

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಬೆಂಗಳೂರು

ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಹಾಗೂ ನೂತನವಾಗಿ ರಚನೆಯಾಗಿರುವ ಐದು ನಗರ ಪಾಲಿಕೆಗಳಿಗೆ ಹೊಸ ಲಾಂಚನ (ಲೋಗೋ) ಬರಲಿದ್ದು, ಅದಕ್ಕಾಗಿ ಬರೋಬ್ಬರಿ 58 ಮಾದರಿ ಲೋಗೋ ಸಿದ್ಧಪಡಿಸಿಕೊಳ್ಳಲಾಗಿದೆ.ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹಾಗೂ ಐದು ನಗರ ಪಾಲಿಕೆ ರಚನೆಯಾಗಿ ಮೂರೂವರೆ ತಿಂಗಳು ಪೂರ್ಣಗೊಂಡಿದ್ದು, ಈಗಾಗಲೇ ನಗರ ಪಾಲಿಕೆ ಕಚೇರಿಗಳು, ಜಿಬಿಎ ಕೇಂದ್ರ ಕಚೇರಿ ಸೇರಿದಂತೆ ಮೊದಲಾದ ಕಡೆಯಲ್ಲಿ ಹೆಸರು ಬದಲಾವಣೆ ಮಾಡಿ ನಾಮಫಲಕ ಅಳವಡಿಕೆ ಮಾಡಲಾಗಿದೆ. ಆದರೆ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಮತ್ತು ನಗರ ಪಾಲಿಕೆಗಳಿಗೆ ಹೊಸ ಲೋಗೋ ಅಂತಿಮಗೊಂಡಿಲ್ಲ.

ಜಿಬಿಎ ಅಧಿಕಾರಿಗಳು ಇದೀಗ ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಮತ್ತು ಐದು ನಗರ ಪಾಲಿಕೆಗಳಿಗೆ ಒಟ್ಟು 58 ಬಗೆಯ ಕರಡು ಲೋಗೋ ಸಿದ್ಧಪಡಿಸಿಕೊಂಡಿದ್ದಾರೆ. ಈ ಲೋಗೋಗಳನ್ನು ಬೆಂಗಳೂರು ಅಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಅವಗಾಹನೆಗೆ ತಂದು, ಅವರು ಅಂತಿಮಗೊಳಿಸುವ ಲೋಗೋಗಳನ್ನು ಅಧಿಕೃತಗೊಳಿಸುವುದಕ್ಕೆ ತೀರ್ಮಾನಿಸಲಾಗಿದೆ.

ಇತಿಹಾಸ, ಪರಂಪರೆ ಸಾರೋ ಲೋಗೋ: ಬಿಬಿಎಂಪಿಯ ಲೋಗೋದಲ್ಲಿ ನಾಡಪ್ರಭು ಕೆಂಪೇಗೌಡರು ನಿರ್ಮಾಣ ಮಾಡಿ ಗಡಿ ಗೋಪುರದ ಚಿತ್ರ ಬಳಕೆ ಮಾಡಲಾಗಿತ್ತು. ಇದೀಗ ಜಿಬಿಎ ಮತ್ತು ಐದು ನಗರ ಪಾಲಿಕೆಯ ಲೋಗೋದಲ್ಲಿಯೂ ಗಡಿ ಗೋಪುರ ಮುಂದುವರಿಸುವುದಕ್ಕೆ ತೀರ್ಮಾನಿಸಲಾಗಿದೆ. ಆದರೆ, ಐದು ನಗರ ಪಾಲಿಕೆಯ ನಕ್ಷೆ ಗಡಿ ಗೋಪುರದ ಹಿಂಭಾಗದಲ್ಲಿ ಕಾಣುವಂತೆ ಆಯಾ ನಗರ ಪಾಲಿಕೆಗೆ ಒಂದೊಂದು ಲೋಗೋ ರೂಪಿಸಲಾಗಿದೆ. ಅದರೊಂದಿಗೆ ಕೆಲವು ವೈಶಿಷ್ಟ್ಯಗಳನ್ನು ಒಳಗೊಂಡ ಲೋಗೋಗಳು ಸಹ ಇವೆ.

ಸ್ಟೈಲಿಶ್‌ ಹಾಗೂ ಟ್ರೆಂಡಿ ಲೋಗೋ: ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಅಧ್ಯಕ್ಷರು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಿರುವುದರಿಂದ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಜಿಬಿಎ ಲೋಗೋದಲ್ಲಿ ಗಂಡಬೇರುಂಡ, ಆನೆ, ನಾಡಪ್ರಭು ಕೆಂಪೇಗೌಡರ ಭಾವಚಿತ್ರ, ಗಡಿ ಗೋಪುರ ಒಳಗೊಂಡಂತೆ ವಿವಿಧ ಮಾದರಿಯ ಲೋಗೋ ರಚನೆ ಮಾಡಲಾಗಿದೆ.

ಬೆಂಗಳೂರು ನಗರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವುದರಿಂದ ಇತಿಹಾಸ, ಪರಂಪರೆಯನ್ನು ಒಳಗೊಂಡಂತೆ ಸ್ಟೈಲಿಶ್‌ ಹಾಗೂ ಟ್ರೆಂಡಿ ಮಾದರಿಯ ಕೆಲವು ಲೋಗೋಗಳನ್ನು ಸಿದ್ಧಪಡಿಸಲಾಗಿದೆ.

ವಿವಿಧ ಬಣ್ಣಗಳ ಬಳಕೆ

ಲೋಗೋಗಳ ವಿಭಿನ್ನ ವಿನ್ಯಾಸಗಳೊಂದಿಗೆ ಆಕರ್ಷಕ ಮತ್ತು ನೋಡುಗರಿಗೆ ಮುದ ನೀಡುವ ಬಣ್ಣಗಳನ್ನು ಬಳಕೆ ಮಾಡಲಾಗಿದೆ. ಪ್ರಮುಖವಾಗಿ ಬಂಗಾರದ ಬಣ್ಣ, ಹಸಿರು, ಹಳದಿ, ಕೇಸರಿ, ಬಿಳಿ ಹಾಗೂ ನೀಲಿ ಸೇರಿದಂತೆ ಮೊದಲಾದ ಬಣ್ಣಗಳನ್ನು ಬಳಕೆ ಮಾಡಲಾಗಿದೆ.

ಚಿತ್ರಕಲಾ ಪರಿಷತ್‌ ವಿದ್ಯಾರ್ಥಿಗಳಿಂದ ಲೋಗೋ

ಲೋಕೋಪಯೋಗಿ ಇಲಾಖೆಯ ಮುಖ್ಯ ವಾಸ್ತುಶಿಲ್ಪಿ ಅವರ ಮಾರ್ಗದರ್ಶನದಲ್ಲಿ ಚಿತ್ರಕಲಾ ಪರಿಷತ್‌ನ ವಿದ್ಯಾರ್ಥಿಗಳು ಪ್ರಾಜೆಕ್ಟ್‌ ರೂಪದಲ್ಲಿ 58 ಲೋಗೋಗಳನ್ನು ಸಿದ್ಧಪಡಿಸಿದ್ದಾರೆ ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಜಿಬಿಎ ಹಾಗೂ ನಗರಪಾಲಿಕೆಗಳಿಗೆ ಪ್ರತ್ಯೇಕ ಲೋಗೋಗಳನ್ನು ಸಿದ್ಧಪಡಿಸಿಕೊಂಡಿದ್ದೇವೆ. ಹಲವು ವಿನ್ಯಾಸದಲ್ಲಿ ರಚನೆ ಮಾಡಲಾಗಿದೆ. ಉಪ ಮುಖ್ಯಮಂತ್ರಿ ಅವರು ಅನುಮೋದನೆ ನೀಡುವ ಲೋಗೋವನ್ನು ಅಧಿಕೃತಗೊಳಿಸಲಾಗುವುದು.- ಮಹೇಶ್ವರ್‌ ರಾವ್‌, ಮುಖ್ಯ ಆಯುಕ್ತರು, ಜಿಬಿಎ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ