ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಚಿತ್ರದುರ್ಗ ಮಾಜಿ ಮುಖ್ಯಮಂತ್ರಿ, ಹಿರಿಯ ಮುತ್ಸದ್ದಿ ನಾಯಕ ಎಸ್.ನಿಜಲಿಂಗಪ್ಪ ಅವರ ಕರ್ಮ ಭೂಮಿ. ಇಲ್ಲಿನ ಜನ ನನ್ನನ್ನು ಕೈ ಬಿಡಲಿಲ್ಲ. ಮತ ಹಾಕಿ ಆಶೀರ್ವಾದ ಮಾಡಿದ್ದಾರೆ. ಅವರಿಗೆಲ್ಲ ನಾನು ಋಣಿಯಾಗಿದ್ದೇನೆ ಎಂದು ಚಿತ್ರದುರ್ಗ ಲೋಕಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದ ಗೋವಿಂದ ಕಾರಜೋಳ ಹೇಳಿದರು.ಫಲಿತಾಂಶ ಪ್ರಕಟವಾದ ನಂತರ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಸಂಕಷ್ಟ ಪರಿಸ್ಥಿತಿಯಲ್ಲಿ ನಿಜಲಿಂಗಪ್ಪ ಅವರನ್ನು ಬಾಗಲಕೋಟೆ ಜನ ಅವಿರೋಧ ಆಯ್ಕೆ ಮಾಡಿ ಮುಖ್ಯಮಂತ್ರಿಯನ್ನಾಗಿಸಿದ್ದರು. ಅದೇ ರೀತಿ ಬಾಗಲಕೋಟೆಯಿಂದ ಇಲ್ಲಿಗೆ ಬಂದ ನನ್ನನ್ನು ಈ ನೆಲದ ಜನ ಗೆಲ್ಲಿಸಿ ಸಂಸತ್ ಗೆ ಕಳಿಸಿದ್ದಾರೆ. ಗೆಲವಿನ ಶ್ರೇಯಸ್ಸು, ಮತದಾರರು ಹಾಗೂ ಪ್ರಧಾನಿ ಮೋದೀಜಿಗೆ ಸಲ್ಲಿಸುವುದಾಗಿ ಹೇಳಿದರು.
ಚುನಾವಣೆಗೆ ಸ್ಪರ್ಧಿಸಲು ಬಂದಾಗ ಕೆಲವರು ಹೊರಗಿನವರು ಎಂಬ ಹಣೆ ಪಟ್ಟಿ ಕಟ್ಟಲು ಪ್ರಯತ್ನಸಿದ್ರು. ಅದನ್ನು ಅಳಿಸಿ ಜನರ ವಿಶ್ವಾಸ ಗಳಿಸಲು ನಮ್ಮ ನಾಯಕರು ಪ್ರಯತ್ನ ಹೆಚ್ಚಿದೆ.ಕೆಲವರು ಅವರ ಸ್ವಾರ್ಥಕ್ಕೋಸ್ಕರ ಟಿಕೆಟ್ ಘೋಷಣೆ ಆದಾಗ ಗಲಾಟೆ ಮಾಡಿದ್ರು ಅಂಥವರಿಗೆ ಈ ಫಲಿತಾಂಶವೇ ಉತ್ತರ ನೀಡಿದೆ. ನಾನು ಹೊರಗಿನವನಲ್ಲ. ಭದ್ರಾ ಮೇಲ್ದಂಡೆ ಯೋಜನೆ ಬರುವ ಕೃಷ್ಣಕೊಳ್ಳದ ಪ್ಯಾಪ್ತಿಯವನೆಂದು ಪುನರುಚ್ಛರಿಸಿದರು.ನಮ್ಮದು ರಾಷ್ಟ್ರೀಯ ಪಕ್ಷ ನಮ್ಮ ನಾಯಕರ ತೀರ್ಮಾನಕ್ಕೆ ಬದ್ಧ. ಮಂತ್ರಿ ಸ್ಥಾನ ಅಥವ ಏನೇ ಜವಾಬ್ದಾರಿ ಕೊಟ್ಟರೂ ಸಮರ್ಥವಾಗಿ ನಿಭಾಯಿಸುವೆ. ಯಾವುದೋ ಕಾರಣಕ್ಕೆ ನಮ್ಮ ಲೆಕ್ಕಾಚಾರ ಫಲಿತಾಂಶ ಕಡಿಮೆ ಆಗಿದೆ. ಈವಾಗ ಅದನ್ನೆಲ್ಲ ನಾವು ಲೆಕ್ಕ ಹಾಕುವುದು ಬೇಡ.ಕಾಂಗ್ರೆಸ್ ನವರು ಯಾವಾಗಲೂ ಜನರಿಗೆ ಮೋಸ ಮಾಡಿಯೇ ಅಧಿಕಾರ ಕ್ಕೆ ಬಂದಿದ್ದಾರೆ. ಕೇಂದ್ರದಲ್ಲಿ ನಮ್ಮದೇ ಸರ್ಕಾರ ಬರಲಿದೆ ಹಿಂಬಾಗಿಲಿನಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಫಲಿಸಲ್ಲ. ಚಿತ್ರದುರ್ಗ ಜಿಲ್ಲೆಗೆ ನೀರಾವರಿ ಯೋಜನೆ ಜಾರಿಗೆ ನನ್ನ ಮೊದಲ ಆದ್ಯತೆ ನೀಡುವುದಾಗಿ ಕಾರಜೋಳ ಹೇಳಿದರು.