ಗೆರಟೆಯಲ್ಲಿ ಮೂಡಿದ ಪಂಜುರ್ಲಿ ದೈವದ ಮೊಗ!

KannadaprabhaNewsNetwork |  
Published : Oct 14, 2025, 01:02 AM IST
ಫೋಟೋ: ೧೩ಪಿಟಿಆರ್-ಗೆರಟೆ ೧, ಗೆರಟೆ-೨ ಮತ್ತು ಗೆರಟೆ ೩, ಸಚ್ಚಿದಾನಂದ ಪ್ರಭು ಗೆರಟೆಯಲ್ಲಿ ತಯಾರಿಸಿದ ಕಲಾಕೃತಿಫೋಟೋ: ೧೩ಪಿಟಿಆರ್-ಸಚ್ಚೀದಾನಂದ ಪ್ರಭು | Kannada Prabha

ಸಾರಾಂಶ

ದಕ್ಷಿಣಕನ್ನಡ ಜಿಲ್ಲೆಯ ಪುಣಚದ ಯಕ್ಷಗಾನ ಕಲಾವಿದರೊಬ್ಬರು ಗೆರಟೆಯಲ್ಲಿ ಪಂಜುರ್ಲಿ ಮುಖವಾಡ ತಯಾರಿಸುವ ಮೂಲಕ ತಮ್ಮ ಕಲಾಪ್ರೌಢಿಮೆ ಮೆರೆದಿದ್ದಾರೆ.

ಸಂಶುದ್ದೀನ್‌ ಸಂಪ್ಯ

ಪುತ್ತೂರು: ವಿಶ್ವದಾದ್ಯಂತ ಸದ್ದು ಮಾಡುತ್ತಿರುವ, ತುಳುನಾಡಿನ ಪ್ರಮುಖ ದೈವಗಳಲ್ಲಿ ಒಂದಾದ ಪಂಜುರ್ಲಿಯ ಕಥೆಯನ್ನೇ ಮುಖ್ಯವಾಗಿರಿಸಿ ಹೆಣೆಯಲಾದ ಕತೆ ಕಾಂತಾರ ಸಿನಿಮಾದಲ್ಲಿದೆ. ಈ ಸಿನಿಮಾದಲ್ಲಿ ಪಂಜುರ್ಲಿ ದೈವದ ಪ್ರಮುಖ ಆಕರ್ಷಣೆ ಅದರ ಮುಖವಾಡವಾಗಿದ್ದು, ಇದೀಗ, ದಕ್ಷಿಣಕನ್ನಡ ಜಿಲ್ಲೆಯ ಪುಣಚದ ಯಕ್ಷಗಾನ ಕಲಾವಿದರೊಬ್ಬರು ಗೆರಟೆಯಲ್ಲಿ ಪಂಜುರ್ಲಿ ಮುಖವಾಡ ತಯಾರಿಸುವ ಮೂಲಕ ತಮ್ಮ ಕಲಾಪ್ರೌಢಿಮೆ ಮೆರೆದಿದ್ದಾರೆ.

ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಅಜೇರು ನಿವಾಸಿ ಸಚ್ಚಿದಾನಂದ ಪ್ರಭು ಗೆರಟೆಯಲ್ಲಿ ಪಂಜುರ್ಲಿ ಮುಖವಾಡ ತಯಾರಿಸಿದ ಸೃಜನಶೀಲ ಕಲಾವಿದ. ಯಕ್ಷಗಾನದಲ್ಲಿ ವಿದೂಷಕನ ಪಾತ್ರ ನಿರ್ವಹಿಸುತ್ತಿರುವ ಸಚ್ಷಿದಾನಂದ ಪ್ರಭು ತಮ್ಮ ಬಿಡುವಿನ ಸಮಯದಲ್ಲಿ ಗೆರಟೆಯಲ್ಲಿ ಕಲಾಕೃತಿಗಳನ್ನು ಮಾಡಿ ಮಾರಾಟ ಮಾಡುವ ವೃತ್ತಿಯಲ್ಲೂ ತೊಡಗಿಕೊಂಡಿದ್ದಾರೆ.ಗೆರಟೆಯನ್ನು ಬಳಸಿಕೊಂಡು ಇಂದು ಹಲವರು ವಿವಿಧ ರೀತಿಯ ಕಲಾಕೃತಿ ಮತ್ತು ಗೃಹೋಪಯೋಗಿ ವಸ್ತುಗಳನ್ನು ತಯಾರಿಸುತ್ತಿದ್ದಾರೆ ಇದರಿಂದ ಕೊಂಚ ಭಿನ್ನವಾಗಿರಬೇಕೆಂದು ಸಚ್ಚಿದಾನಂದ ಪ್ರಭು ಗೆರಟೆ ಬಳಸಿಕೊಂಡು ಶಂಖ, ದೀಪ, ದೊಡ್ಡ ದೀಪ ಮೊದಲಾದ ವಸ್ತುಗಳನ್ನು ತಯಾರಿಸಿ ಗಮನ ಸೆಳೆದಿದ್ದಾರೆ.ಆದರೆ ಈ ಎಲ್ಲಾ ಕಲಾಕೃತಿಗಳಲ್ಲಿ ಅವರು ಇತ್ತೀಚೆಗೆ ತಯಾರಿಸಿದ ಪಂಜುರ್ಲಿ ದೈವದ ಮುಖವಾಡ ಎಲ್ಲರ ಗಮನಸೆಳೆದಿದೆ. ಹಂದಿಯ ತಲೆಯ ಮಾದರಿಯಲ್ಲಿರುವ ಪಂಜುರ್ಲಿ ದೈವದ ಮುಖವಾಡ ಕಲಾವಿದನಿಗೆ ಆಕರ್ಷಣೆಯಾಗಿ ಕಂಡುಬಂದ ಹಿನ್ನಲೆಯಲ್ಲಿ ಗೆರಟೆಯನ್ನು ಉಪಯೋಗಿಸಿ ಯಾಕೆ ಈ ಮುಖವಾಡವನ್ನು ಮಾಡಬಾರದು ಎನ್ನುವ ಯೋಚನೆ ಮೂಡಿತ್ತು. ಅದರಂತೆ ಕಾರ್ಯಪ್ರವೃತ್ತರಾಗಿದ್ದ ಸಚ್ಚಿದಾನಂದ ಪ್ರಭು ನಿರಂತರ ಎರಡು ತಿಂಗಳ ಕಾಲ ಶ್ರಮವಹಿಸಿ ಅದ್ಭುತವಾಗಿ ಪಂಜುರ್ಲಿ ದೈವದ ಮುಖವಾಡ ತಯಾರಿಸಿದ್ದಾರೆ.

ಈ ಪಂಜುರ್ಲಿಯ ಮುಖವಾಡವನ್ನು ಪ್ರದರ್ಶನಕ್ಕಾಗಿಯೂ ಕೊಂಡೊಯ್ಯುತ್ತಾರೆ. ಆ ಸಂದರ್ಭ ಇದನ್ನು ವೀಕ್ಷಣೆ ಮಾಡಲು ಬಂದ ಜನ ಕಾಲಲ್ಲಿದ್ದ ಚಪ್ಪಲಿ ತೆಗೆದು ನಮಸ್ಕರಿಸಿದ ಹಲವು ಘಟನೆಗಳು ಇದೆ ಎನ್ನುತ್ತಾರೆ ಅವರು.

PREV

Recommended Stories

ದೀಪಾವಳಿ ಹಬ್ಬ : ಕೆಎಸ್ಸಾರ್ಟಿಸಿಯಿಂದ 2500 ಹೆಚ್ಚುವರಿ ಬಸ್‌
ಆರೆಸ್ಸೆಸ್‌ ಚಟುವಟಿಕೆ ನಿಷೇಧ ಬಗ್ಗೆ ತಮಿಳುನಾಡು ಮಾದರಿ ಪರಿಶೀಲನೆ : ಸಿದ್ದರಾಮಯ್ಯ