ಶಿವಾನಂದ ಗೊಂಬಿ
ಮಾದಕ ವಸ್ತುಗಳ ವಿರುದ್ಧ ಸಮರವನ್ನೇ ಸಾರಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್, ಬರೀ ಮಾದಕ ವಸ್ತುಗಳ ಮಾರಾಟಗಾರರನ್ನು ಪತ್ತೆ ಹಚ್ಚುವುದಷ್ಟೇ ಅಲ್ಲ. ಅವುಗಳನ್ನು ಬಳಸುವವರಿಗೂ ಟ್ರೀಟ್‌ಮೆಂಟ್ ಕೊಡಿಸುವ ಮೂಲಕ ಗಾಂಧಿಗಿರಿ ಪ್ರದರ್ಶಿಸುತ್ತಿದೆ. ಈ ದಂಧೆಯ ಮೂಲವನ್ನೇ ಮರೆತಂತಿದೆ!
ಹುಬ್ಬಳ್ಳಿಗೆ ಎಲ್ಲೆಲ್ಲಿಂದ ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳು ಬರುತ್ತವೆ? ಅವುಗಳ ಮೂಲ ತಡೆಯಲು ಕ್ರಮಗಳೇನು? ಆಯಾ ಠಾಣೆಯ ಪೊಲೀಸರ ಸಹಕಾರ ಇಲ್ಲದೆಯೇ ಈ ದಂಧೆ ನಡೆಯುತ್ತಿದೆಯೇ? ದಂಧೆಯ ಮೂಲಕ್ಕೆ ಕೈ ಹಾಕಿದರೆ ತನ್ನಿಂದ ತಾನೇ ಮಾದಕ ವಸ್ತುಗಳ ಹಾವಳಿ ಕಡಿಮೆಯಾಗುತ್ತೆ.!ಇದು ಪೊಲೀಸ್ ಕಮಿಷನರೇಟ್‌ಗೆ ಮಹಾನಗರದ ಪ್ರಜ್ಞಾವಂತರು ಮಾಡುತ್ತಿರುವ ಒಕ್ಕೊರಲಿನ ಆಗ್ರಹ. ಅನ್ಯರಾಜ್ಯಗಳಿಂದಲೇ ವಿವಿಧ ಬಗೆಯ ಮಾದಕ ವಸ್ತುಗಳು ಬರುತ್ತಲೇ ಇರುತ್ತವೆ. ವಿದೇಶಿ ಮಾದಕ ವಸ್ತುಗಳು ಇಲ್ಲಿ ಬರುವುದು ಕಂಡು ಬರುತ್ತದೆ. ಗಾಂಜಾ ಘಮಲಿನ ಕರಾಮತ್ತು ಅಂತೂ ಹೇಳುವಂತೆಯೇ ಇಲ್ಲ. ಗಾಂಜಾ ಏರಿಸಿ ಹತ್ತು ಹಲವು ಅಪರಾಧ ಪ್ರಕರಣಗಳು ಯುವ ಸಮೂಹ ಭಾಗಿಯಾಗುತ್ತಿರುವುದು ಬಹಿರಂಗ ಸತ್ಯ.
ಹುಬ್ಬಳ್ಳಿಗೆ ಛೋಟಾ ಮುಂಬೈ ಎಂದೇ ಹೆಸರಿದೆ. ನಶೆ ಏರಿಸುವ ಗಾಂಜಾದ ದೊಡ್ಡ ಜಾಲವೇ ಇಲ್ಲಿದೆ. ದಶಕಗಳಿಂದಲೇ ಇಲ್ಲಿ ಗಾಂಜಾ ವಹಿವಾಟು ಎಗ್ಗಿಲ್ಲದೇ ನಡೆಯುತ್ತದೆ. ಗಾಂಜಾ ಮಾರಾಟ ಸೇವನೆ ತಡೆಗಟ್ಟಲು ಪೊಲೀಸ್ ಕಮಿಷನರೇಟ್ ಏನೂ ಕ್ರಮ ಕೈಗೊಂಡಿಲ್ಲ ಅಂತೇನೂ ಇಲ್ಲ. ಆಗಾಗ ದಾಳಿ ಮಾಡುತ್ತದೆ. ಒಂದಿಷ್ಟು ಜನರನ್ನು ಹಿಡಿದು ಕಂಬಿಯೊಳಗೆ ಕಳುಹಿಸುತ್ತದೆ. ಅವರು ಮತ್ತೆ ಕೆಲ ದಿನಗಳ ಬಳಿಕ ಬಂಧನಕ್ಕೊಳಗಾದವರು ಜಾಮೀನಿನ ಮೇಲೆ ಬಿಡುಗಡೆಯಾಗುತ್ತಾರೆ. ಮತ್ತೆ ತಮ್ಮ ಚಾಳಿಯನ್ನು ಮುಂದುವರಿಸುತ್ತಾರೆ. ಆದರೆ ಯಾವ ಪೊಲೀಸ್ ಕಮಿಷನರ್ ಕೂಡ ಮಹಾನಗರ ಬರುವಂತಹ ಗಾಂಜಾದ ಮೂಲ ಯಾವುದು? ಬರುವುದ್ಹೇಗೆ? ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಹೇಗೆ ಬರುತ್ತೆ?
ಹೀಗೆ 5 ಅಥವಾ 10 ಗ್ರಾಂಗಳ ಪ್ಯಾಕೆಟ್‌ಗಳೇ ಕಾಲೇಜ್ ಅಕ್ಕಪಕ್ಕದ ನಿರ್ಜನ ಪ್ರದೇಶಗಳಲ್ಲಿ ಹಾಗೂ ಇಲ್ಲಿನ ಕೆಲ ಬಡಾವಣೆ ಅಥವಾ ಗಲ್ಲಿಗಳಲ್ಲಿ ಮಾರಾಟವಾಗುತ್ತವೆ. ಇಲ್ಲಿಂದಲೇ ಧಾರವಾಡಕ್ಕೂ ರವಾನೆಯಾಗುತ್ತದೆ. ಕೆಲವೊಂದು ಹಬ್ಬ-ಹರಿದಿನಗಳಲ್ಲಿ ಇದರ ಬೆಲೆಯೂ ದುಪ್ಪಟ್ಟಾಗಿರುತ್ತದೆ.
ಪೊಲೀಸ್ ಕಮಿಷನರೇಟ್ ಕಳೆದ ಒಂದು ವಾರದಿಂದ ನಿರಂತರವಾಗಿ ಬೇಟೆಯಾಡುತ್ತಿದೆ. ಪಾಳು ಬಿದ್ದ ಕಟ್ಟಡದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 12 ಜನರನ್ನು, ಅದಕ್ಕಿಂತ ಮೊದಲು 13 ಜನರನ್ನು ಹೀಗೆ ಪದೇ ಪದೇ ದಾಳಿ ನಡೆಸಿ ಬಂಧಿಸುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಆಳಕ್ಕಿಳಿದು ಗಾಂಜಾ ಎಲ್ಲೆಲ್ಲಿಂದ ಬರುತ್ತದೆ. ಅಲ್ಲಿಂದಲೇ ತಡೆಯುವ ಪ್ರಯತ್ನ ನಡೆಯಬೇಕಿದೆ. ಅಂದ ಹಾಗೆ ಗಾಂಜಾ ಘಮಲಿನ ಹಿಂದೆ ದೊಡ್ಡ ದೊಡ್ಡ ಕುಳಗಳ ಕೈ ಇರುವುದನ್ನು ತಳ್ಳಿಹಾಕುವಂತಿಲ್ಲ. ಅವುಗಳನ್ನು ಪತ್ತೆ ಹಚ್ಚಲು ಕಮಿಷನರೇಟ್ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಿದೆ.