ಗೋಕರ್ಣ: ರಾಷ್ಟ್ರ ರಕ್ಷಣೆಗೆ ಸೈನಿಕರು ಎಷ್ಟು ಸಮರ್ಪಣೆಯಿಂದ ಕರ್ತವ್ಯ ನಿರ್ವಹಿಸುತ್ತಾರೆಯೋ ಅಷ್ಟೇ ನಿಷ್ಠೆಯಿಂದ ಪರಿವಾರದವರು ಶ್ರೀಮಠಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ಬಣ್ಣಿಸಿದರು. ಸ್ವಭಾಷಾ ಚಾತುರ್ಮಾಸ್ಯದ ಎರಡನೇ ದಿನವಾದ ಶುಕ್ರವಾರ ಶ್ರೀಪರಿವಾರದಿಂದ ಗುರುಭಿಕ್ಷಾ ಸೇವೆ ಮತ್ತು ಸ್ವರ್ಣಪಾದುಕಾ ಭಿಕ್ಷಾ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀಗಳು, ಸೇನೆ ಇರುವುದರಿಂದ ದೇಶ ನೆಮ್ಮದಿಯಿಂದ ಇರುತ್ತದೆ. ಅಂತೆಯೇ ಪರಿವಾರ ಇರುವುದರಿಂದ ಮಠ ಸುಲಲಿತವಾಗಿ ನಡೆಯುತ್ತದೆ ಎಂದು ವಿಶ್ಲೇಷಿಸಿದರು.
ಈ ತಿಂಗಳಿನಿಂದಲೇ ಆರಂಭವಾಗುವಂತೆ ಶ್ರೀಪರಿವಾರದಲ್ಲಿ ಸೇವೆ ಸಲ್ಲಿಸುವ ಎಲ್ಲರಿಗೂ ಅವರ ಕರ್ತವ್ಯ ಮತ್ತು ಜ್ಯೇಷ್ಠತೆಯನ್ನು ಪರಿಣಿಸಿ ವಾರ್ಷಿಕ ₹೩ರಿಂದ ₹೬ ಲಕ್ಷವರೆಗೆ ಶ್ರೀ ಪೀಠದಿಂದ ಅನುಗ್ರಹದ ರೂಪದಲ್ಲಿ ನೀಡಲಾಗುವುದು. ಪರಿವಾರ ಹಾಗೂ ಈ ಹಿಂದೆ ಪರಿವಾರದಲ್ಲಿ ಸೇವೆ ಸಲ್ಲಿಸಿದವರ ಸಂಪೂರ್ಣ ಹೊಣೆಯನ್ನು ಶ್ರೀಮಠ ವಹಿಸಿಕೊಳ್ಳುತ್ತದೆ ಎಂದು ಘೋಷಿಸಿದರು. ಇದರ ಜತೆಗೆ ಆಚಾರ- ವಿಚಾರ, ಗುಣ-ನಡತೆ ಮತ್ತಿತರ ಅಂಶಗಳನ್ನು ಪರಿಗಣಿಸಿ ವಾರ್ಷಿಕ ಒಂದು ಲಕ್ಷ ರುಪಾಯಿಯನ್ನು ಆಚಾರ ಭತ್ಯೆಯಾಗಿ ವಿತರಿಸಲಾಗುವುದು ಎಂದರು.
ಸಮಾಜ ಪರಿವಾರವನ್ನು ಗೌರವಿಸುವುದು ಎಷ್ಟು ಮುಖ್ಯವೋ, ಪರಿವಾರದಲ್ಲಿರುವವರು ಮಠವನ್ನು ಪ್ರತಿನಿಧಿಸುವವರು ಎಂಬ ಘನತೆ, ಗೌರವ ಕಾಪಾಡಿಕೊಳ್ಳುವುದು ಕೂಡ ಅಗತ್ಯ ಎಂದು ಪ್ರತಿಪಾದಿಸಿದರು.ಚಾತುರ್ಮಾಸ್ಯದಲ್ಲಿ ಯತಿಗಳ ಸೇವೆ ಮಾಡಿದ ಪುಟ್ಟ ಅನಾಥ ಬಾಲಕ ನಾರದ ಪದವಿಗೆ ಏರಲು ಸಾಧ್ಯವಾಯಿತು. ಅಂತೆಯೇ ಪರಿವಾರದವರು ಇಂದು ಆಯೋಜಿಸಿದ್ದ ಸೇವೆ ಅರ್ಥಪೂರ್ಣ. ಹೀಗೆ ಸತ್ಕಾರ್ಯಗಳ ಮೂಲಕ ಪರಿವಾರ ಸಮಾಜಕ್ಕೆ ಆದರ್ಶವಾಗಿ ಬದುಕಬೇಕು ಎಂದು ಸೂಚಿಸಿದರು.