ವದಂತಿ ನಂಬಿ ಮಕ್ಕಳ ಮೃತದೇಹ ಉಪ್ಪಿನಲ್ಲಿ ಮುಚ್ಚಿಟ್ಟ ಪಾಲಕರು!

KannadaprabhaNewsNetwork | Published : Dec 27, 2023 1:30 AM

ಸಾರಾಂಶ

ನೀರಲ್ಲಿ ಮುಳುಗಿ ಸತ್ತವರನ್ನ ಉಪ್ಪಿನಲ್ಲಿ ಮುಚ್ಚಿಟ್ಟರೆ ಬದುಕಬಲ್ಲರು ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದ ಸುದ್ದಿಯಿಂದಾಗಿ ತಾಲೂಕಿನ ಘಾಳಪೂಜಿ ಗ್ರಾಮದ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದ ಇಬ್ಬರು ಮಕ್ಕಳನ್ನು ಪೋಷಕರು ಉಪ್ಪಿನಗುಡ್ಡೆಯಲ್ಲಿ ಇಟ್ಟು ಬದುಕಿಸಲು ವಿಫಲ ಪ್ರಯತ್ನ ನಡೆಸಿದ ವಿಷಯ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ನೀರಲ್ಲಿ ಮುಳುಗಿ ಸತ್ತವರನ್ನ ಉಪ್ಪಿನಲ್ಲಿ ಮುಚ್ಚಿಟ್ಟರೆ ಬದುಕಬಲ್ಲರು ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದ ಸುದ್ದಿಯಿಂದಾಗಿ ತಾಲೂಕಿನ ಘಾಳಪೂಜಿ ಗ್ರಾಮದ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದ ಇಬ್ಬರು ಮಕ್ಕಳನ್ನು ಪೋಷಕರು ಉಪ್ಪಿನಗುಡ್ಡೆಯಲ್ಲಿ ಇಟ್ಟು ಬದುಕಿಸಲು ವಿಫಲ ಪ್ರಯತ್ನ ನಡೆಸಿದ ವಿಷಯ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಭಾನುವಾರ ತಾಲೂಕಿನ ಘಾಳಪೂಜಿ ಗ್ರಾಮದ ಅಯ್ಯನಕೆರೆಯಲ್ಲಿ ಈಜಲು ಹೋಗಿದ್ದ ನಾಗರಾಜ ಲಂಕೇರ (11) ಹೇಮಂತ ಹರಿಜನ (12) ಎಂಬ ಇಬ್ಬರು ಬಾಲಕರು ಕೆರೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದರು.

ಕೆರೆಯಲ್ಲಿ ಮುಳುಗಿ ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ತೆರೆಳಿದ ಪೋಷಕರು ಮಕ್ಕಳ ಮೃತದೇಹವನ್ನು ಹೊರತೆಗೆದು ನಂತರ ಕಳೆದ ಹಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಸುಳ್ಳು ಮಾಹಿತಿ ವಿಡಿಯೋ (ನೀರಲ್ಲಿ ಮುಳುಗಿ ಸತ್ತವರನ್ನು ಉಪ್ಪಿನಲ್ಲಿ ಮುಚ್ಚಿಟ್ಟರೆ ಬದುಕಲಿದ್ದಾರೆ) ನಂಬಿ ಚೀಲಗಟ್ಟಲೇ ಉಪ್ಪಿನಲ್ಲಿ ಸತತ 6 ತಾಸು ಮಕ್ಕಳ ಮೃತದೇಹವನ್ನಿಟ್ಟು ಬದುಕಿಸುವ ಪ್ರಯತ್ನ ಮಾಡಿದ್ದಾರೆ.

6 ತಾಸು ಕಾಯ್ದ ಪೊಲೀಸರು: ಹೋದ ಜೀವವನ್ನು ಬದುಕಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಸಾಮಾಜಿಕ ಜಾಲತಾಣದ ಸುದ್ದಿ ಪೊಲೀಸರನ್ನು ಹೈರಾಣಾಗಿಸಿದೆ. ಒಂದು ಬಾರಿ ಹೋದ ಪ್ರಾಣ ಮರಳಲು ಸಾಧ್ಯವಿಲ್ಲ. ಈ ರೀತಿಯ ಪ್ರಯತ್ನದಿಂದ ಮಕ್ಕಳು ಬದುಕುವುದಿಲ್ಲ ಎಂದು ಕಾಗಿನೆಲೆ ಪೊಲೀಸರು ಪೋಷಕರ ಮನವೊಲಿಸುವ ಪ್ರಯತ್ನಕ್ಕೆ ಮುಂದಾದರೂ ಸಹ ಪ್ರಯೋಜನವಾಗಲಿಲ್ಲ. ಆದರೆ ಪಾಲಕರ ಪ್ರಯತ್ನಕ್ಕೆ ನಿರಾಸೆ ಮಾಡದಂತೆ ಪೊಲೀಸರು ಕಾಯ್ದು ಕುಳಿತಿದ್ದರು.

ಮನವೊಲಿಸಿದ ಸಿಪಿಐ:

ಮಕ್ಕಳ ಮೃತದೇಹಗಳನ್ನು ಉಪ್ಪಿನಲ್ಲಿಟ್ಟಿರುವ ಸುದ್ದಿ ತಿಳಿದು ರಾತ್ರಿ ವೇಳೆಯೇ ಸ್ಥಳಕ್ಕೆ ತೆರಳಿದ ಬ್ಯಾಡಗಿ ಸಿಪಿಐ ಮಹಾಂತೇಶ ಲಂಬಿ ತೆರಳಿ ಪೋಷಕರಿಗೆ ಸಾಕಷ್ಟು ತಿಳುವಳಿಕೆ ಹೇಳಿ ಬಳಿಕ ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಯಿತು. ಮೂಢನಂಬಿಕೆಗಳು ಸಮಾಜದಲ್ಲಿ ಇನ್ನೂ ಜೀವಂತವಾಗಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ವೈರಲ್ ಆಗುತ್ತಿವೆ ಎರಡೂ ಮಕ್ಕಳ ಫೋಟೋ: ಅದೇ ವಿಷಯವಾಗಿ ಮತ್ತೆ ಎರಡೂ ಮಕ್ಕಳ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿವೆ. ಮಕ್ಕಳ ಫೋಟೋದೊಂದಿಗೆ ಉಪ್ಪಿನಲ್ಲಿ ಮುಚ್ಚಿಟ್ಟಿರುವ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ.

ಮೂಢನಂಬಿಕೆಗಳಿಗೆ ಬಲಿಯಾಗದಿರಿ:

ಸಮಾಜದಲ್ಲಿ ಇಂತಹ ನೂರಾರು ಮೂಢನಂಬಿಕೆಗಳು ಇಂದಿಗೂ ಚಾಲ್ತಿಯಲ್ಲಿವೆ. ಅದರಲ್ಲಿ ಪ್ರಾಣಿ, ಪಕ್ಷಿ ಸೇರಿದಂತೆ ನರಬಲಿ ಕೊಡುವ ಪದ್ಧತಿಗಳು ಹೆಚ್ಚು ಸದ್ದು ಮಾಡಿದ್ದವು. ಆದರೆ ಮೃತದೇಹವನ್ನು ಉಪ್ಪಿನಲ್ಲಿ ಮುಚ್ಚಿಟ್ಟರೇ ಮತ್ತೆ ಬದುಕಲಿದ್ದಾರೆ ಎಂಬ ಘಾಳಪೂಜಿ ಗ್ರಾಮದ ಘಟನೆ ಹೊಸದಾಗಿದ್ದು, ಹೋದ ಜೀವ ಮರಳಿಸಲು ಯಾರಿಂದಲೂ ಸಾಧ್ಯವಿಲ್ಲ, ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಬರುವ ಇಂತಹ ಯಾವುದೇ ವಿಷಯಗಳನ್ನು ನಂಬಬಾರದು ಎಂದು ಸಿಪಿಐ ಮಹಾಂತೇಶ ಲಂಬಿ ಮನವಿ ಮಾಡಿದ್ದಾರೆ.

Share this article