ಖಾಂಡ್ಯ ಪ್ರವೀಣ್ ವಿರುದ್ಧ ದೂರು ನೀಡಿದ ದಲಿತ ಯುವಕ ನಾಪತ್ತೆ

KannadaprabhaNewsNetwork | Published : May 1, 2024 1:17 AM

ಸಾರಾಂಶ

ಕಳೆದ ಶುಕ್ರವಾರ ಲೋಕಸಭಾ ಚುನಾವಣೆ ಮತದಾನ ಸಂದರ್ಭ ಬಜರಂಗದಳದ ಮಾಜಿ ಮುಖಂಡ ಪ್ರವೀಣ್ ಖಾಂಡ್ಯ ಹಾಗೂ ಬೆಂಬಲಿಗರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿದೂರು ನೀಡಿದ್ದ ಯುವಕ ನಾಪತ್ತೆಯಾಗಿದ್ದು, ಹುಡುಕಿಕೊಡುವಂತೆ ಆತನ ತಾಯಿ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪತ್ತೆ ಮಾಡಿಕೊಡುವಂತೆ ದಲಿತ ಯುವಕ ರಾಜೇಶ್‌ ತಾಯಿ ದೂರು ದಾಖಲುಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಕಳೆದ ಶುಕ್ರವಾರ ಲೋಕಸಭಾ ಚುನಾವಣೆ ಮತದಾನ ಸಂದರ್ಭ ಬಜರಂಗದಳದ ಮಾಜಿ ಮುಖಂಡ ಪ್ರವೀಣ್ ಖಾಂಡ್ಯ ಹಾಗೂ ಬೆಂಬಲಿಗರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿದೂರು ನೀಡಿದ್ದ ಯುವಕ ನಾಪತ್ತೆಯಾಗಿದ್ದು, ಹುಡುಕಿಕೊಡುವಂತೆ ಆತನ ತಾಯಿ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಖಾಂಡ್ಯ ಹೋಬಳಿ ಉಜ್ಜಿನಿ ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರ ಎರಡು ಗುಂಪು ನಡುವೆ ಏ.26ರಂದು ಘರ್ಷಣೆ ನಡೆದಿದ್ದು, ಖಾಂಡ್ಯ ಪ್ರವೀಣ್ ಮೇಲೆ ರಾಡಿನಿಂದ ಹಲ್ಲೆ ಮಾಡಲಾಗಿತ್ತು. ಈ ಕುರಿತು ಬಾಳೆಹೊನ್ನೂರು ಠಾಣೆಯಲ್ಲಿ ಖಾಂಡ್ಯ ಪ್ರವೀಣ್ ಹಲವು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅದೇ ದಿನ ಪ್ರವೀಣ್ ಖಾಂಡ್ಯ ಹಾಗೂ ಬೆಂಬಲಿಗರ ವಿರುದ್ಧವೂ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರತಿದೂರು ದಾಖಲಿಸಲಾಗಿತ್ತು. ಆದರೆ ಇದೀಗ ದಲಿತ ದೌರ್ಜನ್ಯ ಕಾಯ್ದೆಯಡಿ ದೂರು ನೀಡಿರುವ ಯುವಕ ರಾಜೇಶ್ ನಾಪತ್ತೆಯಾಗಿದ್ದಾನೆ ಎಂದು ಯುವಕನ ತಾಯಿ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಏ.26ರಂದು ಸಂಜೆ 4.30ರ ಸುಮಾರಿಗೆ ಮನೆಯಲ್ಲಿ ಮಲಗಿದ್ದ ನನ್ನ ಮಗ ರಾಜೇಶನಿಗೆ (26) ಯಾವುದೋ ಒಂದು ಕರೆ ಬಂದಿದ್ದು, ನಂತರ ಬಿಳಿ ಬಣ್ಣದ ಕಾರಿನಲ್ಲಿ ಸಂತೋಷ್ ಬಾಳೆಗದ್ದೆ ಎಂಬುವರೊಂದಿಗೆ ತೆರಳಿದ್ದಾನೆ. ನಂತರ ಮನೆಗೆ ಮರಳಿ ಬಂದಿಲ್ಲ. ಬಳಿಕ ಆತನ ಫೋನ್‌ ಸ್ವಿಚ್ ಆಫ್ ಆಗಿದೆ. ಬಳಿಕ ಪರಿಚಿತರೊಬ್ಬರು ತಿಳಿಸಿದಂತೆ ಚುನಾವಣೆ ಘರ್ಷಣೆ ಸಂಬಂಧ ಹಸಲರು ಜಾತಿ ನನ್ನ ಮಗನನ್ನು ಬಲವಂತವಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಖಾಂಡ್ಯ ಪ್ರವೀಣ್ ಭಟ್‌ ವಿರುದ್ಧ ದಲಿತ ದೌರ್ಜನ್ಯ ಕೇಸ್ ಕೊಟ್ಟಿರುವುದಾಗಿ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ. --------(ಬಾಕ್ಸ್)----------

60ಕ್ಕೂ ಹೆಚ್ಚು ಜನ ನಾಪತ್ತೆ

ಉಜ್ಜಿನಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಘರ್ಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಾಳೆಹೊನ್ನೂರು ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗುತ್ತಿದ್ದಂತೆ ಎರಡೂ ಗುಂಪಿನ ಕಡೆಯವರು ಎನ್ನಲಾದ 60ಕ್ಕೂ ಹೆಚ್ಚು ಜನ ಗ್ರಾಮ ತೊರೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಂತೆ ಕೇಸಿನಲ್ಲಿ ತಮ್ಮದೂ ಹೆಸರು ಇರಬಹುದು ಎಂಬ ಅನುಮಾನದಿಂದ ಎರಡೂ ಕಡೆಯ ಗುಂಪಿನ ಹಲವರು ಊರು ಬಿಟ್ಟಿದ್ದಾರೆ. ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆನ್ನಲಾಗಿದೆ.

Share this article