ನರಗುಂದ: ಅನುಷ್ಠಾನ ಅಧ್ಯಾತ್ಮ ಸಾಧನೆ ಮತ್ತು ಆತ್ಮಶುದ್ಧಿಯ ಒಂದು ಮಾರ್ಗವಾಗಿದೆ. ಮಾತನ್ನು ಹಾಗೂ ಆಹಾರವನ್ನು ನಿಯಂತ್ರಿಸುವುದರಿಂದ ಮನಸ್ಸಿನ ಏಕಾಗ್ರತೆ ಹಾಗೂ ಅಂತರ್ಮುಖಿ ಸಾಧನೆಯ ಜತೆಗೆ ಲೋಕಲ್ಯಾಣವನ್ನು ಮಾಡುವುದು ಮೌನಲಿಂಗಾನುಷ್ಠಾನದ ಪ್ರಮುಖ ಉದ್ದೇಶವಾಗಿದೆ ಎಂದು ಗದುಗಿನ ಡಾ. ತೋಂಟದ ಸಿದ್ಧರಾಮ ಶ್ರೀಗಳು ತಿಳಿಸಿದರು.
ಅಪಾರ ಭಕ್ತಸಮೂಹವನ್ನು ಹೊಂದಿರುವ ಅವರು ಕನ್ನಡ ನೆಲ ಜಲ ಭಾಷೆಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. 12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯಾದಾಗ ವಚನ ಸಂರಕ್ಷಣೆಗಾಗಿ ವಚನ ಕಟ್ಟುಗಳನ್ನು ಸಾಗಿಸುವ ಸಂದರ್ಭದಲ್ಲಿ ಜ್ಞಾನನಿಧಿ ಚೆನ್ನಬಸವಣ್ಣನವರು ತಂಗಿ ಹೋದ ಪುಣ್ಯಸ್ಥಳವಾದ ಕಲ್ಲೂರು ಸಿದ್ದೇಶ್ವರ ದೇವಸ್ಥಾನ ಈ ಭಾಗದ ಆರಾಧ್ಯ ದೇವರಾಗಿದೆ ಎಂದರು.
ಚಿಪ್ಪಲಕಟ್ಟಿ ಬೃಹನ್ಮಠದ ಸಿದ್ಧಲಿಂಗ ಶ್ರೀಗಳು ಮಾತನಾಡಿ, ಶ್ರೀಕ್ಷೇತ್ರ ಕಲ್ಲೂರು ಸಿದ್ದೇಶ್ವರ ದೇವಸ್ಥಾನ ಐತಿಹಾಸಿಕ ಪವಿತ್ರ ತಾಣವಾಗಿದೆ. ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಪುಣ್ಯಕ್ಷೇತ್ರದಲ್ಲಿ ಪೂಜ್ಯರು ಮೌನಲಿಂಗಾನುಷ್ಠಾನ ಕೈಗೊಂಡಿರುವುದು ನಮ್ಮೆಲ್ಲರ ಭಾಗ್ಯವಾಗಿದೆ ಎಂದರು.ಭೈರನಹಟ್ಟಿ- ಶಿರೋಳ ಮಠದ ಶಾಂತಲಿಂಗ ಶ್ರೀಗಳು ಮಾತನಾಡಿ, 1924ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿಯವರು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದ್ದರು. ಆದರೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ್ದೆ ಎನ್ನುವಂತೆ ಇಲ್ಲಿಯವರೆಗೂ ಅಧಿಕೃತವಾಗಿ ಠರಾವು ಅಂಗೀಕಾರವಾಗದಿರುವುದು ದುರ್ದೈವದ ಸಂಗತಿ. ಇತ್ತೀಚೆಗೆ ಈ ವಿಷಯವಾಗಿ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದಲ್ಲಿ ಡಾ. ತೋಂಟದ ಸಿದ್ದಲಿಂಗ ಸ್ವಾಮಿಗಳ ಮಾರ್ಗದರ್ಶನದಲ್ಲಿ ಡಾ. ಅಲ್ಲಮಪ್ರಭು ಸ್ವಾಮಿಗಳು ಎಲ್ಲ ಮಠಾದೀಶರನ್ನು, ಕನ್ನಡಪರ ಸಂಘಟನೆಗಳನ್ನು ಒಂದೇ ವೇದಿಕೆಯಲ್ಲಿ ಕರೆತಂದು ಜಾಗೃತಿ ಮೂಡಿಸಿ ಜನಾಂದೋಲನ ಮಾಡಿದ್ದು ಐತಿಹಾಸಿಕ ಕಾರ್ಯವಾಗಿದೆ ಎಂದರು.
ಧಾರವಾಡದ ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಶಶಿಧರ ತೋಡಕರ, ಧಾರವಾಡದ ಜಿಪಂ ಮಾಜಿ ಸದಸ್ಯ ಎ.ಎಂ. ಮನ್ವಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಖ್ಯಾತ ಉದ್ಯಮಿಗಳಾದ ಬಸವರಾಜ ಸಿಂದನೂರ ದಂಪತಿಗಳನ್ನು ಸನ್ಮಾನಿಸಲಾಯಿತು.