ಹೊಸಪೇಟೆ: ವಿಜಯನಗರ ಜಿಲ್ಲೆಯ ಜನರು ಸದೃಢ ಪ್ರಜಾಪ್ರಭುತ್ವಕ್ಕಾಗಿ ಮಾನವ ಸರಪಳಿ ನಿರ್ಮಿಸಿ, ಜಯಘೋಷ ಮೊಳಗಿಸಿ, ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಜಿಲ್ಲೆಯಲ್ಲಿ 40 ಕಿ.ಮೀ.ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ, ಕಾಲೇಜು ಮಕ್ಕಳು ಸೇರಿ 40 ಸಾವಿರ ಜನರು ಭಾಗಿಯಾಗಿದ್ದರು.
ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಭಾನುವಾರ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಮಾನವ ಸರಪಳಿ ಕಾರ್ಯಕ್ರಮವು ಹೊಸ ಇತಿಹಾಸ ಸೃಷ್ಟಿಸಿತು. ಪೂರ್ವ ನಿಗದಿಯಂತೆ ಮಾನವ ಸರಪಳಿ ಮಾರ್ಗದುದ್ದಕ್ಕೂ ಯಶಸ್ವಿಯಾಗಿ ನೆರವೇರಿತು.40 ಕಿಮೀ ಉದ್ದ ಮಾನವ ಸರಪಳಿ:
ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ತಂಡೋಪತಂಡವಾಗಿ ಆಗಮಿಸಿ ಪ್ರಜಾಪ್ರಭುತ್ವ ದಿನದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸುವ ಕಾರ್ಯಕ್ರಮಕ್ಕೆ ಕೈಜೋಡಿಸಿದರು.ವಿಜಯನಗರ, ಕೊಪ್ಪಳ ಜಿಲ್ಲೆಗಳ ಗಡಿ ಭಾಗದ ರಾಷ್ಟ್ರೀಯ ಹೆದ್ದಾರಿ 50ರ ಟಿಬಿಡ್ಯಾಂನ ಮೊದಲನೇ ಸೇತುವೆಯಿಂದ ಭುವನಹಳ್ಳಿವರೆಗೆ ಸುಮಾರು 40 ಕಿ.ಮೀ. ಉದ್ದ ಮಾನವ ಸರಪಳಿಯನ್ನು ನಿರ್ಮಿಸಿ ವಿಜಯನಗರ ಜಿಲ್ಲೆಯ ಜನರು ಹೊಸ ಇತಿಹಾಸ ಬರೆದರು.
ಈ ಐತಿಹಾಸಿಕ ಮಾನವ ಸರಪಳಿಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಗಣ್ಯರು, ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಎಲ್ಲಾ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಕಾರ್ಮಿಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.ಸಂವಿಧಾನ ಪೀಠಿಕೆ ವಾಚನ:
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ಇದೇ ವೇಳೆ, ಸಂವಿಧಾನ ಪೀಠಿಕೆಯ ವಾಚನ ಕಾರ್ಯಕ್ರಮಕ್ಕೆ ಡಾ.ಬಿ. ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಸಿಗೆ ನೀರೆರೆಯುವ ಮೂಲಕ ಶಾಸಕ ಎಚ್.ಆರ್. ಗವಿಯಪ್ಪ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಶಾಸಕ ಗವಿಯಪ್ಪ, ಜನಾಡಳಿತ ಜಾರಿಗೊಳಿಸಿದ ಪ್ರಜಾಪ್ರಭುತ್ವವು ಅತ್ಯಂತ ದೊಡ್ಡ ಶಕ್ತಿಯಾಗಿದೆ. ಎಲ್ಲರಿಗೂ ಸಮಾನವಾಗಿ ಬದುಕುವ ಸ್ವಾತಂತ್ರ‍್ಯದ ಹಕ್ಕನ್ನು ಸಂವಿಧಾನ ನೀಡಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯ, ಮೌಲ್ಯಗಳನ್ನು ಎತ್ತಿ ಹಿಡಿಯೋಣ ಎಂದರು.
ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿ, ಸಾರ್ವಜನಿಕರಿಗೆ ವಿಶೇಷವಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ರಾಜ್ಯ ಸರ್ಕಾರ ಬೀದರ್ ಜಿಲ್ಲೆಯ ಬಸವಕಲ್ಯಾಣದಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ಕಾರ್ಯಕ್ರಮ ರೂಪಿಸಿದೆ ಎಂದರು.ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಮಾತನಾಡಿ, ರಾಜ್ಯದಲ್ಲಿ ಸುಮಾರು 2500 ಕಿ.ಮೀ. ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮವು ಮಹತ್ತರವಾದುದು. ಕಾರ್ಯಕ್ರಮಕ್ಕೆ ದಾರಿಯುದ್ದಕ್ಕೂ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಮಾನವ ಸರಪಳಿ ಸಾಲಿನಲ್ಲಿ ನಿಂತಿರುವುದನ್ನು ಕಂಡು ಸಂತಸವಾಯಿತು ಎಂದರು.
ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆ ಬೋಧಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಪ್ರಾಸ್ತಾವಿಕ ಮಾತನಾಡಿದರು.ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಮಹಮದ್ ಇಮಾಮ್ ನಿಯಾಜಿ, ಜಿಪಂ ಸಿಇಒ ಅಕ್ರಂ ಶಾ, ಎಸ್ಪಿ ಬಿ.ಎಲ್. ಶ್ರೀಹರಿಬಾಬು, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಮುಖಂಡರಾದ ಸಿದ್ದಾರ್ಥ ಸಿಂಗ್, ಗಾಳೆಪ್ಪ, ಮರಡಿ ಜಂಬಯ್ಯ ನಾಯಕ, ಬಿಸಾಟಿ ತಾಯಪ್ಪ ನಾಯಕ, ಬಣ್ಣದಮನೆ ಸೋಮಶೇಖರ್, ನಿಂಬಗಲ್ ರಾಮಕೃಷ್ಣ, ದಾದಾಪೀರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರು, ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
ಗಮನ ಸೆಳೆದ ವೇಷಧಾರಿ ಮಕ್ಕಳು:ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ವೇಷ ಧರಿಸಿದ ಮಕ್ಕಳು ಎಲ್ಲರ ಗಮನ ಸೆಳೆದರು. ನಗರದ ಅಂಬೇಡ್ಕರ್ ವೃತ್ತದಲ್ಲಿ ನಂದಿಕೋಲು, ಹಗಲುವೇಷ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಪಾಲ್ಗೊಂಡು ಹಬ್ಬದ ವಾತಾವರಣ ಸೃಷ್ಟಿಸಿದ್ದವು. ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಮತ್ತಿತರರು ಭಾಗಿಯಾಗಿದ್ದರು.