- ಶಾಸಕ ಬಸವರಾಜು ಬಾಲಿಶ ಹೇಳಿಕೆ ಜವಾಬ್ದಾರಿಯುತ ಜನಪ್ರತಿನಿಧಿ ಲಕ್ಷಣವಲ್ಲ: ಟೀಕೆ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಾದಯಾತ್ರೆ ಮಾಡುವ ಮೂಲಕ ಅಡಕೆ ಬೆಳೆಗಾರರಿಗೆ ನೈತಿಕ ಬೆಂಬಲ ನೀಡುವ ಜೊತೆಗೆ ಜನಜಾಗೃತಿ ಮೂಡಿಸುವ ಮತ್ತು ಜಡ್ಡುಗಟ್ಟಿದ ಸರ್ಕಾರಕ್ಕೆ ಎಚ್ಚರಿಕೆ ಕೊಡಲಾಗಿದೆ. ಇಂತಹ ಪಾದಯಾತ್ರೆ ಮಹತ್ವವನ್ನು ತಿಳಿಯದ ಕ್ಷೇತ್ರದ ಶಾಸಕ ಬಸವರಾಜು ವಿ. ಶಿವಗಂಗಾ ಬಾಲಿಶವಾಗಿ ಮಾತನಾಡುವುದು ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯ ಲಕ್ಷಣವಲ್ಲ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಪಾನ್ ಮಸಾಲ, ಗುಟ್ಕಾ ನಿಷೇಧ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ದಾವಣಗೆರೆ ವರೆಗೆ ಪಾದಯಾತ್ರೆ, ಬಿಜೆಪಿ ವತಿಯಿಂದ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ನೇತೃತ್ವದ ಪಾದಯಾತ್ರೆ ಕುರಿತಂತೆ ಮಕ್ಕಳಂತೆ ಮಾತನಾಡುವ ಕ್ಷೇತ್ರದ ಶಾಸಕರು ಪಾದಯಾತ್ರೆಯ ಮಹತ್ವವನ್ನು ತಿಳಿಯಬೇಕಾಗಿದೆ ಎಂದರು.
ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಆಧುನೀಕರಣದ ಕಾಮಗಾರಿ ಕೆಲಸಕ್ಕೆ ನಾನು ಶಾಸಕನಾಗಿದ್ದ 2022ರಲ್ಲಿ ಎಸ್.ಎಫ್.ಸಿ ಯೋಜನೆಯಲ್ಲಿ ನಿಲ್ದಾಣದ ಅಭಿವೃದ್ಧಿಗೆ ₹90 ಲಕ್ಷ ಸರ್ಕಾರದಿಂದ ಮಂಜೂರಾತಿ ಮಾಡಿಸಿ ಮತ್ತು ಪಟ್ಟಣದ ಇತರೆ ಕಾಮಗಾರಿಗಳಿಗೆ ಹಣ ಮಂಜೂರು ಮಾಡಿದ್ದನ್ನು ಸೇರಿಸಿಕೊಂಡು ₹1.34 ಕೋಟಿಯಲ್ಲಿ ಆಧುನೀಕರಣ ಆಮೆಗತಿಯಲ್ಲಿ ಸಾಗುತ್ತಿದೆ. ಈ ಹಣವು ಸಾಕಾಗದೇ ನಿಲ್ದಾಣದ ನೆಲಹಾಸು ಹಾಕಲು ಹಣ ಬೇಕಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಹೇಳುತ್ತಾರೆ ಈ ಬಗ್ಗೆ ಪುರಸಭೆ ಸರಿಯಾದ ಲೆಕ್ಕವನ್ನು ಒದಗಿಸಬೇಕು ಎಂದು ಅಧಿಕಾರಿಗೆ ತಾಕೀತು ಮಾಡಿದರು. ನಿಲ್ದಾಣದ ಆಧುನೀಕರಣದ ಕೆಲಸ ಆರಂಭಗೊಂಡು 7 ತಿಂಗಳು ಕಳೆದಿದ್ದು, ಬೇಗನೆ ಕಾಮಗಾರಿ ಕೆಲಸವನ್ನು ಮುಗಿಸಿ ಪ್ರಯಾಣಿಕರ ಬಳಕೆಗೆ ಸಿಗುವಂತೆ ಮಾಡಲಿ ಎಂದರು.
ನನ್ನ ಅಧಿಕಾರದಲ್ಲಿ ಆಯುಷ್ ಆಯುರ್ವೇದ ಆಸ್ಪತ್ರೆ ಕಟ್ಟಡವನ್ನು ಕಟ್ಟಿಸಿ ಉದ್ಘಾಟನೆ ಮಾಡಿದ್ದರೂ ಆಸ್ಫತ್ರೆಯನ್ನು ಇದುವರೆಗೂ ಆರಂಭಿಸಿಲ್ಲ. ₹3 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಿದ್ದರೂ ಇನ್ನು ಆರಂಭಿಸಿಲ್ಲ ಎಂದು ಅಸಮಾಧಾನವನ್ನು ವ್ಯಕ್ತ ಪಡಿಸಿದರು.
- - -
- ಮಾಡಾಳು ವಿರೂಪಾಕ್ಷಪ್ಪ, ಮಾಜಿ ಶಾಸಕ.
-3ಕೆಸಿಎನ್ಜಿ1: ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿದರು.