ಮತದಾನದಿಂದ ದೂರ ಉಳಿದ ವಿಠಲಾಪೂರದ ಜನತೆ

KannadaprabhaNewsNetwork | Published : May 8, 2024 1:09 AM

ಸಾರಾಂಶ

ತಾಲೂಕಿನ ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಡಾ. ಕಾವೇರಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗದ ಹಿನ್ನೆಲೆ ತಾಲೂಕಿನ ವಿಠಲಾಪೂರ ಗ್ರಾಮಸ್ಥರು ಮತದಾನದಿಂದ ದೂರ ಉಳಿದರು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ತಾಲೂಕಿನ ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಡಾ. ಕಾವೇರಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗದ ಹಿನ್ನೆಲೆ ತಾಲೂಕಿನ ವಿಠಲಾಪೂರ ಗ್ರಾಮಸ್ಥರು ಮತದಾನದಿಂದ ದೂರ ಉಳಿದರು.

ಕಳೆದ ಏ. 30ರಂದು ರಾತ್ರಿ ತಾಲೂಕಿನ ವಿಠಲಾಪೂರದ ಗರ್ಭಿಣಿಯೊಬ್ಬರು ತಾವರಗೇರಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಅಲ್ಲಿನ ವೈದ್ಯೆ ಡಾ. ಕಾವೇರಿ ನಿರ್ಲಕ್ಷತನದಿಂದ ಮೃತಪಟ್ಟಿದ್ದಾರೆ. ಅವರನ್ನು ವರ್ಗಾವಣೆ ಮಾಡಬೇಕು ಎಂದು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದರು. ಅಧಿಕಾರಿಗಳು ಹಾಗೂ ತಹಸೀಲ್ದಾರರು ಭೇಟಿ ನೀಡಿ ಸೂಕ್ತ ಕ್ರಮಕ್ಕೆ ಮುಂದಾಗುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಅಂತ್ಯಗೊಳಿಸಿದ್ದರು. ಸೂಕ್ತ ಕ್ರಮಕ್ಕೆ ಮುಂದಾಗದ ಹಿನ್ನೆಲೆ ಇಂದು ಮತದಾನ ಬಹಿಷ್ಕಾರ ಮಾಡಿದ್ದಾರೆ.

ಅಧಿಕಾರಿಗಳ ಭೇಟಿ:ಮತದಾನ ಬಹಿಷ್ಕಾರ ವಿಷಯ ತಿಳಿದ ತಹಸೀಲ್ದಾರರು, ಸಿಪಿಐ, ತಾಪಂ ಇಒ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರನ್ನು ಮನವೊಲಿಸುವ ಪ್ರಯತ್ನ ಮಾಡಿದರೂ ಸಹಿತ ಗ್ರಾಮಸ್ಥರು ಮೊದಲು ನ್ಯಾಯ ಕೊಡಿಸಿ ವರ್ಗಾವಣೆಗೆ ಕೇವಲ ಐದು ನಿಮಿಷ ಸಾಕು ನಂತರ ನಾವು ಮತದಾನ ಮಾಡುತ್ತೇವೆ ಎಂದು ಆಕ್ರೋಶಭರಿತರಾಗಿ ಹೇಳಿದರು. ಈ ವಿಠಲಾಪೂರ ಗ್ರಾಮದ ಒಟ್ಟು ಮತದಾನ 863 ಇದ್ದು, ಇದರಲ್ಲಿ 9 ಮತಗಳು ಅಂಚೆ ಮತದಾನದ ಮೂಲಕ ಚಲಾವಣೆಗೊಂಡಿವೆ.

ಒಂದೇ ಕುಟುಂಬದ 25 ಜನರಿಂದ ಮತದಾನ:

ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ಜಿಗೇರಿ ಮನೆತನದ ಒಂದೇ ಕುಂಟುಬದ 25 ಜನರು ಮತದಾನದ ಹಕ್ಕು ಚಲಾಯಿಸಿದರು.

ಕುಟುಂಬದ ಯುವಕ ನಿಂಗಪ್ಪ ಜಿಗೇರಿ ಮಾತನಾಡಿ, ಸಂವಿಧಾನ ನೀಡಿರುವ ಹಕ್ಕನ್ನು ಚಲಾಯಿಸಿ ಸಮರ್ಥ ವ್ಯಕ್ತಿಯ ಆಯ್ಕೆ ಮಾಡಿಕೊಳ್ಳಲು ಮತದಾನ ಮಾಡಬೇಕು. ಪ್ರಜಾಪ್ರಭುತ್ವದ ಹಬ್ಬದಲ್ಲಿ ಮನೆಯವರೊಂದಿಗೆ ಚಲಾಯಿಸಿರುವುದು ಒಳ್ಳೆಯ ಅನುಭವ ಮೂಡಿತು.

ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡು, ಮೊದಲ ಬಾರಿಗೆ ನನ್ನ ಹಕ್ಕು ಚಲಾಯಿಸಿದ್ದೇನೆ. ದೇಶದ ಅಭಿವೃದ್ಧಿ, ಸುರಕ್ಷತೆ ಮನದಲ್ಲಿಟ್ಟುಕೊಂಡು ಸಮರ್ಥ ಅಭ್ಯರ್ಥಿಗೆ ಮತ ನೀಡಿದ್ದೇವೆ ಎಂಬ ಆತ್ಮತೃಪ್ತಿ ನಮಗೆ ಹಾಗೂ ನಮ್ಮ ಕುಟುಂಬದವರಿಗೆ ಇದೆ ಎಂದರು.

Share this article