ನಾಯಕರ ಅಗಲಿಕೆಯ ನೋವು ಸಹಿಸಿಕೊಳ್ಳಲಾಗದು: ಸಿದ್ದಣ್ಣ ಮಲಗಲದಿನ್ನಿ

KannadaprabhaNewsNetwork | Published : Feb 27, 2024 1:35 AM

ಸಾರಾಂಶ

ಶಾಸಕ ರಾಜಾ ವೆಂಕಟಪ್ಪ ನಾಯಕರ ಅಂತಿಮ ದರ್ಶನದಲ್ಲಿ ಪಕ್ಷಬೇಧ ಮರೆತು ಕಂಬನಿ ಮಿಡಿದ ಹುಣಸಗಿ ತಾಲೂಕಿನ ಜನತೆ. ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಸಂಘ- ಸಂಸ್ಥೆಗಳು, ಶಾಲಾ-ಕಾಲೇಜುಗಳು, ನೌಕರರು, ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದ ಜನರು ಸಂತಾಪ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುಣಸಗಿ

ಸುರಪುರ ಮತಕ್ಷೇತ್ರದ ಶಾಸಕ ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಾಜಾ ವೆಂಕಟಪ್ಪ ನಾಯಕರ ನಿಧನ ಸುದ್ದಿ ಕ್ಷೇತ್ರದಾದ್ಯಂತ ಹಬ್ಬುತ್ತಿದ್ದಂತೆಯೇ ಕ್ಷೇತ್ರದ ಜನರಿಗೆ ಬರಸಿಡಿಲು ಬಡಿದಂತಾಗಿ ಕ್ಷೇತ್ರದ ಅಭಿವೃದ್ಧಿ ಕನಸು ಕಂಡಿದ್ದ ಶಾಸಕರ ಅಗಲಿಕೆಯ ನೋವು ಸಹಿಸಿಕೊಳ್ಳಲಾಗದಷ್ಟು ಹುಣಸಗಿ ತಾಲೂಕಿನ ಜನತೆಗೆ ಕಾಡುತ್ತಿದೆ ಎಂದು ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ ತಿಳಿಸಿದ್ದಾರೆ.

ಹುಣಸಗಿ ತಾಲೂಕಿನಾದ್ಯಂತ ಮಡುಗಟ್ಟಿದ ವೌನ, ಪಟ್ಟಣದೆಲ್ಲೆಡೆ ಸೂತಕದ ಛಾಯೆ ಅಭಿಮಾನಿಗಳ ಮುಗಿಲುಮುಟ್ಟಿದ ರೋಧನ. ಹುಣಸಗಿ ತಾಲೂಕಿನಿಂದ ಶಾಸಕ ರಾಜಾ ವೆಂಕಟಪ್ಪ ನಾಯಕರ ಪಾರ್ಥಿವ ಶರೀರದ ಅಂತಿಮ ದರ್ಶನದಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದರು. ರಾಜಕೀಯದಲ್ಲಿ ವಿಭಿನ್ನ ವ್ಯಕ್ತಿತ್ವದ ದ್ವೇಷ ರಹಿತ ರಾಜಕಾರಣ ಮಾಡಿಕೊಂಡು ಬಂದ ಮಹಾನ್‌ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಶರಣು ದಂಡಿನ್ ಎಂದರು.

ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಬೇಕೆಂಬ ಹಂಬಲ ಹೊಂದಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ನಿಧನಕ್ಕೆ ಇಡೀ ಸುರಪುರ ಮತಕ್ಷೇತ್ರ ಕಂಬನಿ ಮಿಡಿದಿದೆ. ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಸಂಘ- ಸಂಸ್ಥೆಗಳು, ಶಾಲಾ-ಕಾಲೇಜುಗಳು, ನೌಕರರು, ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದ ಜನರು ಸಂತಾಪ ಸೂಚಿಸಿದ್ದಾರೆ.

ವಿಧಾನಸಭೆ ಚುನಾವಣೆಗೂ ಮುನ್ನಾ ಪಟ್ಟಣದ ಬಿಜೆಪಿ ಮುಖಂಡ ವಿರೇಶ ಸಾಹು ಚಿಂಚೋಳಿ(ಕಿಟ್ಟಪ್ಪ ಸಾಹುಕಾರ) ಅವರು ಅನಾರೋಗ್ಯದ ಹಿನ್ನೆಲೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಸ್ವಗ್ರಾಮಕ್ಕೆ ಆಗಮಿಸಿದ ಸುದ್ದಿ ತಿಳಿದು, ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಪಕ್ಷಬೇಧ ಮರೆತು ಅವರ ಮನೆಗೆ ಭೇಟಿ ಕೊಟ್ಟು ಆರೋಗ್ಯ ವಿಚಾರಿಸಿ ಮಾನವೀಯತೆ ಮೆರೆದಿದ್ದರು.ರಾಜಾ ವೆಂಕಟಪ್ಪ ನಾಯಕ ಅವರು ಅನಾರೋಗ್ಯದ ಹಿನ್ನೆಲೆ ಸಾವನ್ನಪ್ಪಿರುವ ಸುದ್ದಿ ಕೇಳಿ ಆಘಾತವಾಗಿದೆ. ಅವರ ಅಗಲಿಕೆಯಿಂದ ಸುರಪುರ ಮತಕ್ಷೇತ್ರದ ಜನರು ದುಃಖದಲ್ಲಿ ಮುಳುಗಿದ್ದಾರೆ. ಶಾಸಕರ ಅಗಲಿಕೆಗೆ ಪಕ್ಷಬೇಧ ಮರೆತು ಕಂಬನಿ ಮಿಡಿಯುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೇವರು ಕರುಣಿಸಲಿ

ವೀರೇಶ ಚಿಂಚೋಳಿ (ಕಿಟ್ಟಪ್ಪ ಸಾಹುಕಾರ), ಬಿಜೆಪಿ ಮುಖಂಡ, ಹುಣಸಗಿ.

Share this article