ಕನ್ನಡಪ್ರಭ ವಾರ್ತೆ ಬೀದರ್
ಇತ್ತೀಚೆಗೆ ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ಆಸಿಡ್ ದಾಳಿಯ ಸಂದರ್ಭಗಳನ್ನು ಎದುರಿಸಲು, ತಡೆಯಲು, ಸಂತ್ರಸ್ತರಿಗೆ ಸಹಾಯ ಹಾಗೂ ಕಾಯ್ದೆಗಳ ಕುರಿತು ಅಂಗನವಾಡಿ ಕಾರ್ಯಕರ್ತೆಯರಿಗೆ, ಆಶಾ ಕಾರ್ಯಕರ್ತೆಯರಿಗೆ ಹಾಗೂ ಪೊಲೀಸ್ ಸಿಬ್ಬಂದಿಗೆ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೊದಲು ಅಪರಾಧಗಳಿಗೆ ಶಿಕ್ಷೆ ನೀಡಲು ಭಾರತೀಯ ದಂಡ ಸಂಹಿತೆ (ಐಪಿಸಿ) ಇತ್ತು, ಈಗ ಅದು ಬದಲಾಗಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಬಂದಿದೆ. ಇಂತಹ ಕೃತ್ಯಗಳನ್ನು ಎಸಗುವವರನ್ನು ಸಮರ್ಥವಾಗಿ ದಂಡಿಸುವ ಉದ್ದೇಶದಿಂದ 326(ಎ) ಕಾಯ್ದೆ ಜಾರಿಗೆ ತರಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ, ಆಸಿಡ್ ದಾಳಿ ಮಾಡಲು ಪ್ರಯತ್ನಿಸಿ ವ್ಯಕ್ತಿ ವಿಫಲರಾಗಿದ್ದರೂ ಸಹ ಕಲಂ 124ರ ಅಡಿಯಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ತಿಳಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಘವೇಂದ್ರ ಉಪಾಧ್ಯ ಮಾತನಾಡಿ, ಮಹಿಳೆಯರಿಗೆ ಇರುವ ಸವಲತ್ತುಗಳ ಬಗ್ಗೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸುರೇಖಾ ವಿ.ಕೆ ಮಾತನಾಡಿ, ಆಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಸ್ವಯಂ ಉದ್ಯೋಗ ಕೈಗೊಳ್ಳಲು 2.50 ಲಕ್ಷ ಬಡ್ಡಿರಹಿತ ಸಾಲ ಮತ್ತು 2.50 ಲಕ್ಷ ಸಹಾಯಧನ ನೀಡಲಾಗುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಹಾಗೂ ಜಿಲ್ಲಾ ನಿರೂಪಣಾಧಿಕಾರಿ ಶ್ರೀಕಾಂತ ಮೆಂಗಜಿ ಮಾತನಾಡಿ, ಈಗಾಗಲೇ ಸಖಿ ಒನ್ ಸ್ಟಾಪ್ ಸೆಂಟರ್ ಮತ್ತು ಮಹಿಳಾ ಸಹಾಯವಾಣಿ ಮಹಿಳೆಯರ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿವೆ. ಮಹಿಳೆಯರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದರು.