ಸಂವಿಧಾನದಿಂದ ಬದುಕು ಕಟ್ಟಿಕೊಂಡ ದೇಶದ ಜನತೆ

KannadaprabhaNewsNetwork |  
Published : Apr 29, 2024, 01:32 AM ISTUpdated : Apr 29, 2024, 01:33 AM IST
೨೮ಬಿಹೆಚ್‌ಆರ್ ೧: ಬಾಳೆಹೊನ್ನೂರು ಸಮೀಪದ ಕಡ್ಲೇಮಕ್ಕಿಯಲ್ಲಿ ಕುವೈತ್ ಉದ್ಯಮಿ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ ನೂತನವಾಗಿ ನಿರ್ಮಿಸಿಕೊಟ್ಟಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಶಾಸಕ ಟಿ.ಡಿ.ರಾಜೇಗೌಡ ಅನಾವರಣಗೊಳಿಸಿದರು. ಸದಾಶಿವ, ಚಂದ್ರಮ್ಮ, ಎಂ.ಎಸ್.ಅರುಣೇಶ್, ಓ.ಡಿ.ಸ್ಟೀಫನ್, ಮಹಮ್ಮದ್ ಹನೀಫ್, ನಟರಾಜ್ ಇದ್ದರು. | Kannada Prabha

ಸಾರಾಂಶ

ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ದೇಶದ ಕೋಟ್ಯಂತರ ಜನ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ ಎಂದು ಕೆಆರ್‌ಇಡಿಎಲ್ ಅಧ್ಯಕ್ಷ, ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಕಡ್ಲೇಮಕ್ಕಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ದೇಶದ ಕೋಟ್ಯಂತರ ಜನ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ ಎಂದು ಕೆಆರ್‌ಇಡಿಎಲ್ ಅಧ್ಯಕ್ಷ, ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಎನ್.ಆರ್.ಪುರ ರಸ್ತೆ ಕಡ್ಲೇಮಕ್ಕಿಯಲ್ಲಿ ಕುವೈತ್ ಉದ್ಯಮಿ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ ಅವರು ನೂತನವಾಗಿ ನಿರ್ಮಿಸಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಭಾನುವಾರ ಅನಾವರಣಗೊಳಿಸಿ ಮಾತನಾಡಿದರು.ದೇಶದಲ್ಲಿ ಇಂದು ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ಹೋಗಲಾಡಿಸಲು ಅಂಬೇಡ್ಕರ್ ರಚಿಸಿದ ಸಂವಿಧಾನ ಕಾರಣ. ದೇಶದ ಪ್ರತಿಯೊಬ್ಬರು ಸಂವಿಧಾನ ಅದರದ್ದೇ ಆದ ಹಕ್ಕು ನೀಡಿದ್ದು, ಇದು ಅಂಬೇಡ್ಕರ್ ಅವರಿಂದ ಮಾತ್ರ ಸಾಧ್ಯ ಎಂದರು.

ಸಂವಿಧಾನದ ಚೌಕಟ್ಟಿನಲ್ಲಿ ಮಾನವೀಯ ಮೌಲ್ಯ ಬೆಳೆದು ಬರಬೇಕಿದೆ. ಸಂವಿಧಾನ ಓದಿದರೆ ಮಾತ್ರ ದೇಶಕ್ಕೆ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯ. ಇಂದು ಕೆಲವೆಡೆ ಜಾತಿ, ಧರ್ಮ, ಮತಗಳ ನಡುವೆ ವಿಷಬೀಜ ಬಿತ್ತಿ ಶಾಂತಿ ಕದಡಲು ಕೆಲವರು ಯತ್ನಿಸುತ್ತಿದ್ದು, ದೇಶದಲ್ಲಿ ಸ್ವಾರ್ಥ ರಾಜಕಾರಣ, ಅಧಿಕಾರಕ್ಕಾಗಿ ಕೆಲವರು ಮುನ್ನುಗ್ಗುತ್ತಿದ್ದಾರೆ. ಇದಕ್ಕಾಗಿ ಕೆಲವರು ಮತ ಮಾರಾಟ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಎಂದರು.ಕುವೈತ್‌ನ ಉದ್ಯಮಿ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ ಅವರು ಅಂಬೇಡ್ಕರ್ ಮೇಲಿನ ಗೌರವದಿಂದ ಕ್ಷೇತ್ರದಲ್ಲಿಯೇ ಪ್ರಥಮ ಬಾರಿಗೆ ಅವರ ಪುತ್ಥಳಿ ನಿರ್ಮಿಸಿ ಅನಾವರಣಗೊಳಿಸಿರುವುದು ಶ್ಲಾಘನೀಯ. ವಿದೇಶದಲ್ಲಿದ್ದರೂ ಸ್ವಗ್ರಾಮದ ಬಗ್ಗೆ ಅಪಾರ ಕಾಳಜಿ, ಅಭಿಮಾನ ಹೊಂದಿರುವ ಕ್ಲಿಫರ್ಡ್ ಅವರು ನೆರೆ, ಕೊರೋನಾ ಸಂದರ್ಭದಲ್ಲಿ ಹಲವು ಸಮಾಜಮುಖಿ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.ಹಾವೇರಿ ಸಾಮಾಜಿಕ ಕಾರ್ಯಕರ್ತೆ ಕೆ.ಸಿ.ಅಕ್ಷತಾ ಮಾತನಾಡಿ, ನಮ್ಮ ಬದುಕಿಗೆ ಘನತೆ, ಗೌರವ ತಂದಿರುವುದು ಡಾ.ಬಿ.ಆರ್.ಅಂಬೇಡ್ಕರ್ , ಇತಿಹಾಸ, ಸಂವಿಧಾನ ತಾಯಿ ಗರ್ಭ ಇದ್ದ ಹಾಗೆ. ಅದನ್ನು ಎಂದಿಗೂ ತಿರುಚಲು ಸಾಧ್ಯವಿಲ್ಲ. ಆದರೆ ಇಂದು ಇತಿಹಾಸ, ಸಂವಿಧಾನವನ್ನು ತಿರುಚುವ ಪ್ರಯತ್ನ ನಡೆಯುತ್ತಿದೆಡೆಂದು ವಿಷಾಧಿಸಿದರು.ಅಂಬೇಡ್ಕರ್ ಅವರ ಹೋರಾಟ, ಸಂವಿಧಾನದ ಫಲವಾಗಿ ಇಂದು ನಾವು ಎಲ್ಲ ಸುಖ, ಗೌರವಗಳನ್ನು ಪಡೆಯುತ್ತಿ ದ್ದೇವೆ. ಹಾಗಾಗಿ ಅವರ ಶ್ರಮ, ಹೋರಾಟ, ಇತಿಹಾಸ ತಿಳಿದುಕೊಳ್ಳಬೇಕಿದೆ. ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿಯೇ ಲೋಕಸಭೆ, ವಿಧಾನಸಭೆ, ಜಿಪಂ, ತಾಪಂ ಚುನಾವಣೆ ಘೋಷಿಸಿ ನೀತಿ ಸಂಹಿತೆ ನೆಪವೊಡ್ಡಿ ಅಂಬೇಡ್ಕರ್ ವಿಚಾರಧಾರೆಗಳು ಜನರಿಗೆ ತಲುಪದಂತೆ ಮನುವಾದಿಗಳು ಕುತಂತ್ರ ಮಾಡುತ್ತಿದ್ದಾರೆ. ಅಂಬೇಡ್ಕರ್ ಜಯಂತಿ ಆಳುವ ವ್ಯವಸ್ಥೆಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಭೀಮ್ ಆರ್ಮಿ ಮುಖಂಡ ನಾಗರಾಜ, ಪ್ರಾಚಾರ್ಯ ಕೆ.ಆರ್. ಬೂದೇಶ್, ನಿವೃತ್ತ ಶಿಕ್ಷಕ ನಿರ್ವಾಣಪ್ಪ, ಗ್ರಾಪಂ ಅಧ್ಯಕ್ಷ ಸದಾಶಿವ, ಜಿಪಂ ಮಾಜಿ ಸದಸ್ಯೆ ಚಂದ್ರಮ್ಮ, ಗ್ರಾಪಂ ಸದಸ್ಯರಾದ ಎಂ.ಎಸ್.ಅರುಣೇಶ್, ಇಬ್ರಾಹಿಂ ಶಾಫಿ, ಅಂಬುಜಾ, ಮಹೇಶ್ ಆಚಾರ್ಯ, ಮಹಮ್ಮದ್ ಜುಹೇಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಗೇರುಬೈಲು, ಆಟೋ ಸಂಘದ ಅಧ್ಯಕ್ಷ ಸಂದೇಶ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್, ಜಗದೀಶ್ ಅರಳೀಕೊಪ್ಪ, ಓ.ಡಿ.ಸ್ಟೀಫನ್ ಮತ್ತಿತರರು ಹಾಜರಿದ್ದರು.

೨೮ಬಿಹೆಚ್‌ಆರ್ ೧:

ಬಾಳೆಹೊನ್ನೂರು ಸಮೀಪದ ಕಡ್ಲೇಮಕ್ಕಿಯಲ್ಲಿ ಕುವೈತ್ ಉದ್ಯಮಿ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ ನೂತನವಾಗಿ ನಿರ್ಮಿಸಿಕೊಟ್ಟಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಶಾಸಕ ಟಿ.ಡಿ.ರಾಜೇಗೌಡ ಅನಾವರಣಗೊಳಿಸಿದರು. ಸದಾಶಿವ, ಚಂದ್ರಮ್ಮ, ಎಂ.ಎಸ್.ಅರುಣೇಶ್, ಓ.ಡಿ.ಸ್ಟೀಫನ್, ಮಹಮ್ಮದ್ ಹನೀಫ್, ನಟರಾಜ್ ಇದ್ದರು.

PREV

Recommended Stories

ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌