ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಸೋಮವಾರ ರಾತ್ರಿ 9 ಗಂಟೆ ಬಳಿಕ ಬಿರುಸುಗೊಂಡ ಮಳೆ ಮಂಗಳವಾರ ಮುಂಜಾನೆ ವೇಳೆಗೆ ಪ್ರವಾಹ ಪರಿಸ್ಥಿತಿ ಉಂಟು ಮಾಡಿದೆ. ವಿವಿಧ ಪ್ರದೇಶಗಳು ಜಲಾವೃತಗೊಂಡಿದ್ದು, ಕುದುರೆಮುಖ-ಕಳಸ ವ್ಯಾಪ್ತಿ ರಾತ್ರಿಯಿಡಿ ಮಳೆಯಿಂದ ಒಮ್ಮಿಂದೊಮ್ಮೆಲೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಬಾಳೆಹೊನ್ನೂರಿನಿಂದ ಕಳಸ-ಹೊರನಾಡು, ಕೊಟ್ಟಿಗೆಹಾರ ಸಂಪರ್ಕ ಕಡಿತಗೊಂಡಿದ್ದು, ಮಾಗುಂಡಿ ಸಮೀಪದ ತೆಪ್ಪದಗಂಡಿ ಮುಖ್ಯರಸ್ತೆ, ಮಹಲ್ಗೋಡು ಸೇತುವೆ ಮೇಲೆ ಭದ್ರಾನದಿ ಪ್ರವಾಹ ಬಂದು ಸಂಪರ್ಕ ಕಡಿತಗೊಂಡಿದೆ.
ಬಾಳೆಹೊನ್ನೂರಿನಿಂದ ಹುಯಿಗೆರೆ ಸಂಪರ್ಕಿಸುವ ಎಲೆಕಲ್ಲು ರಸ್ತೆ ಮೇಲೆಯೂ ಭದ್ರಾನದಿ ನೀರು ಬಂದಿದ್ದು, ಸಂಚಾರ ಬಂದ್ ಆಗಿದೆ. ಹುಯಿಗೆರೆ-ಮಾಗುಂಡಿ ನಡುವಿನ ಹುಲಿಗೆಹಳ್ಳ ಹೊಳೆಯೂ ತುಂಬಿ ಹರಿದ ಪರಿಣಾಮ ಆ ರಸ್ತೆಯು ಬಂದ್ ಆಗಿದೆ. ಬಾಳೆಹೊನ್ನೂರಿನಿಂದ ಎನ್.ಆರ್.ಪುರ-ಶಿವಮೊಗ್ಗ ಸಂಪರ್ಕ ಕಲ್ಪಿಸುವ ವಾಟುಕೊಡಿಗೆ-ಸೀಕೆ ಬಳಿ ಮುಖ್ಯರಸ್ತೆಗೆ ನೀರು ಬಂದಿದ್ದು ಸಂಚಾರ ಕಡಿತಗೊಂಡಿದೆ. ಪಟ್ಟಣದ ಭದ್ರಾ ಎಸ್ಟೇಟ್ ಒಳಗಿನ ಕೂಲಿಲೈನ್‌ಗಳಿಗೆ ತೆರಳುವ ರಸ್ತೆ ಮೇಲೆಯೂ ನೀರು ಬಂದಿದ್ದು ಜನರು ಎಸ್ಟೇಟಿನಿಂದ ಹೊರ ಬರದಂತಾಗಿದೆ.ಬಿ.ಕಣಬೂರು, ಬನ್ನೂರು, ಮಾಗುಂಡಿ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 16 ಮನೆಗಳಿಗೆ ಮಂಗಳವಾರ ಮುಂಜಾನೆ ನಾಲ್ಕು ಗಂಟೆ ವೇಳೆಗೆ ಭದ್ರಾನದಿ ಪ್ರವಾಹ ನುಗ್ಗಿದ್ದು, ಮಹಲ್ಗೋಡು, ಹೊಳೆಬಾಗಿಲು, ಜಕ್ಕಣಕ್ಕಿ, ಬಾಳೆಹೊನ್ನೂರು ಪಟ್ಟಣ ಭಾಗದ ಎಲ್ಲಾ 16 ಕುಟುಂಬಸ್ಥರು ರಾತ್ರೋರಾತ್ರಿ ತಮ್ಮ ಮನೆ ಸಾಮಾನು ಸರಂಜಾಮು ಗಂಟುಮೂಟೆ ಕಟ್ಟಿಕೊಂಡು ಸಂಬಂಧಿಕರ ಮನೆ, ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.
ಪಟ್ಟಣದ ಮೀನು ಮಾರ್ಕೆಟ್ ಸಮೀಪದಲ್ಲಿರುವ ಸಂತೆ ಮಾರುಕಟ್ಟೆ ಸಂಕೀರ್ಣವು ಮುಕ್ಕಾಲು ಭಾಗ ಮುಳುಗಿದ್ದು, ಮೇಲ್ಚಾವಣಿ ಮಾತ್ರ ಗೋಚರವಾಗುತಿತ್ತು. ಪ್ರವಾಹದ ಅಬ್ಬರಕ್ಕೆ ಬಾಳೆಹೊನ್ನೂರು ಪಟ್ಟಣ, ಬನ್ನೂರು, ಮಾಗುಂಡಿ, ಮಹಲ್ಗೋಡು, ಜಕ್ಕಣಕ್ಕಿ, ಬೈರೇಗುಡ್ಡ ಮುಂತಾದ ಕಡೆಗಳಲ್ಲಿ ನೂರಾರು ಎಕರೆ ಅಡಕೆ, ಕಾಫಿ ತೋಟ, ಗದ್ದೆಗಳು ನೀರಿನಿಂದ ಜಲಾವೃತವಾಗಿತ್ತು.
ಇಲ್ಲಿನ ಮೆಸ್ಕಾಂ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾದ ಪರಿಣಾಮ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಾಗುಂಡಿ ಫೀಡರ್‌ನ ಮಾಗುಂಡಿ ಗ್ರಾಪಂ ಹಾಗೂ ಬನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ, ಗಡಿಗೇಶ್ವರ ಫೀಡರ್‌ನ ಬಾಳೆ ಗ್ರಾಪಂ, ಆಡುವಳ್ಳಿ ಗ್ರಾಪಂ, ಬಿ.ಕಣಬೂರು ಗ್ರಾಪಂ ಹಾಗೂ ಕಾನೂರು ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಮೆಸ್ಕಾಂ ಜೆಇ ಗಣೇಶ್ ತಿಳಿಸಿದ್ದಾರೆ.
ಸಮೀಪದ ಖಾಂಡ್ಯ ಹೋಬಳಿಯಲ್ಲಿಯೂ ಮಳೆಯ ಅಬ್ಬರ ಮುಂದುವರೆದಿದ್ದು, ಇತಿಹಾಸ ಪ್ರಸಿದ್ಧ ಖಾಂಡ್ಯ ಮಾರ್ಕಾಂಡೇಶ್ವರ ಸಮೀಪದಲ್ಲಿ ಹರಿಯುವ ಭದ್ರಾನದಿ ಅಪಾಯದಂಚಿನಲ್ಲಿ ಹರಿಯುತ್ತಿದೆ. ದೇವಸ್ಥಾನದ ಸಮೀಪದ ನದಿ ದಂಡೆಯಲ್ಲಿನ ಅಸ್ಥಿವಿಸರ್ಜನೆ ಮಂಟಪ ನೀರಿನಿಂದ ಜಲಾವೃತವಾಗಿದೆ. ಭದ್ರಾನದಿ ಸನಿಹದ ಆನೆಬಿದ್ದ ಹಳ್ಳವು ಅಪಾಯಮಟ್ಟ ಮೀರಿ ಹರಿಯುತ್ತಿದೆ.