ಕೃಷ್ಣಮಠದ ರಾಜಾಂಗಣದಲ್ಲಿ ಉಡುಪಿ ಶಾರದೋತ್ಸವ - ಉಡುಪಿ ದಸರಾವನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಿದರು.
ವೈಭವದ ಉಡುಪಿ ದಸರಾಕ್ಕೆ ಪುತ್ತಿಗೆ ಶ್ರೀಗಳಿಂದ ಚಾಲನೆಕನ್ನಡಪ್ರಭ ವಾರ್ತೆ ಉಡುಪಿದಸರಾ ಎಂದರೆ ಪರಿಪೂರ್ಣ ಹಬ್ಬ, ಎಲ್ಲ ದೇವತೆಗಳಿಗೆ ಪೂಜೆ ಸಲ್ಲುವ ಏಕೈಕ ಹಬ್ಬ ಇದು. ಅದರಲ್ಲೂ ಉಡುಪಿಯ ದಸರಾ ದಶಮ ವರ್ಷಗಳನ್ನು ಪೂರ್ಣಗೊಳಿಸಿದ್ದು, ಸಾಂಸ್ಕೃತಿಕ - ಧಾರ್ಮಿಕ ರಾಜಧಾನಿಯಾಗಿರುವ ಉಡುಪಿಯು ಸಾಂಸ್ಕೃತಿಕವಾಗಿ ಪರಿಪೂರ್ಣವಾಗಿದೆ ಎಂದರ್ಥ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.ಅವರು ಸೋಮವಾರ ಸಂಜೆ ಕೃಷ್ಣಮಠದ ರಾಜಾಂಗಣದಲ್ಲಿ ಉಡುಪಿ ಶಾರದೋತ್ಸವ - ಉಡುಪಿ ದಸರಾವನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಯಾಗಿದ್ದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರ ನಡೆಸುವವರಿಗೆ ತಕ್ಕ ಉತ್ತರ ನೀಡುವ ಕಾಲ ಬಂದಿದೆ. ಅದಕ್ಕೆ ಹಿಂದುಗಳು ಒಗ್ಗಟ್ಟಾಗಬೇಕಾಗಿದೆ. ದಸರಾದಂತಹ ಕಾರ್ಯಕ್ರಮಗಳು ಹಿಂದುಗಳ ಒಗ್ಗಟ್ಟನ್ನು ಹೆಚ್ಚಿಸುತ್ತವೆ ಎಂದರು.
ಪರ್ಯಾಯ ಪುತ್ತಿಗೆ ಮಠದ ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಕರ್ನಾಟಕ ಬ್ಯಾಂಕ್ ಉಡುಪಿ ಶಾಖಾ ಪ್ರಬಂಧಕ ಚಂದ್ರಶೇಖರ ಆಳ್ವಾ ಶುಭಾಶಂಸನೆಗೈದರು.ಇದೇ ಸಂದರ್ಭದಲ್ಲಿ ಶಾರದೆಯ ಚಿತ್ರ ಬರೆಯುವ ಸ್ಪರ್ಧೆಯ ವಿಜೇತರಿಗೆ ಪರ್ಯಾಯ ಶ್ರೀಪಾದರು ಬಹುಮಾನಗಳನ್ನು ವಿತರಿಸಿದರು ಮತ್ತು ತೀರ್ಪುಗಾರರನ್ನು ಗೌರವಿಸಿದರು. ಉಡುಪಿ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ಬೈಕಾಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಭಟ್, ರಾಧಾಕೃಷ್ಣ, ತಾರಾ ಉಮೇಶ್ ಆಚಾರ್ಯ, ಕೋಶಾಧಿಕಾರಿ, ಸತೀಶ್ ಕುಮಾರ್ ಸಹಕರಿಸಿದರು. ಸಂತೋಷ್ ಶೆಟ್ಟಿ ಎಳ್ಳಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.