ಸೊಳ್ಳೆಗಳ ಹಾವಳಿಗೆ ಹೈರಾಣಾದ ಕವಿತಾಳ ಜನತೆ

KannadaprabhaNewsNetwork | Published : Oct 7, 2023 2:16 AM

ಸಾರಾಂಶ

ಕಣ್ಮುಚ್ಚಿ ಕುಳಿತ ಪಟ್ಟಣ ಪಂಚಾಯತಿ । ಅಧಿಕಾರಿಗಳಿಗೆ ಜನರ ಹಿಡಿಶಾಪ
ಕಣ್ಮುಚ್ಚಿ ಕುಳಿತ ಪಟ್ಟಣ ಪಂಚಾಯತಿ । ಅಧಿಕಾರಿಗಳಿಗೆ ಜನರ ಹಿಡಿಶಾಪ ಕನ್ನಡಪ್ರಭ ವಾರ್ತೆ ಕವಿತಾಳ ಪಟ್ಟಣದಲ್ಲಿ ಸೊಳ್ಳೆಗಳ ಹಾವಳಿ ಮಿತಿ ಮೀರಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಫಾಗಿಂಗ್ ಮಾಡುವುದನ್ನು ನಿರ್ಲಕ್ಷಿಸುತ್ತಿರುವ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಸೊಳ್ಳೆಗಳ ಹಾವಳಿಗೆ ಜನರ ನೆಮ್ಮದಿ ಹಾಳಾಗಿದೆ. ಇನ್ನೊಂದೆಡೆ ಮಲೇರಿಯಾ, ಡೆಂಘೀ ಜ್ವರದಂತಹ ಸಾಂಕ್ರಾಮಿಕ ರೋಗಗಳು ಭೀತಿ ಕೂಡಾ ಸಾರ್ವಜನಿಕರು ಎದುರಿಸುತ್ತಿದ್ದಾರೆ. ಇಲ್ಲಿನ 14 ವಾರ್ಡ್‌ಗಳಲ್ಲೂ ಸ್ವಚ್ಛತೆ ಎಂಬುದು ಮರಿಚಿಕೆಯಾಗಿದ್ದು, ಅಲ್ಲಲ್ಲಿ ನೀರು ನಿಂತು ಚರಂಡಿ ತುಂಬಿ ಹರಿಯುತ್ತಿರುವುದು ಸಾಮಾನ್ಯವಾಗಿದೆ. ಬೀದಿಗಳಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಹಾಗೂ ಇತ್ತೀಚೆಗೆ ಸುರಿದ ಮಳೆಯಿಂದ ಸೊಳ್ಳೆಗಳು ಹೆಚ್ಚಾಗಿದ್ದು, ನಿವಾಸಿಗಳ ಆತಂಕಕ್ಕೆಕಾರಣವಾಗಿದೆ. ಸಂಜೆಯಾಗುತ್ತಲೇ ಮನೆಗಳಿಗೆ ನುಗ್ಗುವ ಸೊಳ್ಳೆಗಳ ಕಾಟದಿಂದ ರಕ್ಷಿಸಿಕೊಳ್ಳಲು ಜನರು ಪರದಾಡುತ್ತಿದ್ದಾರೆ. ಜಾನುವಾರುಗಳಿಗೆ ಸೊಳ್ಳೆ ಕಾಟದಿಂದ ರಕ್ಷಿಸಲು ಸೊಳ್ಳೆ ಪರದೆ ಹಾಕಲಾಗುತ್ತಿದೆ. ರಾತ್ರಿ ವಿದ್ಯುತ್ ಕೈ ಕೊಟ್ಟರಂತೂ ನಿವಾಸಿಗಳಿಗೆ ಜಾಗರಣೆಯೇ ಗತಿಯಾಗಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ವ್ಯವಸ್ಥೆ ಮಾಡುವಂತೆ ಪಪಂ ಅಧಿಕಾರಿಗಳಿಗೆ ಹಲವು ಬಾರಿ ಒತ್ತಾಯಿಸಿದರೂ ಯಾರೊಬ್ಬರೂ ಕ್ರಮ ಕೈಗೊಳ್ಳುತ್ತಿಲ್ಲ, ಫಾಗಿಂಗ್ ಯಂತ್ರಗಳು ಹಾಳಗಿದ್ದು, ದುರಸ್ತಿ ಮಾಡಿಸಬೇಕೆನ್ನುತ್ತ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆಂದು ಪಪಂ ಮಾಜಿ ಸದಸ್ಯ ಮೌನೇಶ ಹಿರೇಕುರಬರ್ ಆರೋಪಿಸಿದ್ದಾರೆ. ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಸೊಳ್ಳೆಗಳ ನಿಯಂತ್ರಣ ಮಾಡುವುದು ಅವಶ್ಯಕವಾಗಿದೆ. ಹೀಗಾಗಿ ಪಾಗಿಂಗ್ ಮಾಡುವಂತೆ ಮಾಹಿತಿ ನೀಡಲಾಗಿದ್ದು, ಜೂನ್ ತಿಂಗಳಿಂದ ಇಲ್ಲಿಯವರೆಗೂ ಎರಡು ಬಾರಿ ಅಧಿಕೃತವಾಗಿ ಲಿಖಿತ ರೂಪದಲ್ಲಿ ಮನವಿ ಮಾಡಲಾಗಿದೆ. ಹಾಳಾದ ಯಂತ್ರಗಳನ್ನು ದುರಸ್ತಿಗೊಳಿಸಲು ರಾಯಚೂರಿನಲ್ಲಿ ವಿಳಾಸವನ್ನೂ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರದೀಪ್ ಕುಮಾರ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪಪಂ ಮುಖ್ಯಾಧಿಕಾರಿ ರವಿ ಎಸ್ ರಂಗಸುಭೆ ಅವರು ಫಾಗಿಂಗ್ ಯಂತ್ರ ಹಾಳಾಗಿದ್ದು, ಅವುಗಳನ್ನು ದುರಸ್ತಿ ಮಾಡಿಸಿ ಫಾಗಿಂಗ್ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಎಲ್ಲ ವಾರ್ಡ್‌ಗಳಲ್ಲಿ ಫಾಗಿಂಗ್ ಮಾಡಲು ಕನಿಷ್ಠ 16 ದಿನ ಬೇಕಾಗುತ್ತದೆ. ಪಪಂ ಅಧಿಕಾರಿಗಳು ಯಂತ್ರಗಳ ದುರಸ್ತಿ ಮಾಡಿಸಲು ಇನ್ನೂ ಮುಂದಾಗಿಲ್ಲ. ಯಂತ್ರ ಹಾಳಾದರೆ ಹೊಸ ಯಂತ್ರ ಖರೀದಿಗೆ ಅವಕಾಶ ಇದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಪಪಂ ಮಾಜಿ ಸದಸ್ಯ ಮೌನೇಶ ಹಿರೇಕುರಬರ್ ಆಕ್ರೋಶ ವ್ಯಕ್ತಪಡಿಸಿದರು.

Share this article