ಕನ್ನಡಪ್ರಭ ವಾರ್ತೆ ಮಂಡ್ಯ
ಕಳೆದ ಏ.೨೨ರಂದು ನಾಗಮಂಗಲ ತಾಲೂಕಿನ ದೊಡ್ಡಬಾಲ ಗ್ರಾಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದ ವೇಳೆ ಜಿಲ್ಲೆಯ ಹಿರಿಯ ಸಾಹಿತಿಗಳು, ವಿವಿಧ ಸಂಘಟನೆಯವರು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಡಾ.ಮಹೇಶ್ ಜೋಶಿ ಅವರಿಗೆ ರಾಜ್ಯ ಸಚಿವ ದರ್ಜೆ ಸ್ಥಾನಮಾನ, ಸೌಲಭ್ಯ ಹಿಂಪಡೆಯುವಂತೆ ಮನವಿ ಸಲ್ಲಿಸಿದ್ದರು. ಅದಕ್ಕೆ ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದರು.
ಅದರಂತೆ ಡಾ.ಮಹೇಶ್ ಜೋಶಿ ಅವರಿಗೆ ೫ ಜನವರಿ ೨೦೨೩ರಂದು ನೀಡಿದ್ದ ರಾಜ್ಯ ಸಚಿವ ಸ್ಥಾನಮಾನ ಹಾಗೂ ರಾಜ್ಯ ಸಚಿವರ ದರ್ಜೆಗೆ ಅನ್ವಯಿಸುವ ಸೌಲಭ್ಯಗಳನ್ನು ಹಿಂಪಡೆದಿರುವುದಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ರಾಜ್ಯ ಶಿಷ್ಠಾಚಾರ) ಸರ್ಕಾರದ ಅಧೀನ ಕಾರ್ಯದರ್ಶಿ ಎನ್.ಆರ್.ಬಾಣದರಂಗಯ್ಯ ಮೇ ೩೧ರಂದು ಅಧಿಸೂಚನೆ ಹೊರಡಿಸಿದ್ದಾರೆ.ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಆರಂಭವಾದ ಡಾ.ಮಹೇಶ್ ಜೋಶಿ ಹಾಗೂ ಮಂಡ್ಯ ಜಿಲ್ಲಾ ಸಾಹಿತಿಗಳೊಂದಿಗಿನ ಸಮರ ಸಮ್ಮೇಳನ ಮುಗಿದ ನಂತರದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿತು. ರಾಜ್ಯಾಧ್ಯಕ್ಷರಾಗಿ ಜೋಶಿ ಅವರು ಕೈಗೊಂಡು ಕೆಲವು ಆತುರದ ನಿರ್ಧಾರಗಳು, ಸೇಡಿನ ಮನೋಭಾವದಿಂದ ಅನುಸರಿಸಿದ ನಡೆಯಿಂದ ಕೆಲವು ಸಂಘಟನೆಗಳೂ ಅವರ ವಿರುದ್ಧ ತಿರುಗಿಬೀಳುವಂತಾಯಿತು.
ರಾಜ್ಯ ಸಚಿವ ಸ್ಥಾನಮಾನ ಕಸಿದುಕೊಂಡಿರುವ ರಾಜ್ಯ ಸರ್ಕಾರದ ನಿರ್ಧಾರ ಜಿಲ್ಲೆಯ ಹಿರಿಯ ಸಾಹಿತಿಗಳು, ಸಂಘಟನೆಗಳ ಮುಖಂಡರಿಗೆ ಖುಷಿಯನ್ನು ತಂದುಕೊಟ್ಟಿದೆ. ಜೋಶಿಗೆ ಇದರಿಂದ ಹಿನ್ನಡೆಯಾಗಿದೆ. ಮಂಡ್ಯ ಜಿಲ್ಲೆಯವರ ವಿಷಯದಲ್ಲಿ ಸ್ವಲ್ಪ ಸಮಾಧಾನದಿಂದ ವರ್ತಿಸಿದ್ದರೆ ಇಂತಹ ಪರಿಸ್ಥಿತಿಯನ್ನು ಎದುರಾಗುತ್ತಿರಲಿಲ್ಲ. ಅನವಶ್ಯಕ ದ್ವೇಷ, ಕಸಾಪ ಪದಾಧಿಕಾರಿಗಳ ಆತುರದ ಅಮಾನತು, ಸಲ್ಲದ ಮಾತುಗಳು, ಬೈಲಾ ತಿದ್ದುಪಡಿಯಲ್ಲಿ ಸರ್ವಾಧಿಕಾರಿತನ, ಸಮ್ಮೇಳನ ಯಶಸ್ವಿಯಾದರೂ ಜಿಲ್ಲೆಯ ಜನರಿಗೆ ಕೃತಜ್ಞತೆ ಸಲ್ಲಿಸಲಾಗದಷ್ಟು ಉಡಾಫೆತನ ಇವೆಲ್ಲವೂ ಜೋಶಿ ಅವರಿಗೆ ಮುಳುವಾಗಿ ಪರಿಣಮಿಸಿವೆ.
ಮಂಡ್ಯ:
ನಗರದ ವಿವಿ ರಸ್ತೆಯಲ್ಲಿ ಸೇರಿದ ಬಳಗದ ಸದಸ್ಯರು, ಸಾರ್ವಜನಿಕರಿಗೆ ಕಬಾಬ್ ಹಂಚಿ ಇನ್ನಾದರೂ ಜೋಶಿಯವರು ಕನ್ನಡಪರ ಕೆಲಸಗಳಲ್ಲಿ ತೊಡಗಿಕೊಳ್ಳುವಂತೆ ಆಗ್ರಹಿಸಿದರು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ. ತಿಮ್ಮೇಗೌಡ, ಶ್ರೀಕಾಂತ್, ಎಂ.ವಿ.ಕೃಷ್ಣ, ಟಿ.ಡಿ.ನಾಗರಾಜು ಸೇರಿದಂತೆ ಹಲವರು ಇದ್ದರು.